ADVERTISEMENT

ರೌಡಿ ಶೀಟರ್‌ ಬಿಕ್ಲು ಶಿವ ಹತ್ಯೆ: ನಾಲ್ಕು ತಾಸು ಶಾಸಕ ಬೈರತಿ ಬಸವರಾಜ್‌ ವಿಚಾರಣೆ

ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 15:21 IST
Last Updated 23 ಜುಲೈ 2025, 15:21 IST
ಬೈರತಿ ಬಸವರಾಜ್‌
ಬೈರತಿ ಬಸವರಾಜ್‌   

ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಅವರು ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಿ ತನಿಖಾಧಿಕಾರಿಗಳ ಎದುರು ತಮ್ಮ ಹೇಳಿಕೆ ದಾಖಲಿಸಿದರು.

ತನಿಖಾಧಿಕಾರಿಯೂ ಆಗಿರುವ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್‌ ಅವರು ಶಾಸಕರಿಗೆ ವಿವಿಧ ಆಯಾಮದಲ್ಲಿ ಪ್ರಶ್ನೆಗಳನ್ನು ಕೇಳಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡರು.

ನಾಲ್ಕು ತಾಸು ನಡೆದ ವಿಚಾರಣೆಯಲ್ಲಿ ಮೊದಲ ಆರೋಪಿ ಜಗದೀಶ್ ಅಲಿಯಾಸ್‌ ಜಗ್ಗನ ನಂಟಿನ ಬಗ್ಗೆ ಪ್ರಶ್ನೆ ಕೇಳಲಾಯಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಜಗ್ಗನಿಗೂ ತಮಗೂ ಸಂಬಂಧ ಇಲ್ಲ ಎಂದು ಈ ಹಿಂದೆ ನಡೆದಿದ್ದ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದೀರಿ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗನ ಜತೆಗಿರುವ ಫೋಟೊಗಳು ಹರಿದಾಡುತ್ತಿವೆ. ತಮ್ಮ ಜನ್ಮದಿನಾಚರಣೆಯಲ್ಲಿ ಜಗ್ಗ ಹೂಗುಚ್ಛ ನೀಡುತ್ತಿರುವ ಫೋಟೊಗಳಿವೆ ಎಂದು ಬೈರತಿ ಬಸವರಾಜ್‌ ಅವರನ್ನು ತನಿಖಾಧಿಕಾರಿ ಪ್ರಶ್ನೆ ಮಾಡಿದರು. ಆ ಫೋಟೊಕ್ಕೆ ಸಂಬಂಧಿಸಿದಂತೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ’ ಎಂದು ಗೊತ್ತಾಗಿದೆ.

‘ಕೊಲೆ ಪ್ರಕರಣದಲ್ಲಿ ಸುಪಾರಿ ನೀಡಿದ್ದ ನಾಲ್ವರನ್ನು ಬಂಧಿಸಲಾಗಿದೆ. ತಮಗೆ ಅವರ ಪರಿಚಯವಿದೆಯೇ ಎಂದು ಪ್ರಶ್ನಿಸಿದರು. ಅವರೆಲ್ಲರೂ ಯಾರು ಎಂಬುದೇ ನನಗೆ ಗೊತ್ತಿಲ್ಲ. ಹತ್ಯೆಯಾದ ಬಿಕ್ಲು ಶಿವ ಅವರ ಪರಿಚಯವೂ ಇಲ್ಲ ಎಂಬುದಾಗಿ ಬೈರತಿ ಬಸವರಾಜ್‌ ಉತ್ತರಿಸಿದ್ದಾರೆ’ ಎಂದು ಗೊತ್ತಾಗಿದೆ.

ಲುಕ್‌ಔಟ್ ನೋಟಿಸ್‌ ಜಾರಿಗೆ ಸಿದ್ಧತೆ: ಪ್ರಕರಣದ ಮೊದಲ ಆರೋಪಿ ಜಗದೀಶ್ ತಲೆಮರೆಸಿಕೊಂಡಿದ್ದು, ವಿಶೇಷ ಪೊಲೀಸ್ ತಂಡವು ತಮಿಳುನಾಡು ಹಾಗೂ ಕೇರಳದಲ್ಲಿ ಹುಡುಕಾಟ ನಡೆಸಿತ್ತು. ಆರೋಪಿಯ ಸುಳಿವು ಸಿಕ್ಕಿಲ್ಲ. ದುಬೈಗೆ ಪರಾರಿಯಾಗಿರುವ ಶಂಕೆಯಿದೆ. ಲುಕ್‌ಔಟ್‌ ನೋಟಿಸ್ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಇದುವರೆಗೂ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ತನಿಖೆಗೆ ಸಹಕಾರ’

‘ತನಿಖಾಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಮತ್ತೊಮ್ಮೆ ವಿಚಾರಣೆಗೆ ಬರುವಂತೆಯೂ ಸೂಚಿಸಿದ್ದಾರೆ. ಆಗಲೂ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ’ ಎಂದು ಬೈರತಿ ಬಸವರಾಜ್ ಪ್ರತಿಕ್ರಿಯಿಸಿದರು. ‘ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಯಾರು ಎಂಬುದೇ ಗೊತ್ತಿಲ್ಲ. ಸಾಕಷ್ಟು ಜನರು ಬಂದು ನನ್ನ ಜತೆಗೆ ಫೋಟೊ ತೆಗೆಸಿಕೊಳ್ಳುತ್ತಾರೆ. ಕೊಲೆಯಾದ ಶಿವಪ್ರಕಾಶ್ ಆಗಲಿ ಜಮೀನು ವಿಚಾರಗಳಾಗಲಿ ನನಗೆ ಗೊತ್ತಿಲ್ಲ. ನಾನೊಬ್ಬ ಪ್ರಾಮಾಣಿಕ ರಾಜಕಾರಣಿ. ನನ್ನ ಮೇಲಿನ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ದುರುದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸುವ ಯತ್ನ ಮಾಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.