ADVERTISEMENT

ಕಾಂಗ್ರೆಸ್‌ ಕೋಟೆ ಭೇದಿಸಿದ ಜೆಡಿಎಸ್‌

ಬಿನ್ನಿಪೇಟೆ ವಾರ್ಡ್‌: ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 20:08 IST
Last Updated 20 ಜೂನ್ 2018, 20:08 IST
ಮತ ಎಣಿಕೆ ಕೇಂದ್ರದ ಎದುರು ಬೆಂಬಲಿಗರ ಜತೆ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಬಿ.ಎನ್. ಐಶ್ವರ್ಯಾ -ಪ್ರಜಾವಾಣಿ ಚಿತ್ರ
ಮತ ಎಣಿಕೆ ಕೇಂದ್ರದ ಎದುರು ಬೆಂಬಲಿಗರ ಜತೆ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಬಿ.ಎನ್. ಐಶ್ವರ್ಯಾ -ಪ್ರಜಾವಾಣಿ ಚಿತ್ರ   

ಬೆಂಗಳೂರು:ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಿನ್ನಿಪೇಟೆ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ಐಶ್ವರ್ಯಾ ಗೆಲುವಿನ ನಗೆ ಬೀರಿದ್ದಾರೆ.

ಬಿಬಿಎಂಪಿ ವಾರ್ಡ್‌ –121ರ ಉಪಚುನಾವಣೆ ಮತಎಣಿಕೆ ಬುಧವಾರ ನಡೆದಿದ್ದು, ಒಟ್ಟು ಏಳು ಸುತ್ತಿನಲ್ಲಿ ಮತ ಎಣಿಕೆ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಎಣಿಕೆ ಕಾರ್ಯ ಒಂದು ತಾಸಿನಲ್ಲಿ ಪೂರ್ಣಗೊಂಡಿತು.ಪಾಲಿಕೆ ಸದಸ್ಯೆ ಮಹದೇವಮ್ಮ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಇದೇ 18ರಂದು ಚುನಾವಣೆ ನಡೆದಿತ್ತು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನೇರ ಹಣಾಹಣಿ ಕಂಡುಬಂದಿತು. ಎಲ್ಲ ಸುತ್ತಿನಲ್ಲಿಯೂ ಮುನ್ನಡೆ ಸಾಧಿಸಿದ್ದ ಐಶ್ವರ್ಯಾ ಅವರಿಗೆ ಅಮ್ಮನ ಸಾವಿನ ಅನುಕಂಪದ ಅಲೆ ಗೆಲುವಿನ ಹಾದಿಯನ್ನು ಸುಲಭಗೊಳಿಸಿತು. 1,939 ಮತಗಳ ಅಂತರದಿಂದ ಗೆಲುವಿನ ಗದ್ದುಗೆ ಏರಿದರು.

ADVERTISEMENT

ಮಹಿಳಾ ಮೀಸಲು ಕ್ಷೇತ್ರವಾಗಿದ್ದ ಈ ವಾರ್ಡ್‌ನಲ್ಲಿ ಮಹದೇವಮ್ಮ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಗೆದ್ದಿದ್ದರು. ಅವರ ನಿಧನದ ನಂತರ ಮಗಳು ಐಶ್ವರ್ಯಾಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಬೇಕೆಂದು ಮಹದೇವಮ್ಮ ಅವರ ಪತಿ ಬಿಟಿಎಸ್‌ ನಾಗರಾಜ್‌ ಪಟ್ಟು ಹಿಡಿದಿದ್ದರು. ಆದರೆ, ಕಾಂಗ್ರೆಸ್‌, ವಿದ್ಯಾ ಶಶಿಕುಮಾರ್‌ ಅವರಿಗೆ ಟಿಕೆಟ್‌ನೀಡಿತ್ತು. ಇದರಿಂದ ಬೇಸರಗೊಂಡ ನಾಗರಾಜ್‌ ಜೆಡಿಎಸ್‌ನಿಂದ ಮಗಳನ್ನು ಕಣಕ್ಕಿಳಿಸಿದರು.

ಚುನಾವಣೆ ಮುನ್ನಾ ದಿನ ರಾತ್ರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿತ್ತು. ಕಾಂಗ್ರೆಸ್‌ ಕಾರ್ಯಕರ್ತ ಸುರೇಶ್‌ ಕುಮಾರ್‌ ತೀವ್ರ ಹಲ್ಲೆಗೊಳಗಾಗಿದ್ದರು. ಭಯದ ವಾತಾವರಣದಲ್ಲಿಯೇ ಮತದಾನ
ನಡೆದಿತ್ತು. ಹೀಗಾಗಿ ಮತ ಎಣಿಕೆಗೂ ಭಾರಿ ಭದ್ರತೆಯನ್ನುಒದಗಿಸಲಾಗಿತ್ತು.

ಈ ವಾರ್ಡ್‌ನಲ್ಲಿ ಒಟ್ಟು 34,582 ಮತದಾರರಿದ್ದು, 17,746 ಪುರುಷ ಮತ್ತು 16,826 ಮಹಿಳಾ ಮತದಾರರಿದ್ದಾರೆ. ಶೇ 43.54ರಷ್ಟು ಮತದಾನವಾಗಿತ್ತು.

ಅಮ್ಮನ ನೆನೆದು ಕಣ್ಣೀರಿಟ್ಟ ಐಶ್ವರ್ಯಾ

ಫಲಿತಾಂಶ ಪ್ರಕಟವಾದ ನಂತರ ಅಮ್ಮನ ನೆನೆದು ಕಣ್ಣೀರಿಟ್ಟ ಐಶ್ವರ್ಯಾ, ‘ಇದು ಅಮ್ಮನ ಗೆಲುವು. ಅವರು ನನ್ನೊಳಗೆ ಸದಾ ಜೀವಂತವಿರುತ್ತಾರೆ.ಗೆಲುವನ್ನು ಜೆಡಿಎಸ್ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ. ನನ್ನ ತಂದೆ-ತಾಯಿಯ ಸೇವೆಯನ್ನು ಜನ ಗುರುತಿಸಿದ್ದಾರೆ’ ಎಂದರು.

‘ಜನ ಕೆಲಸಕ್ಕೆ ಮನ್ನಣೆ ನೀಡುತ್ತಾರೆ, ಹಣಕ್ಕೆ ಅಲ್ಲ ಎನ್ನುವ ಸಂದೇಶವನ್ನು ಮತದಾರರು ಈ ಫಲಿತಾಂಶದ ಮೂಲಕ ತಿಳಿಸಿದ್ದಾರೆ. ಬಿನ್ನಿಪೇಟೆ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಇಲ್ಲದೆ ಬಿನ್ನಿಪೇಟೆ ಇಲ್ಲ ಎಂದು ಶಾಸಕ ದಿನೇಶ್ ಗುಂಡೂರಾವ್ ಭಾವಿಸಿದ್ದರು. ಈಗ ಬಿನ್ನಿಪೇಟೆ ಎಂದರೆ ಬಿಟಿಎಸ್ ನಾಗರಾಜ್ ಎಂದು ಇಲ್ಲಿನ ಜನ ಉತ್ತರಿಸಿದ್ದಾರೆ’ ಎಂದು ಐಶ್ವರ್ಯಾ ವಾಗ್ದಾಳಿ ನಡೆಸಿದರು.

ಯಾರಿಗೆ ಎಷ್ಟು ಮತ?

ಐಶ್ವರ್ಯಾ (ಜೆಡಿಎಸ್‌);7,188

ವಿದ್ಯಾ ಶಶಿಕುಮಾರ್‌ (ಕಾಂಗ್ರೆಸ್‌);5,249

ಜಿ. ಚಾಮುಂಡೇಶ್ವರಿ (ಬಿಜೆಪಿ);2,455

ನೋಟಾ; 159

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.