ADVERTISEMENT

'ಬೈಕ್ ಆಂಬುಲೆನ್ಸ್'ನಲ್ಲಿ ಸೇವೆ ನೀಡುವ ಬಯೋಕೆಮಿಸ್ಟ್‌

ಲಾಕ್‌ಡೌನ್‌ ಅವಧಿಯಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ಔಷಧ ಪೂರೈಕೆ

ಮನೋಹರ್ ಎಂ.
Published 30 ಆಗಸ್ಟ್ 2020, 20:12 IST
Last Updated 30 ಆಗಸ್ಟ್ 2020, 20:12 IST
ಬೈಕ್ ಆಂಬುಲೆನ್ಸ್ ನೊಂದಿಗೆ ಶಬ್ಬೀರ್
ಬೈಕ್ ಆಂಬುಲೆನ್ಸ್ ನೊಂದಿಗೆ ಶಬ್ಬೀರ್   

ಬೆಂಗಳೂರು: ಕೊರೊನಾ ಸೋಂಕು ವ್ಯಾಪಿಸಲು ಆರಂಭವಾದ ನಂತರ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ವೈದ್ಯರು ಕೂಡಾ ಕರ್ತವ್ಯ ನಿರ್ವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ, ನಗರದ ಕ್ಲಿನಿಕಲ್‌ ಬಯೋಕೆಮಿಸ್ಟ್‌ ಒಬ್ಬರು ‘ಬೈಕ್ ಆಂಬುಲೆನ್ಸ್’ ಮೂಲಕ ರೋಗಿಗಳಿರುವಲ್ಲಿಗೆ ತೆರಳಿ ಸೇವೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ

ಫ್ರೇಜರ್ ಟೌನ್‍ನ ಸಂತೋಷ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಬಯೋಕೆಮಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸೈಯದ್ ಮೊಯಿನುದ್ದೀನ್ ಶಬ್ಬೀರ್, ತನ್ನ ಆಸ್ಪತ್ರೆಯಲ್ಲಿದ್ದ ದ್ವಿಚಕ್ರ ವಾಹನವನ್ನೇ ಆಂಬುಲೆನ್ಸ್ ಆಗಿ ಪರಿವರ್ತಿಸಿಕೊಂಡಿದ್ದಾರೆ. ಅದರಲ್ಲಿ ಕೊರೊನಾ ಶಂಕಿತರು ಹಾಗೂ ಇತರ ಆರೋಗ್ಯ ಸಮಸ್ಯೆ ಉಳ್ಳವರು ಇರುವ ಕಡೆಗೇ ತೆರಳಿ ಅವರ ಆರೋಗ್ಯ ತಪಾಸಣೆಗೆ ನೆರವಾಗುತ್ತಿದ್ದಾರೆ. ವೈದ್ಯರ ಚೀಟಿಯನ್ನು ಆಧರಿಸಿ ಉಚಿತವಾಗಿ ಔಷಧವನ್ನೂ ಪೂರೈಸುತ್ತಿದ್ದಾರೆ.

'ಲಾಕ್‍ಡೌನ್ ಜಾರಿಯಾದಂದಿನಿಂದ ಜನರು ಮನೆಯಿಂದ ಹೊರ ಬಂದು ಸಾಮಗ್ರಿ ಕೊಳ್ಳುವುದಕ್ಕೂ ಸಮಸ್ಯೆ ಎದುರಿಸುತ್ತಿದ್ದರು. ಈ ಅವಧಿಯಲ್ಲಿ ಹಿರಿಯರು, ಮಕ್ಕಳೂ ಸೇರಿದಂತೆ ಬಡ ರೋಗಿಗಳು ವೈದ್ಯಕೀಯ ನೆರವು ಪಡೆಯುವುದಕ್ಕೂ ಪಡಿಪಾಟಲು ಅನುಭವಿಸುತ್ತಿದ್ದರು. ನಾನು ಬಡ ರೋಗಿಗಳಿಗೆ ಉಚಿತವಾಗಿ ಮಾತ್ರೆ, ಔಷಧ ತಲುಪಿಸಲು ಮುಂದಾದೆ' ಎಂದು ಶಬ್ಬೀರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

'ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡ ಕಾರಣಕ್ಕೆ ಕಂಟೈನ್‌ಮೆಂಟ್‌ಗೆ ಒಳಗಾದ ಪ್ರದೇಶಗಳಿಗೂ ಬೈಕ್‍ನಲ್ಲಿ ತೆರಳಿ ಅನೇಕ ಮಂದಿಯ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಿದ್ದೇನೆ. ಪಾದರಾಯನಪುರ, ಫ್ರೇಜರ್ ಟೌನ್, ಭಾರತಿನಗರ, ಇಂದಿರಾನಗರ, ವಿಜಯನಗರ, ಥಣಿಸಂದ್ರ ಸೇರಿ ನಗರದಲ್ಲಿ ಸೀಲ್‍ಡೌನ್ ಆಗಿದ್ದ ಪ್ರದೇಶಗಳಲ್ಲಿದ್ದ ಜನರಿಗೆ ಅಗತ್ಯ ಔಷಧಿ ಪೂರೈಸುವ ಮೂಲಕ ಸ್ಪಂದಿಸಿದ್ದೇನೆ. ಶಿವಾಜಿನಗರದ ಕಟ್ಟಡವೊಂದರಲ್ಲಿ 40 ಮಂದಿಗೆ ಕೊರೊನಾ ಸೋಂಕು ದೃಢವಾಗಿತ್ತು. ಅಲ್ಲಿಗೆ ಬೈಕ್ ತೆರಳಲು ಅವಕಾಶ ಇರಲಿಲ್ಲ. ಹಾಗಾಗಿ, ಚಿಕಿತ್ಸಾ ಸಾಮಗ್ರಿಗಳನ್ನು ಅಲ್ಲಿನ ಜನರಿಗೆ ತಲುಪಿಸಿದೆ' ಎಂದು ಅವರು ತಿಳಿಸಿದರು.

'ಲಾಕ್‍ಡೌನ್ ಸಡಿಲಗೊಂಡ ನಂತರ ಜನರಿಗೆ ವಾಟ್ಸ್ ಆಪ್, ಫೇಸ್‍ಬುಕ್ ಮೂಲಕ ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಪ್ರತಿದಿನ ಕನಿಷ್ಠ 50 ಮಂದಿಗೆ ನೆರವು ನೀಡುತ್ತಿದ್ದೇವೆ. ಕೊರೊನಾ ರೋಗಿಗಳು ಹಾಗೂ ಕೆಮ್ಮು, ನೆಗಡಿ, ಸಾಮಾನ್ಯ ಜ್ವರ ಮೊದಲಾದವುಗಳಿಗೆ ಈವರೆಗೆ 5 ಸಾವಿರ ಮಂದಿಗೆ ಉಚಿತವಾಗಿ ಔಷಧ ಪೂರೈಸಿದ್ದೇನೆ. ಈ ಸಲುವಾಗಿ ₹3 ಲಕ್ಷ ಹಣ ಖರ್ಚಾಗಿದ್ದು, ಸೇವಾ ಸಂಸ್ಥೆಗಳು ನೆರವು ನೀಡಿವೆ' ಎಂದರು.

ಬೈಕ್ ಆಂಬುಲೆನ್ಸ್ ನಲ್ಲಿ ಏನೇನಿದೆ?

'ಆಸ್ಪತ್ರೆಯಲ್ಲಿ ಖಾಲಿಯಾಗಿ ಇದ್ದ ದ್ವಿಚಕ್ರ ವಾಹನವನ್ನೇ ಆಂಬುಲೆನ್ಸ್ ಆಗಿ ಪರಿವರ್ತಿಸಿಕೊಂಡೆವು. ಇದರಲ್ಲಿ ಗ್ಲೂಕೋ ಮೀಟರ್, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳು, ರಕ್ತದೊತ್ತಡ ಮಾಪಕ, ಥರ್ಮೋ ಮೀಟರ್, ಉಷ್ಣತಾ ಮಾಪಕ (ಥರ್ಮಲ್ ಸ್ಕ್ಯಾನರ್), ಮಾಸ್ಕ್, ಸ್ಯಾನಿಟೈಸರ್ ಹಾಗೂ ಪ್ರಥಮ ಚಿಕಿತ್ಸೆ ಸಾಮಗ್ರಿಗಳನ್ನು ಸದಾ ಇಟ್ಟುಕೊಂಡಿರುತ್ತೇನೆ. ಅಗತ್ಯ ಇದ್ದವರು 9945278563 ಸಂಖ್ಯೆಗೆ ಕರೆ ಅಥವಾ ವಾಟ್ಸ್ ಆ್ಯಪ್ ಮಾಡಬಹುದು' ಎಂದು ಶಬ್ಬೀರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.