
ಬಯೊಕಾನ್ ಉದ್ಯೋಗಿ ಆತ್ಮಹತ್ಯೆ: ಕಂಪನಿ ಮುಖ್ಯಸ್ಥೆ ಕಿರಣ್ ಹೇಳಿದ್ದಿಷ್ಟು
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಬಯೊಕಾನ್ ಕಂಪನಿಯ ಉದ್ಯೋಗಿ ಅನಂತಕುಮಾರ್ (26) ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವುದರ ಬಗ್ಗೆ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಈ ದುರಂತದ ಸುದ್ದಿ ಕೇಳಿ ನನಗೆ ಆಘಾತವಾಯಿತು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದಿದ್ದಾರೆ.
ಬನಶಂಕರಿಯ ಅನಂತ್ ಕುಮಾರ್ ಅವರು ಕಳೆದ ಎರಡು ತಿಂಗಳಿನಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಐದನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಿರಣ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, 'ಮಾಧ್ಯಮಗಳು ಆತ್ಮಹತ್ಯೆಯ ಬಗ್ಗೆ ಸುದ್ದಿ ಮಾಡಿ ಅವರ ಕೆಲಸ ಮಾಡಿದ್ದಾರೆ. ನೀವು ವಿಚಾರಣೆಯನ್ನು ಪ್ರಾರಂಭಿಸಬೇಕು' ಎಂದಿದ್ದಾರೆ.
ಮತ್ತೊಬ್ಬರು, 'ಯಾಕೆ ಆಘಾತವಾಯಿತು? ಒಂದು ಸಂಸ್ಥೆಯಲ್ಲಿನ ಕೆಲಸದ ಸಂಸ್ಕೃತಿಯ ಬಗ್ಗೆ ಈ ಘಟನೆ ಏನು ಹೇಳುತ್ತದೆ? ಬಯೋಕಾನ್‌ಗೆ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ನೀಡುತ್ತಿರುವ ಆರಂಭಿಕ ಸಂಬಳ ಎಷ್ಟು ಎಂದು ಹೇಳಿ?' ಎಂದು ಬರೆದುಕೊಂಡಿದ್ದಾರೆ.
'ಕಿರಣ್ ಜೀ, ನೀವು ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಪರಿಹಾರವನ್ನು ಘೋಷಿಸಿದ್ದೀರಾ ??' ಎಂದು ಮತ್ತೊಬ್ಬರು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.