ದಿನೇಶ್ ಗುಂಡೂರಾವ್
ಬೆಂಗಳೂರು: ‘ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜುಲೈ 1ರಿಂದ ಜಾರಿ ಮಾಡಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಬಗ್ಗೆ ಇಲಾಖೆ ಇದೇ 12ರಂದು ಆದೇಶ ಹೊರಡಿಸಿದೆ. 1,200 ಆರೋಗ್ಯ ಸಂಸ್ಥೆಗಳೂ ಸೇರಿ ಇಲಾಖೆ ವ್ಯಾಪ್ತಿಯ ಕಚೇರಿಗಳಲ್ಲಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ.
‘ಆರೋಗ್ಯ ಕೇಂದ್ರಗಳಲ್ಲಿ ಪಾರದರ್ಶಕ ವ್ಯವಸ್ಥೆ ತರಲು ಈ ವ್ಯವಸ್ಥೆ ಸಹಕಾರಿ. ಮೊಬೈಲ್ ಆಧಾರಿತ ಹಾಜರಾತಿ ಕಡ್ಡಾಯದಿಂದ ವೈದ್ಯರ ಗೈರಿನ ಬಗ್ಗೆ ಸಾರ್ವಜನಿಕರ ದೂರುಗಳು ಕಡಿಮೆಯಾಗುವ ನಿರೀಕ್ಷೆಯಿದೆ’ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ಸದ್ಯ ಬಳಸುತ್ತಿರುವ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣಾ ವ್ಯವಸ್ಥೆಯಲ್ಲಿ ಆಗಾಗ ಸಮಸ್ಯೆ ಕಂಡುಬರುತ್ತಿದೆ. ಆದ್ದರಿಂದ, ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಯಾವ ಪ್ರದೇಶದಿಂದ ಹಾಜರಾತಿ ಹಾಕಲಾಗುತ್ತಿದೆ ಎನ್ನುವುದನ್ನೂ ಈ ವ್ಯವಸ್ಥೆಯಲ್ಲಿ ಪತ್ತೆ ಮಾಡಲು ಸಾಧ್ಯ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.