ಮೊಹಮ್ಮದ್ ನಲಪಾಡ್
ಬೆಂಗಳೂರು: ಬಿಟ್ ಕಾಯಿನ್ ಹ್ಯಾಕಿಂಗ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖಾಧಿಕಾರಿಗಳು ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದರು.
ಪ್ರಕರಣ ಸಂಬಂಧ ಫೆಬ್ರುವರಿ 7ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ವೈಯಕ್ತಿಕ ಕಾರಣಕ್ಕಾಗಿ ಗುರುವಾರವೇ ಎಸ್ಐಟಿ ಮುಂದೆ ನಲಪಾಡ್ ಹಾಜರಾದರು.
ಡಿವೈಎಸ್ಪಿ ಬಾಲರಾಜ್ ಅವರು ಎರಡು ಗಂಟೆ ವಿಚಾರಣೆ ನಡೆಸಿದರು. ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಪ್ರಶ್ನೆಗೆ ನಲಪಾಡ್ ಉತ್ತರಿಸಿದ್ದಾರೆ.
ಬಿಟ್ ಕಾಯಿನ್ ಹ್ಯಾಕಿಂಗ್ ಹಗರಣದ ಆರೋಪಿಯಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಲಪಾಡ್ ಆಪ್ತರು ಎನ್ನಲಾಗಿದೆ. ಆರೋಪಿಯ ಖಾತೆಯಿಂದ ನಲಪಾಡ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಈ ಮಾಹಿತಿ ಆಧರಿಸಿ ಅವರನ್ನು ವಿಚಾರಣೆ ಕರೆಸಲಾಗಿತ್ತು ಎಂದು ಸಿಐಡಿ ಮೂಲಗಳು ತಿಳಿಸಿವೆ.
ತನಿಖಾಧಿಕಾರಿಗಳು ಪ್ರಕರಣದ ಸಂಬಂಧ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ನಲಪಾಡ್ ಉತ್ತರಿಸಿದ್ದಾರೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಅಲ್ಲದೇ ಶ್ರೀಕಿ ಪರಿಚಯ ಆದ ಕುರಿತ ಮಾಹಿತಿ, ಶ್ರೀಕಿ ಜತೆಗಿನ ವ್ಯಾವಹಾರಿಕ ನಂಟಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದಾರೆ ಎಂಬುದು ಗೊತ್ತಾಗಿದೆ.
‘ಮತ್ತೆ ವಿಚಾರಣೆಯ ಅವಶ್ಯಕತೆ ಇದ್ದರೆ ನೋಟಿಸ್ ನೀಡಲಾಗುವುದು. ಆಗ ವಿಚಾರಣೆಗೆ ಹಾಜರಾಗಬೇಕು’ ಎಂದು ತನಿಖಾಧಿಕಾರಿಗಳು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೊಹಮ್ಮದ್ ನಲಪಾಡ್, ‘ವೈಯಕ್ತಿಕ ಕೆಲಸದ ಕಾರಣ ಗುರುವಾರವೇ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದೇನೆ. ನಾನು ಎಲ್ಲಿಯೂ ಓಡಿಹೋಗಿಲ್ಲ. ಪ್ರಕರಣದಲ್ಲಿ ಬಂಧನವಾಗುವ ಭಯವಿಲ್ಲ. ಶ್ರೀಕಿ ಪರಿಚಯ ಕುರಿತ ತನಿಖಾಧಿಕಾರಿಗಳ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದೇನೆ’ ಎಂದು ಹೇಳಿದರು.
'ಶ್ರೀಕಿ ನನ್ನ ತಮ್ಮನ ಮೂಲಕ ಪರಿಚಯವಾಗಿದ್ದ. ಈವರೆಗೂ ನನಗೂ ಹಾಗೂ ನನ್ನ ತಮ್ಮನಿಗೂ ಶ್ರೀಕಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿಲ್ಲ. ಕಾನೂನಿನ ಮೇಲೆ ಗೌರವವಿದೆ’ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ಇ-ಸಂಗ್ರಹಣಾ ಇಲಾಖೆಯ ವೆಬ್‌ಸೈಟ್ ಹ್ಯಾಕ್ ಮಾಡಿ ₹1 ಕೋಟಿ ನಗದು ವಂಚನೆ ಆರೋಪದ ಪ್ರಕರಣ ಸಂಬಂಧ ಜೂನ್ 12ರಂದು ಮೊದಲ ಬಾರಿಗೆ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದ ನಲಪಾಡ್ ಅವರು ತನಿಖಾಧಿಕಾರಿಗಳು ಕೇಳಿದ್ದ ಕೆಲವು ಪ್ರಶ್ನೆಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ಉತ್ತರ ನೀಡಿದ್ದರು.
ಆರೋಪಿ ಶ್ರೀಕಿ, ರಾಬಿನ್ ಖಂಡೇಲ್‌ವಾಲ ಜತೆ ಸೇರಿಕೊಂಡು ಕೆಲವು ಗೇಮಿಂಗ್ ಆ್ಯಪ್‌ಗಳನ್ನು ಹ್ಯಾಕ್ ಮಾಡಿ, ಅವುಗಳ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದರು. ಡಾರ್ಕ್‌ವೆಬ್ ಮೂಲಕ ವಿದೇಶಗಳಿಂದ ಮಾದಕ ವಸ್ತುಗಳನ್ನು ತರಿಸುತ್ತಿದ್ದರು. ಅದಕ್ಕಾಗಿ ಕ್ರಿಪ್ಟೊ ಕರೆನ್ಸಿ ಮತ್ತು ಬಿಟ್‌ಕಾಯಿನ್ ಮೂಲಕ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿತ್ತು.
ತನಿಖೆಯ ಭಾಗವಾಗಿ ಎಸ್‌ಐಟಿ ತನಿಖಾಧಿಕಾರಿಗಳು ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಹಣಕಾಸಿನ ವಹಿವಾಟು ಕುರಿತು ವಿಚಾರಿಸುತ್ತಾರೆ.ಜಿ.ಪರಮೇಶ್ವರ ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.