ADVERTISEMENT

ಬಿಟ್‌ಕಾಯಿನ್‌ ಯಾರಿಗೆಷ್ಟು ಪಾಲು: ಪೊಲೀಸ್‌ ‘ವ್ಯಾಲೆಟ್‌’ ಮಾಹಿತಿ ನಿಗೂಢ!

ಅನುಮತಿ ಕೇಳಿದ್ದ ನಗರ ಪೊಲೀಸ್ ಕಮಿಷನರ್‌: 2020ರ ಡಿಸೆಂಬರ್‌ನಲ್ಲಿ ಸರ್ಕಾರದ ಆದೇಶ

ವಿ.ಎಸ್.ಸುಬ್ರಹ್ಮಣ್ಯ
Published 13 ನವೆಂಬರ್ 2021, 21:30 IST
Last Updated 13 ನವೆಂಬರ್ 2021, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಬಳಿ ಬಿಟ್‌ಕಾಯಿನ್‌ಗಳಿವೆ ಎಂಬುದನ್ನು ಖಚಿತಪಡಿಸಿಕೊಂಡಿದ್ದ ಬೆಂಗಳೂರು ನಗರ ಪೊಲೀಸರು, ಅವುಗಳನ್ನು ವಶಪಡಿಸಿಕೊಳ್ಳಲು ಕರ್ನಾಟಕದ ಗೃಹ ಇಲಾಖೆಯ ಅನುಮತಿ ಪಡೆದು ಡಿಜಿಟಲ್‌ ವ್ಯಾಲೆಟ್‌ ಮತ್ತು ಬ್ಯಾಂಕ್‌ ಖಾತೆ ತೆರೆದಿದ್ದರು. ಆದರೆ, ಅವುಗಳಲ್ಲಿ ನಡೆದಿರುವ ವಹಿವಾಟಿನ ವಿವರ ಮಾತ್ರ ನಿಗೂಢವಾಗಿಯೇ ಉಳಿದಿದೆ.

ಶ್ರೀಕಿ ವಿರುದ್ಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಶ್ರೀಕಿ ಮತ್ತು ಇತರರ ವಿರುದ್ಧ 2020ರ ನವೆಂಬರ್‌ 27ರಂದು ದಾಖಲಿಸಿದ್ದ ಪ್ರಕರಣದ (ಎಫ್‌ಐಆರ್‌ ಸಂಖ್ಯೆ– 153/2020) ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಆರೋಪಿಯ ಡಿಜಿಟಲ್‌ ವ್ಯಾಲೆಟ್‌ನಲ್ಲಿ ಬಿಟ್‌ಕಾಯಿನ್‌ಗಳು ಇರುವುದನ್ನು ಪತ್ತಹೆಚ್ಚಿದ್ದರು. ಆರೋಪಿ ಬಳಿ ಇದ್ದ ಬಿಟ್‌ಕಾಯಿನ್‌ ಮತ್ತು ಇತರ ಕ್ರಿಪ್ಟೋ ಕರೆನ್ಸಿಗಳನ್ನು ವಶಕ್ಕೆ ಪಡೆಯಲು ಪ್ರತ್ಯೇಕ ಡಿಜಿಟಲ್‌ ವ್ಯಾಲೆಟ್‌ ಮತ್ತು ಬ್ಯಾಂಕ್‌ ಖಾತೆ ತೆರೆಯಬೇಕು ಎಂದು ಸೈಬರ್‌ ತಂತ್ರಜ್ಞರು ಸಲಹೆ ನೀಡಿದ್ದರು.

ಪೊಲೀಸರ ಹೆಸರಿನಲ್ಲಿ ಡಿಜಿಟಲ್‌ ವ್ಯಾಲೆಟ್‌ ಹಾಗೂ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಲು ಅನುಮತಿ ನೀಡುವಂತೆ ನಗರ ಪೊಲೀಸ್‌ ಕಮಿಷನರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕರನ್ನು ಕೋರಿದ್ದರು. ಅವರು ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು. 2020ರ ಡಿಸೆಂಬರ್‌ 7ರಂದು ಆರ್ಥಿಕ ಇಲಾಖೆ ಈ ಪ್ರಸ್ತಾವಕ್ಕೆ ಸಹಮತ ಸೂಚಿಸಿತ್ತು. ಡಿಜಿಟಲ್‌ ವ್ಯಾಲೆಟ್‌ ಮತ್ತು ಪ್ರತ್ಯೇಕ ಬ್ಯಾಂಕ್‌ ಖಾತೆಗಳನ್ನು ತೆರೆಯಲು ಅನುಮತಿ ನೀಡಿ ಗೃಹ ಇಲಾಖೆ ಡಿ.8ರಂದು ಆದೇಶ ಹೊರಡಿಸಿತ್ತು.

ADVERTISEMENT

ಆರೋಪಪಟ್ಟಿಯಲ್ಲಿ ಉಲ್ಲೇಖವೇ ಇಲ್ಲ: ಪ್ರತ್ಯೇಕ ವ್ಯಾಲೆಟ್‌ ಮತ್ತು ಬ್ಯಾಂಕ್‌ ಖಾತೆ ತೆರೆಯಲು ಅನುಮತಿ ಪಡೆದ ಎರಡೂವರೆ ತಿಂಗಳ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಶ್ರೀಕಿಯಿಂದ ಎಷ್ಟು ಬಿಟ್‌ಕಾಯಿನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು? ಅವುಗಳನ್ನು ನಗದೀಕರಿಸಿ ಯಾವ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗಿತ್ತು? ಎಂಬ ಮಾಹಿತಿಯೇ ಸಿಸಿಬಿಯು ಕೋರ್ಟ್‌ಗೆ ಸಲ್ಲಿಸಿರುವ 757 ಪುಟಗಳ ದೋಷಾರೋಪಪಟ್ಟಿಯಲ್ಲಿ ಇಲ್ಲ.

ಪೊಲೀಸರು ಯಾವ ಬಿಟ್‌ಕಾಯಿನ್‌ ಎಕ್ಸ್‌ಚೇಂಜ್‌ ಮೂಲಕ ಡಿಜಿಟಲ್‌ ವ್ಯಾಲೆಟ್‌ ತೆರೆದಿದ್ದರು? ಅವುಗಳಿಗೆ ವರ್ಗಾಯಿಸಿದ ಬಿಟ್‌ಕಾಯಿನ್‌ಗಳನ್ನು ನಗದೀಕರಿಸಲು ಯಾವ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿತ್ತು? ಯಾವ ಅಧಿಕಾರಿಗಳು ಈ ಖಾತೆಗಳನ್ನು ನಿರ್ವಹಿಸಿದ್ದರು? ಎಂಬ ವಿವರಗಳೂ ಇಲ್ಲ.

2021ರ ಫೆಬ್ರುವರಿ 22ರಂದು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳ ಹೇಳಿಕೆಗಳು, ಸಾಕ್ಷಿದಾರರ ಹೇಳಿಕೆಗಳು, ಆರೋಪಿಗಳ ಬ್ಯಾಂಕ್‌ ಖಾತೆಗಳ ವಿವರ, ಮೊಬೈಲ್‌ ಕರೆ ಮತ್ತು ವಿವಿಧ ಆ್ಯಪ್‌ಗಳ ಮೂಲಕ ನಡೆಸಿದ್ದ ಸಂವಹನದ ವಿವರ, ಸೈಬರ್‌ ತಂತ್ರಜ್ಞರ ಹೇಳಿಕೆಗಳು ಸೇರಿದಂತೆ 50 ದಾಖಲೆಗಳನ್ನು ಆರೋಪಪಟ್ಟಿಯೊಂದಿಗೆ ಸಲ್ಲಿಸಲಾಗಿತ್ತು. ಪೊಲೀಸ್‌ ಅಧಿಕಾರಿಗಳು, ಮಹಜರು ವೇಳೆ ಹಾಜರಿದ್ದ ಸರ್ಕಾರಿ ನೌಕರರು, ಖಾಸಗಿ ವ್ಯಕ್ತಿಗಳು ಸೇರಿದಂತೆ 36 ಮಂದಿ ಸಾಕ್ಷಿಗಳ ಪಟ್ಟಿಯೂ ಇದೆ. ಎಲ್ಲಿಯೂ ಪೊಲೀಸರ ಡಿಜಿಟಲ್‌ ವ್ಯಾಲೆಟ್‌ ಮತ್ತು ಅದಕ್ಕೆ ಪೂರಕವಾದ ಬ್ಯಾಂಕ್‌ ಖಾತೆಯ ಮಾಹಿತಿಯೇ ಇಲ್ಲ.

ಐಎಸ್‌ಡಿಯಲ್ಲೂ ಹ್ಯಾಕಿಂಗ್‌ ಪ್ರಕರಣ ದಾಖಲು

ರಾಜ್ಯದ ಆಂತರಿಕ ಭದ್ರತಾ ವಿಭಾಗದಲ್ಲೂ (ಐಎಸ್‌ಡಿ) ಹ್ಯಾಕಿಂಗ್‌ ಆರೋಪಕ್ಕೆ ಸಂಬಂಧಿಸಿದಂತೆ 2020ರ ಡಿಸೆಂಬರ್‌ 21ರಂದು ಎಫ್‌ಐಆರ್‌ ದಾಖಲಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

‘ಈ ಪ್ರಕರಣದಲ್ಲೂ ಶ್ರೀಕಿಯನ್ನು ವಶಕ್ಕೆ ಪಡೆಯಲು ಅಂದು ಐಎಸ್‌ಡಿಯಲ್ಲಿದ್ದ ಪ್ರಭಾವಿ ಅಧಿಕಾರಿಯೊಬ್ಬರು ಆಸಕ್ತಿ ತೋರಿದ್ದರು. ಆದರೆ, ನಂತರ ಯಾವುದೇ ಬೆಳವಣಿಗೆಗಳು ನಡೆಯಲಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.