ಬಿಜೆಪಿ ನೀಡಿದ್ದ ಜಾಹೀರಾತು
ಬೆಂಗಳೂರು: ‘ಮಹಾತ್ಮ ಗಾಂಧೀಜಿ ಅವರ ಊರುಗೋಲನ್ನು ದೊಣ್ಣೆಯಂತೆ ಚಿತ್ರಿಸಿ, ಅವರಿಗೆ ಅಪಮಾನ ಮಾಡುವ ರೀತಿ ಜಾಹೀರಾತು ಪ್ರಸಾರ ಮಾಡಿದ ಭಾರತೀಯ ಜನತಾ ಪಕ್ಷದ ಧೋರಣೆ ಗಾಸಿಯುಂಟುಮಾಡಿದೆ’ ಎಂದು ಸ್ವಾಮೀಜಿಗಳು ಹಾಗೂ ಚಿಂತಕರು ಹೇಳಿದ್ದಾರೆ.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ವೂಡೇ ಪಿ. ಕೃಷ್ಣ, ಜಿ.ಎಸ್. ಜಯದೇವ, ನಾಗೇಶ್ ಹೆಗಡೆ, ಎನ್.ಆರ್. ವಿಶುಕುಮಾರ್, ಶಿವನಕರೆ ಬಸವಲಿಂಗಪ್ಪ, ಜೆ.ಬಿ. ಶಿವರಾಜ್, ವಿ. ಗಾಯತ್ರಿ ಹಾಗೂ ಶಾರದಾ ಗೋಪಾಲ್ ಜಂಟಿ ಹೇಳಿಕೆ ನೀಡಿದ್ದಾರೆ.
‘ಮಹಾತ್ಮನ ಜೀವನಪಾಠಗಳನ್ನು, ತತ್ವಾದರ್ಶಗಳನ್ನು ಮೂಲೆಗೆ ತಳ್ಳುತ್ತ ಹೋದ ಬಿಜೆಪಿಗರ ನಡೆ ಈಗ ‘ಜಿ ರಾಮ್ ಜಿ’ವರೆಗೆ ಬಂದಿದೆ. ‘ನುಂಗಪ್ಪ’ರನ್ನು ಲೇವಡಿ ಮಾಡುವ ಭರದಲ್ಲಿ ಗಾಂಧೀಜಿ ಅವರ ಕೈಗೆ ದೊಣ್ಣೆ ಹಿಡಿಸಿ, ಅವರನ್ನೇ ಲೇವಡಿ ಮಾಡಿದ್ದು ಅಕ್ಷಮ್ಯ. ಬೌದ್ಧಿಕ ದಿವಾಳಿತನ ಬಿಂಬಿಸುವ ಈ ಜಾಹೀರಾತಿನಲ್ಲಿ ಲಾಠಿಯೇ ಬಂಡವಾಳ ಎಂಬ ಸಂದೇಶವಷ್ಟೇ ಎಲ್ಲರಿಗೂ ಕಾಣುವಂತಿದೆ. ಅಹಿಂಸಾಮೂರ್ತಿಯ ಬಿಂಬವನ್ನು ಹೀಗೆ ತಿರುಚಿದ್ದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.