ADVERTISEMENT

‘ಮೋದಿ ಅವಧಿಯಲ್ಲಿ ಆರ್ಥಿಕ ವೃದ್ಧಿ’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:57 IST
Last Updated 30 ಮಾರ್ಚ್ 2019, 19:57 IST
ಸಂವಾದದಲ್ಲಿ ಡಾ.ದೇವಿಪ್ರಸಾದ್‌ ಶೆಟ್ಟಿ ಮಾತನಾಡಿದರು. ವಿಶ್ವನಾಥ್‌ ಭಟ್‌, ಟಿ.ವಿ.ಮೋಹನ್‌ ದಾಸ್ ಪೈ ಇದ್ದರು –ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಡಾ.ದೇವಿಪ್ರಸಾದ್‌ ಶೆಟ್ಟಿ ಮಾತನಾಡಿದರು. ವಿಶ್ವನಾಥ್‌ ಭಟ್‌, ಟಿ.ವಿ.ಮೋಹನ್‌ ದಾಸ್ ಪೈ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಧಾನಿ ಮೋದಿ ಅವರ ಆಡಳಿತದ ಅವಧಿಯಲ್ಲಿ ಭಾರತ ಜಗತ್ತಿನ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.‌ ಜಿಡಿಪಿ ಶೇ 7.2ರಷ್ಟು ವೃದ್ಧಿಯಾಗಿದೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಇದೇ ಸಾಕ್ಷಿ’ ಎಂದು ಮಣಿಪಾಲ್ ಗ್ಲೋಬಲ್ ಸಂಸ್ಥೆ ಅಧ್ಯಕ್ಷ ಟಿ.ವಿ.ಮೋಹನ್‌ ದಾಸ್ ಪೈ ಹೇಳಿದರು.

ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠ ಶನಿವಾರ ಆಯೋಜಿಸಿದ್ದ 'ಬದಲಾವಣೆಯತ್ತ ಭಾರತ' ಸಂವಾದದಲ್ಲಿ ಅವರು ಮಾತನಾಡಿದರು.

‘ಜಿಎಸ್‌ಟಿಯಿಂದ ತೆರಿಗೆ ವ್ಯವಸ್ಥೆ ಜಾರಿಯಾಗಿ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಕಾಂಗ್ರೆಸ್‌ ಆಡಳಿತದಲ್ಲಿ ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿತ್ತು. ನೋಟು ರದ್ದತಿ ಬಳಿಕ ತೆರಿಗೆ ವಂಚನೆ ಮಾಡುತ್ತಿದ್ದವರ ಸಂಖ್ಯೆ ಕಡಿಮೆಯಾಯಿತು. ಭಾರತ ಮುಂದುವರಿದ ದೇಶಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಆಯಿತು’ ಎಂದು ಬಣ್ಣಿಸಿದರು.

ADVERTISEMENT

ನಾರಾಯಣ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ದೇವಿಪ್ರಸಾದ್‌ ಶೆಟ್ಟಿ, ‘ಆಯುಷ್ಮಾನ್ ಭಾರತ ಯೋಜನೆ 50 ಕೋಟಿ ಜನರಿಗೆ ಆರೋಗ್ಯದ ಬಗ್ಗೆ ಚಿಂತೆ ಮಾಡದಂತೆ ಮಾಡಿದೆ. ಈ ಯೋಜನೆಯಡಿ ಪ್ರಸ್ತುತ 2.76 ಕೋಟಿ ಮಂದಿ ಆರೋಗ್ಯ ಕಾರ್ಡ್‌ ಹೊಂದಿದ್ದು, 17.22 ಲಕ್ಷ ಮಂದಿ ಚಿಕಿತ್ಸೆ ಪಡೆದಿದ್ದಾರೆ’ ಎಂದರು.

ಪ್ರಕೋಷ್ಠದ ಸಂಚಾಲಕ ವಿಶ್ವನಾಥ್‌ ಭಟ್‌, ‘ಮೋದಿ ಒಬ್ಬ ದಕ್ಷ ಆಡಳಿತಗಾರ. ಕಳಂಕರಹಿತ ಆಡಳಿತ ನೀಡಿದ್ದಾರೆ. ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿರುವ ಅವರನ್ನು ಮತ್ತೊಮ್ಮೆ ‌ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.