ADVERTISEMENT

ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಹನಿಟ್ರ್ಯಾಪ್ ಜಾಲಕ್ಕೆ ಬಿಜೆಪಿ ಮುಖಂಡ

ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ದೂರು ಕೊಟ್ಟ ಪತ್ನಿ

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:32 IST
Last Updated 16 ಮೇ 2022, 19:32 IST
ಬಿ.ಪಿ. ಅನಂತರಾಜು
ಬಿ.ಪಿ. ಅನಂತರಾಜು   

ಬೆಂಗಳೂರು: ಹೆರೋಹಳ್ಳಿ ವಾರ್ಡ್‌ನ ಬಿಜೆಪಿ ಮುಖಂಡ ಬಿ.ಪಿ.ಅನಂತರಾಜು (46) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ‘ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿ ಪತಿ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ಉದ್ಯಮಿಯೂ ಆಗಿದ್ದ ಅನಂತರಾಜು, ಮೇ 12ರಂದು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಬಾರಿ ಬಿಬಿಎಂಪಿ ಚುನಾವಣೆಗೂ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಪುನಃ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು. ಅವರ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಗೊತ್ತಾಗಿರಲಿಲ್ಲ’ ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ.

‘ಅನಂತರಾಜು ಮನೆಯಲ್ಲಿ ಮರಣ ಪತ್ರ ಸಿಕ್ಕಿದ್ದು, ಅದನ್ನು ಆಧರಿಸಿ ಪತ್ನಿ ದೂರು ನೀಡಿದ್ದಾರೆ. ಕೆ.ಆರ್.ಪುರದ ಇಬ್ಬರು ಯುವತಿಯರು ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

ಫೇಸ್‌ಬುಕ್‌ ಮೂಲಕ ಪರಿಚಯ: ‘ಕೆ.ಆರ್‌.ಪುರ ನಿವಾಸಿಯಾದ ಯುವತಿ, ಫೇಸ್‌ಬುಕ್‌ ಮೂಲಕ ಪತಿ ಅನಂತರಾಜು ಅವರನ್ನು ಪರಿಚಯ ಮಾಡಿಕೊಂಡಿದ್ದರು. ಸಲುಗೆ ಸಹ ಬೆಳೆಸಿಕೊಂಡಿದ್ದಳು. ನಂತರ, ತನ್ನ ಪತಿ ಹಾಗೂ ಸ್ನೇಹಿತೆ ಜೊತೆ ಸೇರಿ ಹನಿಟ್ರ್ಯಾಪ್‌ ಸಂಚು ರೂಪಿಸಿದ್ದಳು’ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

‘ಪತಿ ಜೊತೆಗೆ ಖಾಸಗಿ ಕ್ಷಣಗಳನ್ನು ಕಳೆದಿದ್ದ ಯುವತಿ, ಅದರ ವಿಡಿಯೊ ಹಾಗೂ ಫೋಟೊ ತೆಗೆದಿಟ್ಟುಕೊಂಡಿದ್ದಳು. ಅವುಗಳನ್ನೇ ಪತಿಗೆ ಕಳುಹಿಸಿ ಹಣಕ್ಕಾಗಿ ಪೀಡಿಸುತ್ತಿದ್ದಳು.
ಹಣ ನೀಡದಿದ್ದರೆ ವಿಡಿಯೊ, ಫೋಟೊಗಳನ್ನು ಮಾಧ್ಯಮಗಳು ಹಾಗೂ ರಾಜಕೀಯ ಮುಖಂಡರಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದಳು.’

‘ಮರ್ಯಾದೆಗೆ ಅಂಜಿದ್ದ ಪತಿ, ಯುವತಿ ಹಾಗೂ ಇತರೆ ಆರೋಪಿಗಳಿಗೆ ಹಣ ನೀಡಿದ್ದರು. ಅಷ್ಟಾದರೂ ಆರೋಪಿಗಳು, ಪದೇ ಪದೇ ಹಣಕ್ಕೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಪತಿ, ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಕೆ.ಆರ್.ಪುರ ಯುವತಿ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡೆ. ಮಾನಸಿಕ ಹಿಂಸೆ ಅನುಭವಿಸಿದೆ’ ಎಂದೂ ಮರಣಪತ್ರದಲ್ಲಿ ಬರೆದಿದ್ದಾರೆ’ ಎಂದೂ ಪತ್ನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.