ADVERTISEMENT

ರೌಡಿ ಶೀಟರ್‌ ಬಿಕ್ಲು ಶಿವು ಕೊಲೆ ಪ್ರಕರಣ: ಮೂರು ತಾಸು ಬೈರತಿ ಬಸವರಾಜ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 16:10 IST
Last Updated 19 ಜುಲೈ 2025, 16:10 IST
ಬೈರತಿ ಬಸವರಾಜ್‌
ಬೈರತಿ ಬಸವರಾಜ್‌   

ಬೆಂಗಳೂರು: ರೌಡಿ ಶೀಟರ್‌ ಶಿವ ಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವು ಕೊಲೆ ಪ್ರಕರಣದ ಐದನೇ ಆರೋಪಿ, ಕೆಆರ್‌ ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಅವರು ಭಾರತಿನಗರ ಠಾಣೆಯಲ್ಲಿ ಶನಿವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗಿ, ತನಿಖಾಧಿಕಾರಿಗಳ ಎದುರು ತಮ್ಮ ಹೇಳಿಕೆ ದಾಖಲಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ‘ನನ್ನ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಪಡಿಸಬೇಕು’ ಎಂದು ಕೋರಿ ಬೈರತಿ ಬಸವರಾಜ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು, ಶನಿವಾರ ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಸೂಚಿಸಿತ್ತು.

ಹೈಕೋರ್ಟ್‌ ಸೂಚನೆಯ ಬೆನ್ನಲ್ಲೇ ಠಾಣೆಗೆ ಬಂದ ಶಾಸಕರನ್ನು ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್ ನೇತೃತ್ವದ ತಂಡವು ಮೂರು ತಾಸು ವಿಚಾರಣೆ ನಡೆಸಿತು.

ADVERTISEMENT

ಜಾಗದ ವಿಚಾರವಾಗಿ ಜಗದೀಶ್, ಕಿರಣ್, ವಿಮಲ್‌, ಅನಿಲ್ ಮತ್ತು ಇತರರು ಶಾಸಕ ಬೈರತಿ ಬಸವರಾಜ್ ಅವರ ಕುಮ್ಮಕಿನಿಂದ ಕೊಲೆ ಮಾಡಿದ್ದಾರೆ ಎಂದು ಆರೋಪಿ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ದೂರು ನೀಡಿದ್ದರು. ದೂರು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು.

‘ಕೊಲೆಗೆ ಕುಮ್ಮಕ್ಕು ನೀಡಿದ್ದ ಆರೋಪ ನಿಮ್ಮ ಮೇಲಿದೆ. ಕೊಲೆಯಾದ ಶಿವಪ್ರಕಾಶ್ ನಿಮಗೆ ಗೊತ್ತಿತ್ತೇ? ಆರೋಪಿ ಜಗದೀಶ್‌ ನಿಮಗೆ ಹೇಗೆ ಪರಿಚಯ’ ಎಂಬ ಪ್ರಶ್ನೆ ಕೇಳಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡರು.

‘ಈ ಹಿಂದೆ ಬಿಕ್ಲು ಶಿವ ನಿಮ್ಮ ಮೇಲೆ ದೂರು ಕೊಟ್ಟಿದ್ದು ಯಾಕೆ? ಬಿಕ್ಲು ಶಿವುಗೆ ಹೆದರಿಸುವಂತೆ ನಿಮ್ಮ ಆಪ್ತ ಜಗ್ಗನಿಗೆ ಸೂಚನೆ ನೀಡಿದ್ದೀರಾ’ ಎಂಬುದೂ ಸೇರಿದಂತೆ ಹಲವು ಪ್ರಶ್ನೆ ಕೇಳಿದರು ಎಂಬುದು ಗೊತ್ತಾಗಿದೆ.

ವಿಚಾರಣೆ ಮುಗಿಸಿ ಹೊರಬಂದ ಬಳಿಕ ಬೈರತಿ ಬಸವರಾಜ್ ಮಾತನಾಡಿ, ‘ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದ್ದೇನೆ. ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ಅವರ ಸೂಚನೆ ಮೇರೆಗೆ ಠಾಣೆಗೆ ಹಾಜರಾಗಿ ಉತ್ತರಿಸಿದ್ದೇನೆ. ಜುಲೈ 23ರಂದು ಮತ್ತೆ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ಅಂದೂ ಸಹ ವಿಚಾರಣೆಗೆ ಬರುತ್ತೇನೆ’ ಎಂದು ಹೇಳಿದರು.

ಈ ಪ್ರಕರಣದಲ್ಲಿ ಕಿರಣ್‌, ಮದನ್‌, ಸ್ಯಾಮ್ಯುಯಲ್‌, ಪ್ರದೀಪ್, ವಿಮಲ್‌ನನ್ನು ಬಂಧಿಸಿದ್ದಾರೆ. ಮೊದಲ ಆರೋಪಿ ಜಗದೀಶ್ ಅಲಿಯಾಸ್‌ ಜಗ್ಗ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.