ADVERTISEMENT

ಸುರೇಶ್‌ಕುಮಾರ್‌ ರಾಜೀನಾಮೆ ಕೇಳುವ ನೈತಿಕತೆ ಡಿಕೆಶಿಗಿಲ್ಲ: ರವಿಕುಮಾರ್‌

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 20:05 IST
Last Updated 6 ಸೆಪ್ಟೆಂಬರ್ 2020, 20:05 IST
ಎನ್. ರವಿ ಕುಮಾರ್
ಎನ್. ರವಿ ಕುಮಾರ್   

ಬೆಂಗಳೂರು: ‘ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದು, ಜೈಲು ವಾಸ ಅನುಭವಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರ ರಾಜೀನಾಮೆ ಕೇಳುವ ನೈತಿಕತೆಯನ್ನು ಹೊಂದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿರುಗೇಟು ನೀಡಿದ್ದಾರೆ.

ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕ್ರಮ ಕೈಗೊಳ್ಳದಿರುವುದಕ್ಕೆ ನೈತಿಕ ಹೊಣೆ ಹೊತ್ತು ಸುರೇಶ್‌ ಕುಮಾರ್‌ ರಾಜೀನಾಮೆ ನೀಡಬೇಕೆಂಬ ಶಿವಕುಮಾರ್‌ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ರವಿಕುಮಾರ್‌, ‘ಅತ್ಯುನ್ನತ ಘನತೆ, ನೈತಿಕತೆ, ಉತ್ತಮ ಚಾರಿತ್ರ್ಯ, ಶ್ರೀಮಂತ ತತ್ವ ಸಿದ್ಧಾಂತ, ಉತ್ತಮ ಮಾನವೀಯತೆ, ಮನುಷ್ಯತ್ವ ಮತ್ತು ದಕ್ಷ ಆಡಳಿತಕ್ಕೆ ಹೆಸರಾಗಿರುವ ಸುರೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿರುವುದು ಹಾಸ್ಯಾಸ್ಪದ’ ಎಂದಿದ್ದಾರೆ.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ ಶಿಕ್ಷಣ ಸಚಿವರ ಕಾರ್ಯವೈಖರಿಯನ್ನು ಜನರು ಶ್ಲಾಘಿಸಿದ್ದಾರೆ. ಕಾಲಕಾಲಕ್ಕೆ ಪರೀಕ್ಷೆಗೆ ಒಡ್ಡಿಕೊಂಡು ಸಾಂಪ್ರದಾಯಿಕ ಮೌಲ್ಯಗಳನ್ನು ನಂಬುವ ಸುರೇಶ್‌ ಕುಮಾರ್‌, ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ‘ವಿದ್ಯಾಗಮ’ ಯೋಜನೆ ರೂಪಿಸಿರುವುದಕ್ಕೆ ಮೆಚ್ಚುಗೆ ಪಡೆದಿದ್ದಾರೆ. ಸರ್ಕಾರಿ ಶಿಕ್ಷಕರ ಮಗನಾದ ಸುರೇಶ್‌ ಕುಮಾರ್‌ ಅವರಿಗೆ ಕೋವಿಡ್‌–19 ಲಾಕ್‌ಡೌನ್‌ ಅವಧಿಯಲ್ಲಿ ಶಿಕ್ಷಕರು ಎದುರಿಸಿದ ಸಮಸ್ಯೆಗಳ ಸಂಪೂರ್ಣ ಅರಿವಿದೆ. ಶಿಕ್ಷಕರ ಸಂಕಷ್ಟ ತಗ್ಗಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ರವಿಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.