ADVERTISEMENT

ಪ್ರಸಿದ್ಧಿಗೆ ಬರಲು ರಾಕೇಶ್ ಟಿಕಾಯತ್‌ಗೆ ಮಸಿ: ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:25 IST
Last Updated 11 ಆಗಸ್ಟ್ 2022, 4:25 IST
ಟಿಕಾಯತ್‌ಗೆ ಮಸಿ ಬಳಿದಿದ್ದ ಸಂದರ್ಭ (ಸಂಗ್ರಹ ಚಿತ್ರ)
ಟಿಕಾಯತ್‌ಗೆ ಮಸಿ ಬಳಿದಿದ್ದ ಸಂದರ್ಭ (ಸಂಗ್ರಹ ಚಿತ್ರ)   

ಬೆಂಗಳೂರು: ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ (55) ಮೇಲೆ ನಗರದಲ್ಲಿ ನಡೆದಿದ್ದ ಸಭೆಯಲ್ಲಿ ಮಸಿ ಬಳಿದು ಹಲ್ಲೆ ನಡೆಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಹೈಗ್ರೌಂಡ್ಸ್‌ ಪೊಲೀಸರು, 8ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

‘ಆರೋಪಿಗಳು ತಮ್ಮ ಹೆಸರು ರಾತ್ರೋರಾತ್ರಿ ಮುಂಚೂಣಿಗೆ ಬರಬೇಕು. ರಾಜ್ಯದಲ್ಲಿ ಹೆಸರು ಮಾಡಬೇಕೆಂಬ ದುರುದ್ದೇಶದಿಂದ ಟಿಕಾಯತ್‌ಗೆ ಮಸಿ ಬಳಿದಿದ್ದರು’ ಎಂಬ ಅಂಶವನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಆಡಿಯೊ ಸಾಕ್ಷ್ಯ, 89 ಮಂದಿಯ ಹೇಳಿಕೆ ಸೇರಿ 450 ಪುಟಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ.

ADVERTISEMENT

‘ನಗರದಲ್ಲಿ ಸಭೆ ನಡೆಯುವ ಮಾಹಿತಿ ತಿಳಿದಿದ್ದ ಆರೋಪಿಗಳು ಒಂದು ವಾರಕ್ಕೂ ಮೊದಲು ತಂತ್ರ ರೂಪಿಸಿದ್ದರು. ಟಿಕಾಯತ್‌ ಮೇಲೆ ಕೊಳೆತ ಟೊಮೆಟೊ ಹಾಗೂ ಮೊಟ್ಟೆ ಎಸೆಯುವ ಯೋಜನೆ ರೂಪಿಸಿಕೊಂಡಿದ್ದರು. ಅದು ಸಾಧ್ಯವಾಗದಿದ್ದರೆ ಮಸಿ ಬಳಿಯಲು ನಾಲ್ವರು ಒಂದೆಡೆ ಚರ್ಚಿಸಿ ಯೋಜನೆ ರೂಪಿಸಿಕೊಂಡು ಸಭೆಗೆ ಬಂದಿದ್ದರು’ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಯಿಂದ ರಾಕೇಶ್ ಟಿಕಾಯತ್ ಕೈಗೆ ತೀವ್ರ ಪೆಟ್ಟಾಗಿತ್ತು. ಮಸಿ ಎರಚಿದ್ದ ರಿಂದ ಅವರ ಕಣ್ಣಿಗೂ ಹಾನಿಯಾಗಿತ್ತು. ಈ ಘಟನೆ ಖಂಡಿಸಿ ರಾಜ್ಯದಾದ್ಯಂತ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.