ADVERTISEMENT

ರಾಜರಾಜೇಶ್ವರಿನಗರ: ಧರ್ಮ ಮೀರಿ ಸತಿಪತಿಗಳಾದ ಅಂಧ ಜೋಡಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 18:21 IST
Last Updated 21 ಅಕ್ಟೋಬರ್ 2025, 18:21 IST
ಲಗ್ಗೆರೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಂದಾದ ಜೋಡಿಗಳು.
ಲಗ್ಗೆರೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಂದಾದ ಜೋಡಿಗಳು.   

ರಾಜರಾಜೇಶ್ವರಿನಗರ: ಎಲ್ಲರಂತೆ ವೈವಾಹಿಕ ಬದುಕು ನಡೆಸಬೇಕು ಎಂದುಕೊಂಡ ಅವರಿಬ್ಬರೂ ಅಂಧರು. ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿತು. ಧರ್ಮದ ಎಲ್ಲೆ ಮೀರಿ ಆ ಇಬ್ಬರೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹೊಸ ಬದುಕಿಗೆ ಪ್ರವೇಶಿಸಿದರು.

ನಗರದ ಲಗ್ಗೆರೆಯ ‌ಮಂಜುಶ್ರೀ ಕಲ್ಯಾಣ ಮಂಟಪದಲ್ಲಿ ಅರ್ಪಿತಾ ಸೇವಾ ಟ್ರಸ್ಟ್‌ ಅಂಧರು, ಅಂಗವಿಕಲರು, ಅಂತರ್ಜಾತಿ, ಅನ್ಯ ಧರ್ಮದವರಿಗೆ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಹಲವು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಾಮೂಹಿಕ ವಿವಾಹದಲ್ಲಿ ತಂದೆ, ತಾಯಿ, ಬಂಧು ಬಳಗವಿಲ್ಲದ 30 ವರ್ಷದ ಪ್ರಭಾವತಿ ಅವರನ್ನು ಗಂಗಾವತಿ ತಾಲ್ಲೂಕಿನ ‌ಇಮಾಮ್ ಸಾಬ್ ಅವರು ಕೈಹಿಡಿದು ಹಿಂದೂ ಸಂಪ್ರದಾಯದಂತೆ ತಾಳಿ ಕಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ADVERTISEMENT

‘ಮದುವೆಯಾಗಲು ಪರಸ್ಪರ ಒಪ್ಪಿಕೊಂಡೆವು. ನಮಗೆ ಜಾತಿ, ಧರ್ಮ ಅಡ್ಡಬರಲಿಲ್ಲ. ಅನಾಥೆಗೆ ಬಾಳುಕೊಡುತ್ತಿದ್ದೇನೆ ಎಂಬ ತೃಪ್ತಿ ನನಗಿದೆ. ನಾವೆಲ್ಲರೂ ಈ ಮಣ್ಣಿನ ಮಕ್ಕಳು ಎಂಬ ಮಾನವೀಯ ಭಾವನೆಯಿಂದ ನಮ್ಮಂತವರೂ ಬದುಕುವ ವಾತಾವರಣ ನಿರ್ಮಾಣವಾಗಬೇಕು’ ಎಂದು ಇಮಾಮ್‌ಸಾಬ್ ಸಂತಸ ಹಂಚಿಕೊಂಡರು. 

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ,‘ವೈವಾಹಿಕ ಜೀವನ ಎಂಬುದು ಜೀವನದ ಬಹುದೊಡ್ಡ ಭಾಗ. ಎಂತಹ ಸಮಸ್ಯೆ ಬಂದರೂ ಪ್ರೀತಿ, ವಿಶ್ವಾಸದಿಂದ ಅರ್ಥ ಮಾಡಿಕೊಂಡು ಬದುಕುವರೆ ನಿಜವಾದ ಶ್ರೀಮಂತರು’ ಎಂದರು.

ಲಗ್ಗೆರೆಯ ಅರ್ಪಿತಾ ಸೇವಾ ಟ್ರಸ್ಟ್‌ನ ನಾರಾಯಣಸ್ವಾಮಿ, ‘ಇಲ್ಲಿಯವರೆಗೂ 100ಕ್ಕೂ ಹೆಚ್ಚು ವಿಶೇಷ ಚೇತನರಿಗೆ ಉಚಿತ ಮದುವೆ ನೆರವೇರಿಸಿ, ಅವರ ಆರೋಗ್ಯವಂತ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾಗುವ ಆರ್ಥಿಕ ನೆರವು, ಪ್ರೋತ್ಸಾಹ ನೀಡಲಾಗಿದೆ’ ಎಂದರು.

ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ತಾಳಿ ನೀಡಿದರು. ಅಥಣಿ ಶಿವಯೋಗಿ ಮಠದ ಶಿವ ಬಸವ ಸ್ವಾಮಿ, ಕೊರಟಗೆರೆ ಅನ್ನಪೂರ್ಣೇಶ್ವರಿ ಮಠದ ಮಹಾಲಿಂಗಸ್ವಾಮಿ, ಪಾಲಿಕೆ ಮಾಜಿ ಸದಸ್ಯರಾದ ಸಿದ್ದೇಗೌಡ, ವೇಲುನಾಯ್ಕರ್, ಮಂಜುಳ ನಾರಾಯಣಸ್ವಾಮಿ, ಬಿ.ಆರ್.ನಂಜುಂಡಪ್ಪ, ಜಿ.ಮೋಹನ್‍ಕುಮಾರ್, ದಾಸರಹಳ್ಳಿ ನಗರ ಸಭೆ ಮಾಜಿ ಅಧ್ಯಕ್ಷ ಅಂದಾನಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.