ADVERTISEMENT

ರಾಜ್ಯೋತ್ಸವಕ್ಕೆ ಸಿಹಿ ಸುದ್ದಿ! ಮೆಟ್ರೊ ಟಿಕೆಟ್‌ಗಳು ಇನ್ಮುಂದೆ ಮೊಬೈಲ್‌ಲೂ ಲಭ್ಯ

ಮೆಟ್ರೊ ರೈಲು ಪ್ರಯಾಣಕ್ಕಿನ್ನು ಕ್ಯೂಆರ್ ಕೋಡ್ ಎಂಟ್ರಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 14:50 IST
Last Updated 31 ಅಕ್ಟೋಬರ್ 2022, 14:50 IST
ಮೆಟ್ರೊ
ಮೆಟ್ರೊ    

ಬೆಂಗಳೂರು: ಮೆಟ್ರೊ ರೈಲು ನಿಲ್ದಾಣಗಳಲ್ಲಿ ಟಿಕೆಟ್‌ಗಾಗಿ(ಟೋಕನ್‌) ಇನ್ನು ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲ. ಕ್ಯೂಆರ್(ಕ್ವಿಕ್ ರೆಸ್ಪಾನ್ಸ್) ಕೋಡ್ ಟಿಕೆಟ್ ಖರೀದಿ ವ್ಯವಸ್ಥೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು(ಬಿಎಂಆರ್‌ಸಿಎಲ್‌) ಕನ್ನಡ ರಾಜ್ಯೋತ್ಸವದ ದಿನದಂದು ಮಂಗಳವಾರ ಅಧಿಕೃತವಾಗಿ ಪರಿಚಯಿಸುತ್ತಿದೆ.

ಪ್ರಯಾಣ ಆರಂಭಿಸುವ ನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣಗಳನ್ನು ನಮೂದಿಸಿ ಆನ್‌ಲೈನ್‌ನಲ್ಲೇ ದರ ಪಾವತಿಸಿದರೆ ಕ್ಯೂಆರ್ ಕೋಡ್ ಸೃಷ್ಟಿಯಾಗುತ್ತದೆ. ಈ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಎಲ್ಲಾ ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸ್ಕ್ಯಾನಿಂಗ್ ಉಪಕರಣಗಳನ್ನು ಅಳವಡಿಸಲಾಗಿದೆ. ಆ ಉಪಕರಣಕ್ಕೆ ಮೊಬೈಲ್ ಫೋನ್‌ನಲ್ಲಿ ಇರುವ ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿದರೆ ಗೇಟ್‌ ತೆರೆದುಕೊಳ್ಳುತ್ತದೆ. ನಿರ್ಗಮನ ಸಂದರ್ಭದಲ್ಲೂ ಸ್ಕ್ಯಾನ್ ಮಾಡಿ ಹೊರಗೆ ಹೋಗಬಹುದು.

ದೇಶದಲ್ಲೇ ಮೊದಲು: ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಪ್ಲೇಸ್ಟೋರ್‌ನಿಂದ ‘ನಮ್ಮ ಮೆಟ್ರೊ’ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ನೋಂದಾಯಿಸಿಕೊಳ್ಳಬಹುದು. ಬಿಎಂಆರ್‌ಸಿಎಲ್‌ನ ವ್ಯಾಟ್ಸ್‌ಆ್ಯಪ್ ಸಂಖ್ಯೆ (8105556677) ಸೇವ್ ಮಾಡಿಕೊಂಡು ‘ಹಾಯ್‌’ ಎಂಬ ಸಂದೇಶ ಕಳುಹಿಸುವ ಮೂಲಕವೂ ಕ್ಯೂಆರ್‌ ಟಿಕೆಟ್ ಖರೀದಿಸಲು ಚಾಟ್‌ಬಾಟ್‌ನೊಂದಿಗೆ ಸಂವಹನ ಮಾಡಬಹುದು. ಆ್ಯಂಡ್ರಾಯ್ಡ್ ಮತ್ತು ಐಓಸ್ ಮೊಬೈಲ್ ದೂರವಾಣಿ ಬಳಕೆದಾರರಿಗೆ ಚಾಟ್‌ಬಾಟ್‌ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಈ ರೀತಿಯ ವ್ಯವಸ್ಥೆ ಜಾರಿಗೆ ತಂದಿರುವುದು ದೇಶದಲ್ಲೇ ಮೊದಲು’ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ADVERTISEMENT

ಒಮ್ಮೆ ಖರೀದಿಸಿಸುವ ಕ್ಯೂಆರ್ ಕೋಡ್‌ ಟಿಕೆಟ್‌, ಆ ದಿನದ ಅಂತ್ಯದ ತನಕ ಚಾಲ್ತಿಯಲ್ಲಿರುತ್ತದೆ. ಪ್ರಯಾಣ ಸಾಧ್ಯವಾಗದಿದ್ದರೆ ದಿನ ಮುಕ್ತಾಯ ಆಗುವಷ್ಟರಲ್ಲಿ ಟಿಕೆಟ್ ರದ್ದತಿ ವಿಧಾನ ಬಳಸಿ ಮೊತ್ತ ವಾಪಸ್ ಪಡೆಯಬಹುದಾಗಿದೆ. ‌ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಖರೀದಿಸಿದರೆ ಶೇ 5ರಷ್ಟು ರಿಯಾಯಿತಿ ದೊರೆಯಲಿದೆ. ಆದ್ದರಿಂದ ಪ್ರಯಾಣಿಕರು ಕ್ಯೂಆರ್ ಕೋಡ್ ಟಿಕೆಟ್‌ ಸೌಲಭ್ಯ ಬಳಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

‘ಮನೆಯಲ್ಲೇ ಕುಳಿತು ಕ್ಯೂಆರ್‌ ಕೋಡ್ ಟಿಕೆಟ್ ಸಿದ್ಧಪಡಿಸಿಕೊಂಡು ಬಂದರೆ ಅದನ್ನು ನಿಲ್ದಾಣದ ಪ್ರವೇಶ ಗೇಟ್‌ನಲ್ಲಿ ಸ್ಕ್ಯಾನ್ ಮಾಡಿ ಒಳಹೋಗಬಹುದು. ಮನೆಯಲ್ಲಿ ಕುಳಿತು ಚಿತ್ರಮಂದಿರಗಳ ಟಿಕೆಟ್ ಖರೀದಿಸಿ ಸ್ಕ್ಯಾನ್ ಮಾಡಿ ಒಳಹೋಗುವ ಮಾದರಿಯಲ್ಲೇ ಮೆಟ್ರೊ ರೈಲು ಪ್ರಯಾಣಿಕರು ಟಿಕೆಟ್‌ಗಳನ್ನೂ ಖರೀದಿಸಬಹುದು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.