ADVERTISEMENT

ಮೆಟ್ರೊ ಕಾಮಗಾರಿ ವೇಳೆ ಅವಘಡ: ಒಬ್ಬನ ಸಾವು

ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದ ನಿಗಮ: ದೂರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 20:43 IST
Last Updated 10 ನವೆಂಬರ್ 2019, 20:43 IST
ಸಮೀರ್‌
ಸಮೀರ್‌   

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ನ. 7ರಂದು ನಡೆದಿದ್ದು, ತಡವಾಗಿಬೆಳಕಿಗೆ ಬಂದಿದೆ.

ಒಡಿಶಾದ ಸಮೀರ್ ಕಾಂತೋ ಸೇನಾಪತಿ (24) ಮೃತ ಕಾರ್ಮಿಕ. ಅನಿಲ್‌ ಜಾಧವ್ ಮತ್ತು ಎಂಡಿರಬ್ಬನ್‌ ಗಾಯಗೊಂಡಿದ್ದಾರೆ. ಈ ಬಗ್ಗೆ ಎಲೆಕ್ಟ್ರಾನಿಕ್‌ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯಡಿ ಇಲ್ಲಿ ಹುಸ್ಕೂರು ಮೆಟ್ರೊ ನಿಲ್ದಾಣ ನಿರ್ಮಿಸಲಾಗುತ್ತಿದೆ.ನ. 7ರಂದು ಸಂಜೆ 5.30ರ ಸುಮಾರಿಗೆ ನಡೆಯುತ್ತಿದ್ದ ಕಾಮಗಾರಿ ವೇಳೆ ಚೈನ್‌ ಪುಲ್‌ ಸಹಾಯದಿಂದ ಕ್ರಷ್‌ ಇಳಿಸುತ್ತಿದ್ದಾಗ ಚೈನ್‌ ತುಂಡಾಗಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಸಮೀಪದ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಪೈಕಿ, ಸಮೀರ್‌ ಮರುದಿನ ಬೆಳಿಗ್ಗೆ 7ಕ್ಕೆ ಮೃತಪಟ್ಟಿದ್ದಾನೆ.

ADVERTISEMENT

‘ಈ ದುರ್ಘಟನೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಕಾರಣ. ಅಗತ್ಯ ಸುರಕ್ಷತಾ ಕ್ರಮ ವಹಿಸದ ಕಾರಣ ದುರಂತ ಸಂಭವಿಸಿದೆ. ಕಾರ್ಮಿಕರಿಗೆ ಭದ್ರತೆ ಒದಗಿಸದೆ, ನಿರ್ಲಕ್ಷ್ಯ ತೋರಿದ ಬಿಎಂಆರ್‌ಸಿಎಲ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಮೃತನ ಸಂಬಂಧಿ ಅಮಿತಾಬ್‌ ದಾಸ್‌ ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಮಿತಾಬ್‌, ‘ಘಟನೆ ನಡೆದು ಮೂರು ದಿನ ಕಳೆದರೂ ಬಿಎಂಆರ್‌ಸಿಎಲ್‌ ಅಥವಾ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕಂಪನಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಕೂಡಾ ಆಗಿಲ್ಲ. ಹೀಗಾಗಿ ದೇಹ ಇನ್ನೂ ಶವಾಗಾರದಲ್ಲೇ ಇದೆ’ ಎಂದರು.

‘ಸಮೀರ್‌ನ ತಂದೆ ಹೃದ್ರೋಗದಿಂದ ಬಳಲುತ್ತಿದ್ದಾರೆ. ತಾಯಿ ಕೂಡಾ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಅವನಿಗೆ ಒಬ್ಬ ತಮ್ಮ ಇದ್ದಾನೆ. ಸಮೀರ್‌ನ ಆದಾಯದಿಂದ ಇಡೀ ಕುಟುಂಬ ಬದುಕುತ್ತಿತ್ತು. ಈಗ ಅನಾಥವಾಗಿದೆ’ ಎಂದು ಕಣ್ಣೀರಿಟ್ಟರು.

₹ 10 ಲಕ್ಷ ಪರಿಹಾರ?: ‘ಅವಘಡದಲ್ಲಿ ಗಾಯಗೊಂಡ ಮೂವರು ಕಾರ್ಮಿಕರ ಪೈಕಿ, ಒಬ್ಬರು ಮೃತರಾಗಿದ್ದಾರೆ. ನಿಯಮದ ಪ್ರಕಾರ, ಈ ಕಾಮಗಾರಿಯ ಗುತ್ತಿಗೆಯನ್ನು ಯಾವ ಕಂಪನಿಯವರು ಪಡೆದಿದ್ದಾರೋ, ಅವರೇ ಪರಿಹಾರ ನೀಡಬೇಕು. ಸುಮಾರು ₹ 10 ಲಕ್ಷ ಪರಿಹಾರ ದೊರೆಯಬಹುದು’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮೃತರಾಗಿದ್ದರು 10 ಕಾರ್ಮಿಕರು
‘ನಮ್ಮ ಮೆಟ್ರೊ’ ಮೊದಲನೆಯ ಹಂತದ ಕಾಮಗಾರಿ ವೇಳೆ ಒಟ್ಟು 13 ಕಾರ್ಮಿಕರು ಗಾಯಗೊಂಡಿದ್ದರೆ, ಹತ್ತು ಮಂದಿ ಸಾವಿಗೀಡಾಗಿದ್ದರು. ಮೃತರ ಕುಟುಂಬದವರಿಗೆ ₹ 93.42 ಲಕ್ಷ ಪರಿಹಾರ ನೀಡಲಾಗಿತ್ತು.

ಎರಡನೇ ಹಂತದ ಕಾಮಗಾರಿ ವೇಳೆ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ನಿಗಮ ಹೇಳಿತ್ತು. ಆದರೆ, ಈಗಲೂ ಕಾರ್ಮಿಕರು ಗಾಯಗೊಳ್ಳುವುದು, ಸಾವಿಗೀಡಾಗುವುದು ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.