ADVERTISEMENT

ನಮ್ಮ ಮೆಟ್ರೊ: ನಗರಕ್ಕೆ ಬಂದಿಳಿದ ಹೊಸ ಟಿಬಿಎಂ

ಡೇರಿ ವೃತ್ತದಿಂದ ನ್ಯಾಷನಲ್‌ ಮಿಲಿಟರಿ ಸ್ಕೂಲ್‌ ಮಾರ್ಗದಲ್ಲಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 19:31 IST
Last Updated 27 ಡಿಸೆಂಬರ್ 2020, 19:31 IST
ಮೆಟ್ರೊ ರೈಲು ಸುರಂಗ ಮಾರ್ಗ (ಸಾಂದರ್ಭಿಕ ಚಿತ್ರ)
ಮೆಟ್ರೊ ರೈಲು ಸುರಂಗ ಮಾರ್ಗ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಮೆಟ್ರೊ ರೈಲು ಸುರಂಗ ಮಾರ್ಗ ಕೊರೆಯಲು ಮತ್ತೆ ಮೂರು ಯಂತ್ರಗಳು (ಟಿಬಿಎಂಗಳು) ನಗರಕ್ಕೆ ಬಂದಿಳಿದಿವೆ. ಈ ಪೈಕಿ ಒಂದು ಯಂತ್ರವು ನಗರದ ಡೇರಿ ವೃತ್ತದಿಂದ ಮೈಕೋ ಇಂಡಸ್ಟ್ರೀಸ್ ನಡುವೆ, ಮತ್ತೆರಡು ಯಂತ್ರಗಳು ಡೇರಿ ವೃತ್ತದಿಂದ ನ್ಯಾಷನಲ್‌ ಮಿಲಿಟರಿ ಸ್ಕೂಲ್‌ವರೆಗಿನ ಮಾರ್ಗದಲ್ಲಿ ಕಾರ್ಯಾಚರಣೆಗೆ ಅಣಿಯಾಗಲಿವೆ.

ಈ ಮಾರ್ಗದ ನಿರ್ಮಾಣ ಗುತ್ತಿಗೆ ಪಡೆದಿರುವ ಅಫ್ಕಾನ್ಸ್‌ ಇನ್‌ಫ್ರಾಸ್ಟ್ರಕ್ಷರ್‌ ಕಂಪನಿಯ ನೇತೃತ್ವದಲ್ಲಿ ಈ ಯಂತ್ರಗಳು ಕಾರ್ಯನಿರ್ವಹಿಸಲಿವೆ. ರೀಚ್‌ 6ರಲ್ಲಿನ 3.65 ಕಿ.ಮೀ. ಸುರಂಗ ಮಾರ್ಗವನ್ನು ಇವು ಕೊರೆಯಲಿವೆ. 21.38 ಕಿ.ಮೀ. ಉದ್ದದ ಈ ಮಾರ್ಗವು ಮುಂದೆ ಗುಲಾಬಿ ಮಾರ್ಗದಡಿ ಬರುವ ನಾಗವಾರ–ಕಾಳೇನ ಅಗ್ರಹಾರ ಮಾರ್ಗವನ್ನು ಸಂಪರ್ಕಿಸಲಿದೆ. ಒಟ್ಟು 18 ನಿಲ್ದಾಣಗಳು ಈ ಮಾರ್ಗದಲ್ಲಿ ತಲೆ ಎತ್ತಲಿವೆ.

ಸದ್ಯ ಈ ಮೂರು ಟಿಬಿಎಂಗಳಿಗೆ ಕ್ರಮವಾಗಿ ಎಸ್‌–1259, ಎಸ್‌–1260 ಮತ್ತು ಎಸ್‌–1261 ಎಂದು ಹೆಸರಿಡಲಾಗಿದೆ. ಕಾರ್ಯಾಚರಣೆ ಸುಗಮವಾಗಿ ನಡೆಯುವ ಉದ್ದೇಶದಿಂದ ಅಫ್ಕಾನ್ಸ್‌ ಕಂಪನಿಯು ಯಂತ್ರಗಳಿಗೆ ಈ ಹೆಸರಿಟ್ಟಿದೆ.

ADVERTISEMENT

ಜರ್ಮನ್ ಮೂಲದ ಹೆರೆನ್‌ಕ್ನೆಚ್ ಕಂಪನಿಯು ಈ ಯಂತ್ರಗಳನ್ನು ಪೂರೈಸುತ್ತಿದ್ದು, ಅದರ ಬಹುತೇಕ ಬಿಡಿಭಾಗಗಳು ಚೀನಾದಲ್ಲಿ ತಯಾರಾಗುತ್ತಿವೆ. ಚೀನಾದಿಂದ ಚೆನ್ನೈನ ಬಂದರಿಗೆ 15 ದಿನಗಳ ಹಿಂದೆ ಈ ಯಂತ್ರಗಳು ಬಂದಿದ್ದವು. ಅಲ್ಲಿಂದ ಶನಿವಾರ ಈ ಯಂತ್ರಗಳು ನಗರಕ್ಕೆ ಬಂದಿವೆ. ಸರಾಸರಿ ಪ್ರತಿ 2 ಕಿ.ಮೀ.ಗೆ (ಜೋಡಿ ಸುರಂಗ) ಒಂದರಂತೆ ಒಟ್ಟಾರೆ ಆರು ಟಿಬಿಎಂಗಳು ಸುರಂಗ ಕೊರೆಯಲಿವೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

9 ಟಿಬಿಎಂ ನಿಯೋಜನೆ ಉದ್ದೇಶ: ಜಯನಗರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕೇಂದ್ರದಿಂದ ನಾಗವಾರ ನಡುವೆ 10.37 ಕಿ.ಮೀ. ಉದ್ದದ ಜೋಡಿ ಸುರಂಗ ಮಾರ್ಗಕ್ಕೆ ಒಂಬತ್ತು ಟಿಬಿಎಂಗಳನ್ನು ಅಣಿಗೊಳಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ. ಈ ಪೈಕಿ ಉಳಿದ ಮೂರು ಯಂತ್ರಗಳು ಚೆನ್ನೈನಲ್ಲೇ ತಯಾರಾಗಲಿವೆ. ಒಟ್ಟು ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಇದರಲ್ಲಿ ಎರಡು ಪ್ಯಾಕೇಜ್‌ಗಳಲ್ಲಿ ಈಗಾಗಲೇ ಸುರಂಗ ಕೊರೆಯುವ ಕೆಲಸ ಪ್ರಗತಿಯಲ್ಲಿದೆ. ಟ್ಯಾನರಿ ರಸ್ತೆಯ ಕಂಟೋನ್ಮೆಂಟ್‌ನಿಂದ ಶಿವಾಜಿನಗರ ಕಡೆಗೆ ಟಿಬಿಎಂ ‘ಊರ್ಜಾ’ ಹಾಗೂ ‘ವಿಂದ್ಯಾ’ ಮತ್ತು ಶಿವಾಜಿನಗರದಿಂದ ವೆಲ್ಲಾರ ಕಡೆಗೆ ‘ಅವನಿ’ ಕಾರ್ಯ ಆರಂಭಿಸಿವೆ.

ಅ. 17ರಂದು ಮೊದಲ ಟಿಬಿಎಂ ‘ಊರ್ಜಾ’ಗೆ ಚಾಲನೆ ದೊರೆತಿತ್ತು. ಇದು ಸುಮಾರು 200 ಮೀಟರ್ ಸುರಂಗ ಕೊರೆದಿದೆ. ನಂತರ ಕಾರ್ಯಾಚರಣೆ ಆರಂಭಿಸಿದ ‘ಅವನಿ’ ಹಾಗೂ ‘ವಿಂದ್ಯಾ’ ಕ್ರಮವಾಗಿ 150 ಮೀ. ಮತ್ತು 100 ಮೀ. ಮಾರ್ಗ ಕ್ರಮಿಸಿವೆ. ನೆಲದಡಿ ಮಾರ್ಗ ದುರ್ಗಮವಾಗಿದ್ದು, ಗಟ್ಟಿಕಲ್ಲುಮಿಶ್ರಿತ ಮಣ್ಣು ಇದೆ. ಆದರೂ, ಈವರೆಗೆ ಯಂತ್ರವೇ ಸ್ಥಗಿತಗೊಳ್ಳುವಂತಹ ಯಾವುದೇ ಅಡ್ಡಿ ಉಂಟಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.