ADVERTISEMENT

ಸಂಚಾರ ಆಧಾರಿತ ಅಭಿವೃದ್ಧಿಗೆ ಆದ್ಯತೆ: ಬಿಎಂಆರ್‌ಸಿಎಲ್‌–ಡಬ್ಲ್ಯುಆರ್‌ಐ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 22:42 IST
Last Updated 31 ಆಗಸ್ಟ್ 2021, 22:42 IST
ಮೆಟ್ರೊ
ಮೆಟ್ರೊ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ 2ಎ ಮತ್ತು 2ಬಿ ಮಾರ್ಗಗಳ ಸಂಚಾರ ಆಧಾರಿತ ಅಭಿವೃದ್ಧಿ (ಟಿಒಡಿ) ಹಾಗೂ ಬಹು ವಿಧಾನಗಳ ಏಕೀಕರಣ (ಎಂಎಂಐ) ವ್ಯವಸ್ಥೆ ಅನುಷ್ಠಾನಗೊಳಿಸಲು ಭಾರತೀಯ ‘ವಿಶ್ವ ಸಂಪನ್ಮೂಲಗಳ ಸಂಸ್ಥೆ’ಯೊಂದಿಗೆ (ಡಬ್ಲುಆರ್‌ಐ ಇಂಡಿಯಾ)ಯೊಂದಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೈಜೋಡಿಸಿದೆ.

ಸಿಲ್ಕ್‌ ಬೋರ್ಡ್-ಕೆ.ಆರ್. ಪುರ (2ಎ) ಹಾಗೂ ಕೆ.ಆರ್. ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (2ಬಿ) ನಡುವೆ ಮೆಟ್ರೊ ಮಾರ್ಗಗಳ ನಿರ್ಮಾಣಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ), ಬಿಎಂಆರ್‌ಸಿಎಲ್‌ಗೆ ಆರ್ಥಿಕ ನೆರವು ನೀಡಲಿದೆ. ಈ ನೆರವು ಪಡೆಯಲು ಡಬ್ಲುಆರ್‌ಐ ಇಂಡಿಯಾ ಜತೆಗೆ ನಿಗಮವು ಉದ್ದೇಶಿತ ಮಾರ್ಗದ ಮೆಟ್ರೊ ಕಾರಿಡಾರ್‌ಗಳ ಎರಡೂ ಬದಿಯಲ್ಲಿ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಟಿಒಡಿ ಮತ್ತು ಎಂಎಂಐ ಅನುಷ್ಠಾನಗೊಳಿಸಲಿದೆ.

ಇದೇ 26, 27 ಮತ್ತು 31ರಂದು ನಗರದಲ್ಲಿ ಟಿಒಡಿ ಮತ್ತು ಎಂಎಂಐ ಒದಗಿಸುವ ಸಂಬಂಧ ಉನ್ನತ ಮಟ್ಟದ ಸಭೆ ಹಾಗೂ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ADVERTISEMENT

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮಾತನಾಡಿ, ‘ಡಬ್ಲುಆರ್‌ಐ ಇಂಡಿಯಾ ಜತೆ 2ಎ ಮತ್ತು 2ಬಿ ಮಾರ್ಗದುದ್ದಕ್ಕೂ ಟಿಒಡಿ ಮತ್ತು ಎಂಎಂಐ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ನಿಗಮವು ಉತ್ಸುಕವಾಗಿದೆ. ವಿಶ್ವದ ಅತ್ಯುತ್ತಮ ಟಿಒಡಿ ಅನುಷ್ಠಾನಗಳನ್ನು ಮಾದರಿಯಾಗಿ ಇಟ್ಟುಕೊಂಡು ಈ ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿಗೊಳಿಸಲಾಗುವುದು’ ಎಂದು ಹೇಳಿದರು.

ಡಬ್ಲುಆರ್‌ಐ ಇಂಡಿಯಾ ನಿರ್ದೇಶಕ ಜಯ ದಿಂಡಾವ್, ಟಿಒಡಿ ಯಶಸ್ವಿ ಅನುಷ್ಠಾನಕ್ಕೆ ಅದರಲ್ಲೂ ವಿಶೇಷವಾಗಿ ಭೂಮೌಲ್ಯ, ಸಂಚಾರ ಮತ್ತಿತರ ವಿಚಾರಗಳಲ್ಲಿ ಸಂಸ್ಥೆಯು ಅಗತ್ಯ ತಾಂತ್ರಿಕ ಸಲಹೆ ಮತ್ತು ಸಹಕಾರವನ್ನು ನೀಡಲಿದೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.