ADVERTISEMENT

ನಿರ್ಮಾಣವಾಗದ ವಿಭಜಕ: ಸವಾರರಿಗೆ ಆತಂಕ

ಪೀಣ್ಯ–ನಾಗಸಂದ್ರ ಮೆಟ್ರೊ ಪಿಲ್ಲರ್‌ ನಡುವಿನ ಜಾಗ ಒತ್ತುವರಿ l ಕಸ ಸುರಿಯುವ ಜಾಗವಾಗಿ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:06 IST
Last Updated 12 ಆಗಸ್ಟ್ 2019, 20:06 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು:‘ನಮ್ಮ ಮೆಟ್ರೊ’ ಹಸಿರು ಮಾರ್ಗದ ಪೀಣ್ಯ–ನಾಗಸಂದ್ರ ನಡುವೆ ವಿಭಜಕ ನಿರ್ಮಿಸುವುದಾಗಿ ಹೇಳಿದ್ದ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತನ್ನ ಮಾತನ್ನು ಕಾರ್ಯಗತಗೊಳಿಸದ ಕಾರಣ ವಾಹನ ಸವಾರರು ಆತಂಕ ಎದುರಿಸುವಂತಾಗಿದೆ.

ಈ ಮಾರ್ಗದಲ್ಲಿ ವಿಭಜಕ ನಿರ್ಮಾಣವಾಗದ ಕಾರಣ ಮೆಟ್ರೊ ಪಿಲ್ಲರ್‌ಗಳ ನಡುವಿನ ಜಾಗವನ್ನು ಒತ್ತುವರಿ ಮಾಡಿಕೊಂಡು, ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರಿಗೆ ಇದರಿಂದ ತೊಂದರೆಯಾಗುತ್ತಿದೆ.

‘ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ
ಗಳು (ಎನ್‌ಎಚ್‌ಎಐ) ನಿಗಮದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಪ್ರದೇಶದಲ್ಲಿ ಮೆಟ್ರೊ ಮಾರ್ಗದುದ್ದಕ್ಕೂ ವಿಭಜಕ ಮತ್ತು ಪಕ್ಕದಲ್ಲಿಯೇ 15 ಅಡಿ ಅಗಲದ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಬೇಕು ಎಂದು ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‘ವಿಭಜಕ ಮತ್ತು ಸರ್ವಿಸ್‌ ರಸ್ತೆ ನಿರ್ಮಾಣ ಮಾಡಲು ಅನುಮತಿ ಕೋರಿ ನಿಗಮವು ಎನ್‌ಎಚ್‌ಎಐಗೆ ದಾಖಲೆಗಳನ್ನು ಸಲ್ಲಿಸಿದೆ. ಆದರೂ ಈ ಕಾರ್ಯ ಮೂರು ವರ್ಷಗಳಿಂದ ಬಾಕಿ ಉಳಿದಿದೆ’ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರು, ಮೆಟ್ರೊ ಪಿಲ್ಲರ್‌ಗಳ ನಡುವಿನ ಜಾಗವನ್ನು ಕಸ ಸುರಿಯುವ ತಾಣದಂತೆ
ಬಳಸಿಕೊಳ್ಳುತ್ತಿದ್ದಾರೆ. ಹಸಿ ಕಸವನ್ನು ಬೇರ್ಪಡಿಸುವ ಪೌರ ಕಾರ್ಮಿಕರು, ಉಳಿದ ಕಸವನ್ನು ಇಲ್ಲಿಯೇ ಸುಡುತ್ತಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ ನಂತರ ಕಸ ಸುರಿಯುವುದು ಕಡಿಮೆಯಾಗಿದೆ. ಆದರೂ, ವಿಭಜಕ ಮತ್ತು ಸರ್ವಿಸ್‌ ರಸ್ತೆ ನಿರ್ಮಾಣದಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ’ ಎಂದು ಅವರು ಹೇಳಿದರು.

ಈ ಬಗ್ಗೆ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ‘ವಿಭಜಕ ನಿರ್ಮಿಸಲು ನಿಗಮ ಒಪ್ಪಿಕೊಂಡಿತ್ತೇ ಎಂಬುದರ ಕುರಿತು ಮಾಹಿತಿ ಇಲ್ಲ. ವಿಭಜಕ ನಿರ್ಮಿಸುವುದಕ್ಕೆ ಹೆಚ್ಚು ಹಣ ವೆಚ್ಚವಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳನ್ನೇ ಸಂಪರ್ಕಿಸಿ’ ಎಂದರು.

‘ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಬೇಕು ಮತ್ತು ಬಿಎಂಆರ್‌ಸಿಎಲ್‌ ಅಧಿಕಾರಿಗಳು ವಿಭಜಕ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕು. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಂತ ಅಗತ್ಯ ಎಂದು ಪ್ರಾಧಿಕಾರದ ಅಧಿಕಾರಿಗಳು ನಿಗಮದ ಗಮನಕ್ಕೆ ತಂದಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಬಿಎಂಆರ್‌ಸಿಎಲ್‌ಗೆ ₹2.6 ಕೋಟಿ ಮನ್ನಾ?

ನಾಗಸಂದ್ರ ಮತ್ತು ದಾಸರಹಳ್ಳಿ ಮೆಟ್ರೊ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವ ಬಿಎಂಆರ್‌ಸಿಎಲ್‌ ಪ್ರಸ್ತಾವಕ್ಕೆ ಎನ್‌ಎಚ್‌ಎಐ ಅನುಮೋದನೆ ನೀಡಿದೆ. ಅಲ್ಲದೆ, ಈ ಕಾರ್ಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಜಾಗವನ್ನು ಬಳಸಿಕೊಳ್ಳಲು ತಗಲುವ ₹2.6 ಕೋಟಿ ಶುಲ್ಕವನ್ನು ಎನ್‌ಎಚ್‌ಎಐ ಮನ್ನಾ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯೊಬ್ಬಳು ಸಾವಿಗೀಡಾದ ನಂತರ ಸುರಕ್ಷತೆಯ ದೃಷ್ಟಿಯಿಂದ ಈ ನಿಲ್ದಾಣಗಳ ನಡುವೆ ಸುರಂಗ ಮಾರ್ಗ ನಿರ್ಮಿಸಲು ನಿಗಮ ಮುಂದಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸುರಂಗ ಮಾರ್ಗಕ್ಕೆ ಬದಲಾಗಿ, ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪರಿಷ್ಕೃತ ಪ್ರಸ್ತಾವಕ್ಕೆ ಎನ್‌ಎಚ್‌ಎಐ ಅನುಮೋದನೆ ನೀಡಿದ್ದು, ಶುಲ್ಕ ಮನ್ನಾ ಮಾಡುವ ಮನವಿಯನ್ನೂ ಪುರಸ್ಕರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.