ADVERTISEMENT

ಡಿಪೋ ವ್ಯವಸ್ಥಾಪಕರ ಬಂಧನಕ್ಕೆ ಆಗ್ರಹ

ಕಿರುಕುಳ ಆರೋಪ: ಬಿಎಂಟಿಸಿ ಚಾಲಕ ಹೊಳೆಬಸಪ್ಪ ಸೇರಿ ಮೂವರು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 21:21 IST
Last Updated 30 ಆಗಸ್ಟ್ 2022, 21:21 IST
ಡಿಪೋದ ಎದುರು ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಡಿಪೋದ ಎದುರು ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಎಂಟಿಸಿ ಬಸ್‌ ಡಿಪೋದ ಚಾಲಕ ಹೊಳೆಬಸಪ್ಪ (48) ಅವರು ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಡಿಪೋ ವ್ಯವಸ್ಥಾಪಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಡಿಪೋ ಎದುರು ಜಮಾಯಿಸಿದ ಕಾರ್ಯಕರ್ತರು ಸಾರಿಗೆ ನೌಕರನ ಆತ್ಮಹತ್ಯೆಗೆ ನ್ಯಾಯ ಸಿಗಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಬಿಎಂಟಿಸಿಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ADVERTISEMENT

‘ಕೇವಲ 24 ಗಂಟೆಯ ಅವಧಿಯಲ್ಲಿ ಜಿಗಣಿ, ಬನಶಂಕರಿ ಹಾಗೂ ಚನ್ನಸಂದ್ರ ಡಿಪೋಗಳ ಮೂವರು ನೌಕರರು ಆತ್ಮಹತ್ಯೆಗೆ ಶರಣಾಗಿರುವುದು ದುರಂತ. ಇಷ್ಟು ಅನಾಹುತಗಳು ಘಟಿಸಿದರೂ ಸರ್ಕಾರ ಕಣ್ಣು ಕಾಣದಂತೆ, ಕಿವಿಯೂ ಕೇಳಿಸದಂತೆ ಇದೆ’ ಎಂದು ಪಕ್ಷದ ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಆಕ್ರೋಶ ಹೊರಹಾಕಿದರು.

ಆತ್ಮಹತ್ಯೆಗೆ ಕಾರಣರಾದ ಡಿಪೋ ವ್ಯವಸ್ಥಾಪಕರನ್ನು ಬಂಧಿಸಬೇಕು. ಸೇವೆಯಿಂದ ಅಮಾನತು ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ನೌಕರರ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಚನ್ನಪ್ಪಗೌಡ ನಲ್ಲೂರು, ಸುರೇಶ್ ರಾಥೋಡ್, ನಂಜಪ್ಪ ಕಾಳೇಗೌಡ, ಶ್ಯಾಮಸುಂದರ್ ಮನಂ, ಶಶಿಧರ ಆರಾಧ್ಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್‌
ಹೊಳೆಬಸಪ್ಪ ಅವರ ಪತ್ನಿ ದೂರು ನೀಡಿದ್ದು, ಡಿಪೋ ವ್ಯವಸ್ಥಾಪಕ ಮಲ್ಲಿಕಾರ್ಜುನಯ್ಯ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಲ್ಲಿಕಾರ್ಜುನಯ್ಯ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ನನ್ನ ಬಳಿ ಪತಿ ಹೇಳಿಕೊಂಡಿದ್ದರು’ ಎಂದು ಹೊಳೆಬಸಪ್ಪ ಅವರ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಸಾವಿಗೆ ವ್ಯವಸ್ಥಾಪಕ ಕಾರಣವೆಂದು ಬರೆದಿಟ್ಟಿರುವ ಡೆತ್‌ನೋಟ್‌ ಸಹ ಸಿಕ್ಕಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.