ADVERTISEMENT

ಅಂಧರ ಪಾಸ್‌ಗೆ ಬೆಲೆ ನೀಡದ ‘ವಜ್ರ’ ನಿರ್ವಾಹಕರು

ಟಿಕೆಟ್‌ ತೆಗೆದುಕೊಳ್ಳದೇ ಇದ್ದರೆ ಬಸ್‌ನಿಂದ ಇಳಿಸುತ್ತಿರುವ ಬಿಎಂಟಿಸಿ ನೌಕರರು

ಬಾಲಕೃಷ್ಣ ಪಿ.ಎಚ್‌
Published 23 ಜುಲೈ 2025, 23:30 IST
Last Updated 23 ಜುಲೈ 2025, 23:30 IST
ಸುರೇಶ್‌
ಸುರೇಶ್‌   

ಬೆಂಗಳೂರು: ಬಿಎಂಟಿಸಿಯ ವಜ್ರ ಬಸ್‌ಗಳಲ್ಲಿ ಅಂಧರಿಗೆ ಪ್ರಯಾಣಿಸಲು ಅವಕಾಶ ನೀಡಿ ಸಂಚಾರ ವ್ಯವಸ್ಥಾಪಕರು ಹೊರಡಿಸಿರುವ ಆದೇಶವನ್ನು ಬಿಎಂಟಿಸಿ ಬಸ್‌ ನಿರ್ವಾಹಕರೇ ಪಾಲನೆ ಮಾಡುತ್ತಿಲ್ಲ. ಅಂಧ ಪ್ರಯಾಣಿಕರು ವಜ್ರ ಬಸ್‌ ಹತ್ತಿದರೆ ಇಳಿಸುತ್ತಿದ್ದಾರೆ. ಇಲ್ಲವೇ ಟಿಕೆಟ್‌ ದರ ಪಡೆಯುತ್ತಿದ್ದಾರೆ.

‘ಹೆಬ್ಬಾಳಕ್ಕೆ ಬರಲು ಟಿನ್‌ ಫ್ಯಾಕ್ಟರಿಯಲ್ಲಿ ವೋಲ್ವೊ ವಜ್ರ ಬಸ್‌ ಹತ್ತಿದ್ದೆ. ಕಂಡೆಕ್ಟರ್‌ಗೆ ಪಾಸ್ ತೋರಿಸಿದರೂ, ಪಾಸ್‌ ಆಗಲ್ಲ. ದುಡ್ಡುಕೊಟ್ಟು ಟಿಕೆಟ್‌ ತೆಗೆದುಕೊ ಇಲ್ಲದೇ ಇದ್ದರೆ ಇಳಿ ಎಂದು ಹೇಳಿದರು. ಈ ಬಸ್‌ಗಳಿಗೆ ಪಾಸ್‌ ಅನ್ವಯವಾಗುತ್ತದೆ ಎಂದು ಹೇಳಿದೆ. ಎಲ್ಲಿದೆ ಸುತ್ತೋಲೆ ತೋರಿಸು ಎಂದು ದಬಾಯಿಸಿದರು. ಸುತ್ತೋಲೆ ನಾವಲ್ಲ ನೀವು ಇಟ್ಟುಕೊಳ್ಳಬೇಕು ಎಂದು ಉತ್ತರಿಸಿದೆ. ನನ್ನ ಬಳಿ ಪಾಸ್‌ ಇರುವಾಗ ಯಾಕೆ ದುಡ್ಡುಕೊಡಬೇಕು ಎಂದು ಟಿಕೆಟ್‌ ದರ ಪಾವತಿ ಮಾಡಲಿಲ್ಲ. ಮುಂದಿನ ನಿಲ್ದಾಣ ಕಸ್ತೂರಿನಗರಕ್ಕೆ ಬಂದಾಗ ಇಳಿಯಲು ಹೇಳಿದ್ರು. ಅಲ್ಲಿ ಇಳಿದೆ’ ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂಪೂರ್ಣ ಅಂಧತ್ವ ಇರುವ ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೊಂದು ವಜ್ರ ಬಸ್‌ ಬಂತು. ಅದಕ್ಕೆ ಹತ್ತಿದೆ. ಆ ಬಸ್‌ನ ಕಂಡೆಕ್ಟರ್‌ ಕೂಡ ಪಾಸ್‌ ಒಪ್ಪದೇ ಟಿಕೆಟ್ ತೆಗೆದುಕೊಳ್ಳಲು ತಿಳಿಸಿದರು. ಇಲ್ಲಿಯೂ ಜಗಳವಾಡಿ ಇಳಿಯೋದು ಬೇಡ ಎಂದು ₹30 ಪಾವತಿಸಿ ಟಿಕೆಟ್‌ ತಗೊಂಡು ಸಂಚರಿಸಿದೆ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಸಾಮಾನ್ಯ ಬಸ್‌ಗಳು ಬೇಕಾದಷ್ಟು ಇರುತ್ತವೆ. ಸಾಮಾನ್ಯ ಬಸ್‌ಗಳಲ್ಲಿಯೇ ಹೋಗುತ್ತೇನೆ. ಸಂಜೆ ವಾಪಸ್‌ ಬರುವಾಗ 10 ಓಲ್ವೊ ಬಸ್‌ಗಳು ಬಂದರೆ ಒಂದು ಸಾಮಾನ್ಯ ಬಸ್‌ ಇರುತ್ತದೆ. ಓಲ್ವೊ ಬಸ್‌ ಹತ್ತಿದಾಗಲೆಲ್ಲ ಹೀಗೇ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಬಸ್‌ಗಳಲ್ಲಿ ನಾವು ಹೋಗುವಾಗ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಓಲ್ವೊ ಬಸ್‌ಗಳಲ್ಲಿ ನಾವೇ ಸುತ್ತೋಲೆ ಇಟ್ಟುಕೊಂಡು ಕಂಡೆಕ್ಟರ್‌ಗೆ ತೋರಿಸಿದರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ಬಿಎಂಟಿಸಿಯವರೇ ಚಾಲಕ, ನಿರ್ವಾಹಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಸಾಮಾನ್ಯ ಬಸ್‌ಗಳಲ್ಲಿ ಇನ್ನೊಂದು ತರಹದ ಸಮಸ್ಯೆ. ಬಸ್‌ ಎಲ್ಲಿಗೆ ಹೋಗುತ್ತದೆ ಎಂದು ಕೇಳಿದರೆ ಹೇಳುವುದೇ ಇಲ್ಲ. ಯಾವ ಬಸ್‌ ಹೋಗುತ್ತದೆ ಎಂದರೂ ಚಾಲಕರು ಉತ್ತರಿಸುವುದಿಲ್ಲ. ಕೆಳಗೆ ಇರುವ ಪ್ರಯಾಣಿಕರಲ್ಲಿ ಕೇಳಬೇಕು. ಅವರು ತೋರಿಸಿದ ಬಸ್‌ ಹತ್ತಲು ಹೋದರೆ ಬಸ್‌ ಲೇಟ್‌ ಇದೆ ಎಂದು ಸುಳ್ಳು ಹೇಳುತ್ತಾರೆ. ಬಸ್‌ ನಿರ್ವಾಹಕರು ಮತ್ತು ಚಾಲಕರು ಅಂಧರೊಂದಿಗೆ ಮಾನವೀಯತೆಯಿಂದ ವರ್ತಿಸುವುದನ್ನು ಅವರ ಮೇಲಧಿಕಾರಿಗಳು ಮೊದಲು ಹೇಳಿಕೊಡಬೇಕು’ ಎಂದು ನ್ಯಾಷನಲ್‌ ಫೆಡರೇಷನ್‌ ಆಫ್‌ ಬ್ಲೈಂಡ್‌ನ ರಾಜ್ಯ ಯುವ ಘಟಕದ ಕಾರ್ಯದರ್ಶಿ ವೀರೇಶ್‌ ಆಗ್ರಹಿಸಿದರು.

ಆದೇಶದಲ್ಲಿ ಏನಿದೆ?: 

ಪೂರ್ಣ ಅಂಧರಾಗಿದ್ದು, ಅಂಧರ ಉಚಿತ ಪಾಸ್‌ ಅಥವಾ ಅಂಗವಿಕಲರ ರಿಯಾಯಿತಿ ಪಾಸ್‌ ಪಡೆದವರಿಗೆ ಬಿಎಂಟಿಸಿಯ ಸಾಮಾನ್ಯ ಮತ್ತು ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಬಸ್‌ಗಳಲ್ಲಿ ಮುಂಬಾಗಿಲಿನ ಕಿಟಕಿಯ ಎಡಭಾಗದ ಒಂದು ಆಸನವನ್ನು ಮತ್ತು ಹಿಂದೆ ಅಥವಾ ಮಧ್ಯದ ಬಾಗಿಲಿನ ಎದುರಿಗಿರುವ ಎರಡು ಆಸನಗಳನ್ನು ಅಂಗವಿಕಲರಿಗೆ ಮೀಸಲಿಡಲಾಗಿದೆ. ವಜ್ರ ವಾಹನಗಳಲ್ಲಿ ಮಧ್ಯದ ಬಾಗಿಲಿನ ಎದುರಿಗಿರುವ ಎರಡು ಆಸನಗಳನ್ನು ಮೀಸಲಿಡಲಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.

ವೀರಪ್ಪ
ಪೂರ್ಣ ಅಂಧತ್ವ ಹೊಂದಿದವರಿಗೆ ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲದೇ ವೋಲ್ವೊ ಬಸ್‌ಗಳಲ್ಲಿಯೂ ಸಂಚರಿಸಲು ಅವಕಾಶ ನೀಡಲಾಗಿದೆ. ಅವಕಾಶ ನಿರಾಕರಿಸುವ ಚಾಲಕರು ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಜಿ.ಟಿ. ಪ್ರಭಾಕರ ರೆಡ್ಡಿ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ

‘ಬಸ್‌ನಿಂದ ಬಿದ್ದಿದ್ದೆ’ ‘ಜುಲೈ 6ರಂದು ಮೈಸೂರು ಬ್ಯಾಂಕ್‌ನಿಂದ ಮೆಜೆಸ್ಟಿಕ್‌ಗೆ ಬಿಎಂಟಿಸಿ ಬಸ್‌ನಲ್ಲಿ ಬಂದೆ. ಮೆಜೆಸ್ಟಿಕ್‌ನಲ್ಲಿ ಬಸ್‌ ನಿಂತಾಗ ಪ್ರಯಾಣಿಕರು ಇಳಿಯುತ್ತಿದ್ದರು. ನಾನು ಇಳಿಯಬೇಕಿದ್ದರೆ ಬಸ್‌ ಮುಂದಕ್ಕೆ ಚಲಿಸಿತು. ಕೆಳಗೆ ಬಿದ್ದುಬಿಟ್ಟೆ’ ಎಂದು ಗಾರ್ಮೆಂಟ್ಸ್‌ ಉದ್ಯೋಗಿ ವೀರಪ್ಪ ತಿಳಿಸಿದರು. ‘ಕಣ್ಣು ಕಾಣದ ನಮ್ಮಂಥವರು ಇಳಿಯುವವರೆಗೆ ಕಾಯುವ ತಾಳ್ಮೆ ಚಾಲಕರಿಗೂ ನಿರ್ವಾಹಕರಿಗೂ ಇರುವುದಿಲ್ಲ. ಅವತ್ತು ನನ್ನದೇ ತಪ್ಪು ಎಂಬಂತೆ ಮಾತನಾಡಿದರು. ನಾನು ಅಲ್ಲಿಂದಲೇ ಸಹಾಯವಾಣಿಗೆ ಕರೆ ಮಾಡಿದ ಮೇಲೆ ಕ್ಷಮೆ ಯಾಚಿಸಿದರು. ಅಲ್ಲದೇ ಸಹಾಯವಾಣಿಯವರ ಜೊತೆಗೆ ನನ್ನ ಮೊಬೈಲ್‌ನಲ್ಲೇ ನಿರ್ವಾಹಕ ಮಾತನಾಡಿದರು. ಏಟು ಏನೂ ಬಿದ್ದಿಲ್ಲ ಎಂದು ತಿಳಿಸಿದರು. ನನ್ನ ಕಾಲಿಗೆ ಏಟಾಗಿ ನಾಲ್ಜೈದು ದಿನ ನೋವಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.