ಸಾಂದರ್ಭಿಕ ಚಿತ್ರ
ಬೆಂಗಳೂರು: ಲಾಲ್‌ಬಾಗ್ ರಸ್ತೆಯ ಸುಬ್ಬಯ್ಯ ವೃತ್ತದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ವೊಂದು ಡಿಕ್ಕಿ ಹೊಡೆದು ಪಾದಚಾರಿ ಪುಷ್ಪಾ (61) ಮೃತಪಟ್ಟಿದ್ದು, ಚಾಲಕ ಎಚ್. ನಾಗರಾಜ್ ವಿರುದ್ಧ ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಚಿಕ್ಕಪೇಟೆಯ ಬಸವಣ್ಣ ದೇವಸ್ಥಾನ ಸ್ಟ್ರೀಟ್ ನಿವಾಸಿ ಪುಷ್ಪಾ ಅವರು ಮನೆಯಿಂದ ಬೇಕರಿಗೆ ಹೊರಟಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಪುಷ್ಪಾ ಸಾವಿನ ಬಗ್ಗೆ ಮಗ ವಿನಯ್ ದೂರು ನೀಡಿದ್ದಾರೆ. ಬಿಎಂಟಿಸಿ ಚಾಲಕ ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ಎಲೆಕ್ಟ್ರಿಕ್ ಬಸ್ (ಕೆಎ 51 ಎಎಚ್ 7667) ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಪುಷ್ಪಾ ಅವರು ಬುಧವಾರ (ಡಿ. 27) ಮಧ್ಯಾಹ್ನ 12.15 ಗಂಟೆ ಸುಮಾರಿಗೆ ಸುಬ್ಬಯ್ಯ ವೃತ್ತದ ಬಳಿ ರಸ್ತೆ ದಾಟುತ್ತಿದ್ದರು. ಇದೇ ಮಾರ್ಗದಲ್ಲಿ ಹೊರಟಿದ್ದ ಬಿಎಂಟಿಸಿ ಬಸ್, ಪುಷ್ಪಾ ಅವರಿಗೆ ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದ ಪುಷ್ಪಾ ಅವರನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿಯೇ ಅವರು ಅಸುನೀಗಿದರು’ ಎಂದು ತಿಳಿಸಿದರು.
‘ಅಪಘಾತದ ಬಗ್ಗೆ ಸ್ಥಳೀಯರಿಂದ ಹೇಳಿಕೆ ಪಡೆಯಲಾಗಿದೆ. ಚಾಲಕ ಅತೀ ವೇಗದಲ್ಲಿ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದ. ಇದೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.