
ಬೆಂಗಳೂರು: ಬಿಎಂಟಿಸಿ ಬಸ್ ಗುದ್ದಿ ಪಾದಚಾರಿ ಚೇತನ್ (35) ಎಂಬುವವರು ಮೃತಪಟ್ಟಿದ್ದು, ಈ ಅಪಘಾತದ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ತಮಿಳುನಾಡಿನ ಚೇತನ್, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಪೇಟಿಂಗ್ ಕೆಲಸ ಮಾಡುತ್ತಿದ್ದರು. ಬಸವೇಶ್ವರ ನಗರದಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.
‘ಗುರುವಾರ ರಾತ್ರಿ ಕೆಲಸ ಮುಗಿಸಿದ್ದ ಚೇತನ್, ಕಾಮಾಕ್ಷಿಪಾಳ್ಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಮನೆಯತ್ತ ಹೊರಟಿದ್ದರು. ಕೊಟಿಗೇಪಾಳ್ಯ ಮಾರ್ಗದ ಬಸ್ ಅದೇ ರಸ್ತೆಯಲ್ಲಿ ತೆರಳುತ್ತಿತ್ತು. ಚಾಲಕ ಅತೀ ವೇಗದಲ್ಲಿ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದ. ಇದರಿಂದಾಗಿ ಬಸ್, ಚೇತನ್ ಅವರಿಗೆ ಗುದ್ದಿತ್ತು’ ಎಂದು ತಿಳಿಸಿದರು.
‘ರಸ್ತೆಯಲ್ಲಿ ಬಿದ್ದಿದ್ದ ಚೇತನ್ ಅವರ ಎಡ ಕೈ ಮತ್ತು ಎಡ ಕಾಲಿನ ಪಾದದ ಮೇಲೆಯೇ ಬಸ್ಸಿನ ಚಕ್ರ ಹರಿದಿತ್ತು. ತೀವ್ರ ರಕ್ತಸ್ರಾವವಾಗಿ ನರಳುತ್ತಿದ್ದ ಚೇತನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದರು.
‘ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತಕ್ಕೆ ಕಾರಣವಾದ ಆರೋಪದಡಿ ಬಿಎಂಟಿಸಿ ಬಸ್ ಚಾಲಕ ಶಿವಕುಮಾರ್‌ನನ್ನು ಬಂಧಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.