ADVERTISEMENT

ಬೆಂಗಳೂರು: ಬಿಎಂಟಿಸಿ ಬಸ್ ಚಕ್ರ ಹರಿದು ಬೈಕ್ ಸವಾರ ಸಾವು

ದಾಸರಹಳ್ಳಿ ಮೆಟ್ರೊ ನಿಲ್ದಾಣ ಬಳಿ ಅಪಘಾತ | ರಸ್ತೆಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದ ಬೈಕ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 0:30 IST
Last Updated 18 ಆಗಸ್ಟ್ 2023, 0:30 IST
ಬಿಎಂಟಿಸಿ
ಬಿಎಂಟಿಸಿ   

ಬೆಂಗಳೂರು: ಬಿಎಂಟಿಸಿ ಬಸ್ಸಿನ ಚಕ್ರ ತಲೆ ಮೇಲೆ ಹರಿದು ಬೈಕ್ ಸವಾರ ದಾಸಪ್ಪ (42) ಅವರು ಮೃತಪಟ್ಟಿದ್ದು, ಈ ಸಂಬಂಧ ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಂಧ್ರಪ್ರದೇಶದ ಮಡಕಶಿರಾದ ದಾಸಪ್ಪ, ನಗರದ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಬೈಕ್‌ನಲ್ಲಿ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

ಕಾರಿಗೆ ಡಿಕ್ಕಿ ಹೊಡೆದಿದ್ದ ಬೈಕ್: ‘ದಾಸಪ್ಪ ಅವರು ಬೈಕ್ ಚಲಾಯಿಸಿಕೊಂಡು ದಾಸರಹಳ್ಳಿ ಮೆಟ್ರೊ ನಿಲ್ದಾಣ ಬಳಿಯ ಸರ್ವೀಸ್‌ ರಸ್ತೆಯಲ್ಲಿ ಹೊರಟಿದ್ದರು. ಇದೇ ರಸ್ತೆಯ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಲಾಗಿತ್ತು. ಅದೇ ಕಾರಿಗೆ ಬೈಕ್ ಡಿಕ್ಕಿ ಆಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ದಾಸಪ್ಪ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ಸಿನ ಚಕ್ರ, ರಸ್ತೆಯಲ್ಲಿ ಬಿದ್ದಿದ್ದ ದಾಸಪ್ಪ ಅವರ ತಲೆ ಮೇಲೆ ಹರಿದಿತ್ತು. ತೀವ್ರ ಗಾಯಗೊಂಡು ದಾಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ಹೋಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ’ ಎಂದು ಹೇಳಿವೆ.

ಬಸ್‌ ಬಿಟ್ಟು ಚಾಲಕ ಪರಾರಿ: ‘ಅಪಘಾತದ ನಂತರ ಸ್ಥಳದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಸ್‌ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಯಾವುದೇ ಸೂಚನೆ ನೀಡದೇ, ರಸ್ತೆಬದಿ ಕಾರು ನಿಲ್ಲಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಬಿಎಂಟಿಸಿ ಚಾಲಕನ ನಿರ್ಲಕ್ಷ್ಯವೂ ಇದೆ. ಹೀಗಾಗಿ, ಕಾರು ಹಾಗೂ ಬಸ್ಸಿನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರು, ಬಸ್ ಜಪ್ತಿ ಮಾಡಲಾಗಿದೆ’ ಎಂದು ಹೇಳಿವೆ.

ಮೃತಪಟ್ಟಿದ್ದ ಬಾಲಕಿ: ಕುಮಾರಸ್ವಾಮಿ ಲೇಔಟ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ಸಿನ ಚಕ್ರ ಹರಿದು ನಾಲ್ಕೂವರೆ ವರ್ಷ ವಯಸ್ಸಿನ ಎಂ.ಡಿ. ಪೂರ್ವರಾವ್‌ ಬಾಲಕಿ ಮೃತಪಟ್ಟಿದ್ದಳು. ಇದಾದ ಮರುದಿನವೇ ಬಿಎಂಟಿಸಿ ಬಸ್‌ನಿಂದಾಗಿ ದಾಸಪ್ಪ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.