ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯಲ್ಲಿ ಮಂಗಳವಾರ ಸಂಜೆ ಬಿಎಂಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.
ಇಕೋ ಸ್ಪೇಸ್ ಜಂಕ್ಷನ್ ಬಳಿ ರಸ್ತೆಯ ಮಧ್ಯದಲ್ಲೇ ತಾಂತ್ರಿಕ ಸಮಸ್ಯೆಯಿಂದಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಸಂಚಾರ ಸ್ಥಗಿತವಾಯಿತು. ಬಸ್ ಚಾಲನೆಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ ಸಂಚಾರ ದಟ್ಟಣೆ ಅಧಿಕವಾಯಿತು.
ಮಾಹಿತಿ ತಿಳಿದು ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಪ್ರಯೋಜನವಾಗಲಿಲ್ಲ. ಎಕ್ಸ್‌ನಲ್ಲಿ ಸಂದೇಶ ಹಾಕಿದ ಸಂಚಾರ ಪೊಲೀಸರು, ‘ಇಕೋ ಸ್ಪೇಸ್ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಮಾರತ್‌ಹಳ್ಳಿ, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ಬೆಳ್ಳಂದೂರು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ’ ಎನ್ನುವ ಸೂಚನೆ ನೀಡಿದರು.
ಇದಾದ ಎರಡು ಗಂಟೆವರೆಗೆ ವಾಹನ ಸಂಚಾರ ವ್ಯತ್ಯಯಗೊಂಡು ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬೈಕ್ ಸವಾರರು ಕಷ್ಟಪಟ್ಟುಕೊಂಡು ತೆರಳಿದರೆ, ಕಾರು, ಬಸ್, ಲಾರಿ ಸಹಿತ ಇತರೆ ವಾಹನ ಸವಾರರು ಪರದಾಡಬೇಕಾಯಿತು.
ಸಾಮಾಜಿಕ ಮಾಧ್ಯಮದಲ್ಲೂ ಈ ಕುರಿತು ಆಕ್ರೋಶ ವ್ಯಕ್ತವಾಯಿತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಟ್ಯಾಗ್ ಮಾಡಿ, ‘ವಾಹನ ಸವಾರರು 15 ಕಿಲೋಮೀಟರ್ ದೂರ ಕ್ರಮಿಸಲು ಮೂರು ಗಂಟೆ ಬೇಕಾಗಿದೆ ’ ಎಂದು ಆಕ್ರೋಶ ಹೊರ ಹಾಕಿದರು.
‘ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದು ಒಂದು ಕಡೆಯಾದರೆ, ಮತ್ತೊಂದು ಭಾಗದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆದು ಸಂಚಾರ ನಿಧಾನವಾಗಿದೆ. ಗಣ್ಯ ವ್ಯಕ್ತಿಗಳ ಸಂಚಾರದಿಂದಲೂ ಆಗಾಗ ಸಮಸ್ಯೆ ಇದ್ದೇ ಇರುತ್ತದೆ. ಸಂಜೆ ಹೊತ್ತಿನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರು ಗಂಟೆ ಗಟ್ಟಲೇ ಕಾಯಬೇಕಾಯಿತು’ ಎಂದು ವಾಹನ ಸವಾರರು ಬೇಸರ ಹೊರ ಹಾಕಿದರು.
‘ಸಾವಿರಕ್ಕೂ ಅಧಿಕ ಕಂಪನಿಗಳು ಮಾರತ್‌ಹಳ್ಳಿ–ಬೆಳ್ಳಂದೂರು ಭಾಗದಲ್ಲಿವೆ. ಒಮ್ಮೆಲೆ ಕಂಪನಿಗಳ ಉದ್ಯೋಗಿಗಳು ಬರುವುದು ಕೂಡ ದಟ್ಟಣೆ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ. ಬಿಎಂಟಿಸಿ ಬಸ್‌ಗಳು ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಿಕೊಳ್ಳಲು ರಸ್ತೆಯಲ್ಲಿ ನಿಲ್ಲುವುದು ಕೂಡ ಸಮಸ್ಯೆಗಳನ್ನು ತಂದೊಡ್ಡಿದೆ. ಕೆಟ್ಟು ನಿಂತರಂತೂ ಮುಗಿದೇ ಹೋಯಿತು’ ಎನ್ನುವ ಅಭಿಪ್ರಾಯಗಳು ಕೇಳಿ ಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.