ADVERTISEMENT

ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿ ಬಸ್ ನಂಬರ್: ಬಾಲ್ಯ ನೆನಪಿಸಿಕೊಂಡ ಕನ್ನಡಿಗ

ಬಾಲ್ಯದ ಪ್ರಯಾಣ ನೆನಪಿಸಿಕೊಂಡ ಕನ್ನಡಿಗ

​ಪ್ರಜಾವಾಣಿ ವಾರ್ತೆ
Published 6 ಮೇ 2023, 20:17 IST
Last Updated 6 ಮೇ 2023, 20:17 IST
ಟೆಸ್ಲಾ ಕಾರಿನೊಂದಿಗೆ ಚೆಂಗಪ್ಪ
ಟೆಸ್ಲಾ ಕಾರಿನೊಂದಿಗೆ ಚೆಂಗಪ್ಪ   

ಬೆಂಗಳೂರು: ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೊಬ್ಬರು ತಾವು ಖರೀದಿಸಿದ ಟೆಸ್ಲಾ ಕಾರಿಗೆ ಬಾಲ್ಯದಲ್ಲಿ ಪ್ರಯಾಣಿಸಿದ ಬಿಎಂಟಿಸಿ ಬಸ್‌ ನಂಬರ್‌ ಹಾಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 

ಕೊಡಗಿನ ಚೆಂಗಪ್ಪ ಎಂಬ ಯುವಕ ಈಗ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಹೊಸ ಕಾರಿಗೆ ’ಕೆಎ01 ಎಫ್‌232’ ನಂಬರ್‌ ಹಾಕಿಸಿಕೊಂಡಿದ್ದಾರೆ. ಈ ಸಂಖ್ಯೆ 1990ರ ದಶಕದಲ್ಲಿ ಬೆಂಗಳೂರಿನ 401 ಬಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ ನಂಬರ್. ಚೆಂಗಪ್ಪ ಅವರು ಶಾಲಾ ದಿನಗಳಲ್ಲಿ ವಿದ್ಯಾರಣ್ಯಪುರದಿಂದ ಯಶವಂತಪುರಕ್ಕೆ ಇದೇ ಬಸ್‌ನಲ್ಲಿ ಸಂಚರಿಸಿದ್ದರು. ಬಸ್ ಮೇಲಿನ ಪ್ರೀತಿ ಹಾಗೂ ಶಾಲಾ ದಿನಗಳಲ್ಲಿ ಚಾಲಕ ಧನಪಾಲ್ ಮಂಚೇನಹಳ್ಳಿ ಅವರ ಜತೆಗಿನ ಒಡನಾಟದಿಂದ ತಮ್ಮ ಕಾರಿಗೆ ಬಸ್‌ ನಂಬರ್‌ ಇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಿವೃತ್ತರಾದ ಧನಪಾಲ್ ಅವರಿಗೆ ವಿಡಿಯೊ ಮೂಲಕ ಶುಭಹಾರೈಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. 

‘ಧನಪಾಲ್‌ ಅವರೇ ನಿಮ್ಮ ನಿವೃತ್ತಿ ಜೀವನಕ್ಕೆ ಅಭಿನಂದನೆಗಳು. 401 ಬಿ ಮಾರ್ಗದಲ್ಲಿ ನಮ್ಮ ಮೊದಲ ಭೇಟಿಯಾಗಿ, 31 ವರ್ಷಗಳು ಕಳೆದಿವೆ. ಒತ್ತಡದ ನಡುವೆಯೂ ನೀವು ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದದ್ದು ಇಷ್ಟವಾಗುತ್ತಿತ್ತು. ನಿಮ್ಮಿಂದ ನಮ್ಮ ಜ್ಞಾನ ಸಾಕಷ್ಟು ವೃದ್ಧಿಯಾಯಿತು. ವಿದ್ಯಾರಣ್ಯಪುರದಿಂದ ಯಶವಂತಪುರಕ್ಕೆ ಶಾಲೆಗೆ ಹೋಗುತ್ತಿದ್ದ ದಿನಗಳು ನೆನಪಾದವು’ ಎಂದು ಚೆಂಗಪ್ಪ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. 

ADVERTISEMENT

ಈ ವಿಡಿಯೊ ಹಾಗೂ ಬಸ್‌ ಜತೆಗಿನ ಹಳೆಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಧನಪಾಲ್ ಮಂಚೇನಹಳ್ಳಿ, ‘1992ರಲ್ಲಿ ಬಿಎಂಟಿಸಿಯ ಡಿಪೊ 11ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಅನೇಕ ಶಾಲೆಗಳ ಮಕ್ಕಳಿಗೆ ನನ್ನ ಬಸ್ ಅಚ್ಚುಮೆಚ್ಚಾಗಿತ್ತು. ಆ ಮಕ್ಕಳಲ್ಲಿ ಚೆಂಗಪ್ಪ ಮತ್ತು ಆದಿತ್ಯ ಎಂಬ ಹುಡುಗರು ನನ್ನ ಬಸ್‌ನ ಎಂಜಿನ್‌ ಮೇಲೆ ಕುಳಿತು, ಹಲವು ವರ್ಷ ಶಾಲೆಗೆ ಪ್ರಯಾಣ ಮಾಡಿದ್ದಾರೆ. ಆದಿತ್ಯ ಈಗ ಜರ್ಮನಿಯಲ್ಲಿದ್ದಾನೆ. ಚೆಂಗಪ್ಪ ಈಗಲೂ ನನ್ನ ಸಂಪರ್ಕದಲ್ಲಿದ್ದಾನೆ. ಅವನ ಅಭಿಮಾನಕ್ಕೆ ನಾನು ಚಿರಋುಣಿ’ ಎಂದು ಧನಪಾಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ತಮಗಿಷ್ಟವಾದ ಸಂಖ್ಯೆಯನ್ನು ವಾಹನಕ್ಕೆ ನೋಂದಾಯಿಸಿಕೊಳ್ಳಲು ಅವಕಾಶವಿದೆಯೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪ್ರಶ್ನಿಸಿದ್ದಾರೆ. ಅಮೆರಿಕದಲ್ಲಿ ಈ ರೀತಿ ನೋಂದಾವಣಿಗೆ ಅವಕಾಶವಿದೆ ಎಂದು ಉತ್ತರಿಸಿರುವ ತಜ್ಞರು, ‘ನಿಗದಿತ ಸಂಖ್ಯೆಯನ್ನು ಬೇರೆಯವರು ಹೊಂದಿರದಿದ್ದರೆ ನೋಂದಾಯಿಸಿಕೊಳ್ಳಬಹುದು. ಅಲ್ಲಿನ ಕೆಲ ರಾಜ್ಯಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

401 ಬಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ ಜತೆಗೆ ಧನಪಾಲ್ ಇರುವ ಹಳೆಯ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.