ADVERTISEMENT

ದಿನದ ಪಾಸ್‌ಗೆ ₹70: ಬಿಬಿಪಿವಿ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಮೇ 2020, 23:10 IST
Last Updated 18 ಮೇ 2020, 23:10 IST

ಬೆಂಗಳೂರು: ಬಸ್‌ ಪ್ರಯಾಣದ ವೇಳೆ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಕಾರಣದಿಂದ ನಗದು ವ್ಯವಹಾರವನ್ನು ಆದಷ್ಟು ಕಡಿಮೆ ಮಾಡಲು ಉದ್ದೇಶಿಸಿರುವ ಬಿಎಂಟಿಸಿ, ಇದಕ್ಕಾಗಿ ದಿನದ, ವಾರದ ಪಾಸ್‌ ಕೊಳ್ಳಲು ಮತ್ತು ಕ್ಯೂಆರ್‌ ಕೋಡ್‌ ಬಳಸಿ, ಟಿಕೆಟ್‌ ದರ ಪಾವತಿಸುವಂತೆ ಗ್ರಾಹಕರಿಗೆ ಮನವಿ ಮಾಡಿದೆ. ಆದರೆ, ದಿನದ ಬಸ್‌ ಪಾಸ್‌ ದರವನ್ನು ₹70 ಹಾಗೂ ವಾರದ ಪಾಸ್‌ಗೆ ₹300 ನಿಗದಿ ಮಾಡಿರುವುದಕ್ಕೆ ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ (ಬಿಬಿಪಿವಿ) ಅಸಮಾಧಾನ ವ್ಯಕ್ತಪಡಿಸಿದೆ.

‘ಪ್ರಯಾಣದ ವೇಳೆ ಕೈಯಿಂದ, ಕೈಗೆ ನೋಟುಗಳು ಹರಿದಾಡುವುದನ್ನು ನಿಯಂತ್ರಿಸಬೇಕು ಎಂಬ ಬಿಎಂಟಿಸಿ ಉದ್ದೇಶ ಒಳ್ಳೆಯದೇ. ಆದರೆ, ಇದಕ್ಕಾಗಿ ₹70 ದಿನದ ಪಾಸ್‌ ದರವನ್ನೇ ಮುಂದುವರಿಸುವುದು ಎಷ್ಟು ಸಮಂಜಸ? ಲಾಕ್‌ಡೌನ್‌ನಿಂದ ಸಾರ್ವಜನಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪಾಸ್‌ ದರವನ್ನು ₹20ಕ್ಕೆ ಇಳಿಸಿದರೆ ಅನುಕೂಲವಾಗುತ್ತದೆ’ ಎಂದು ವೇದಿಕೆಯ ವಿನಯ್‌ ಶ್ರೀನಿವಾಸ್ ಹೇಳಿದ್ದಾರೆ.

‘ಕೋವಿಡ್‌–19 ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ₹20 ಲಕ್ಷ ಕೋಟಿ ಘೋಷಿಸಿದೆ. ಅಲ್ಲದೆ, ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂಪಾಯಿಗೂ ಹೆಚ್ಚಿನ ಪ್ಯಾಕೇಜ್‌ ಘೋಷಿಸಲಾಗಿದೆ. ಈ ಮೊತ್ತದಲ್ಲಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪಾಸ್‌ ಒದಗಿಸಲು ಸಾಧ್ಯವಿಲ್ಲವೆ’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ಮನೆಗೆಲಸದವರು, ಗಾರ್ಮೆಂಟ್‌ ನೌಕರರು, ಕಾರ್ಮಿಕರು ಬಸ್‌ ಸಂಚಾರ ಆರಂಭವಾಗಲು ಕಾಯುತ್ತಿದ್ದಾರೆ. ದಿನಕ್ಕೆ ₹70 ಪಾವತಿಸುವುದು ಅವರಿಗೆ ಕಷ್ಟವಾಗುತ್ತದೆ’ ಎಂದೂ ವೇದಿಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.