ADVERTISEMENT

ಬಿಎಂಟಿಸಿ ಪಾಸ್‌ ಇನ್ನು ಮೊಬೈಲ್ ಆ್ಯಪ್‌ನಲ್ಲಿ ಲಭ್ಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 16:31 IST
Last Updated 6 ಏಪ್ರಿಲ್ 2022, 16:31 IST
ವಿ.ಅನ್ಬುಕುಮಾರ್
ವಿ.ಅನ್ಬುಕುಮಾರ್   

ಬೆಂಗಳೂರು: ಬಿಎಂಟಿಸಿ ಪಾಸ್ ಪಡೆಯಲು ಇನ್ನು ಮುಂದೆ ಕಚೇರಿ ಮತ್ತು ಕೌಂಟರ್‌ಗಳಿಗೆ ಪ್ರಯಾಣಿಕರು ಅಲೆದಾಡಬೇಕಿಲ್ಲ. ಮೊಬೈಲ್ ಆ್ಯಪ್ ಮೂಲಕವೇ ಡಿಜಿಟಲ್ ಪಾಸ್ ವಿತರಿಸುವ ವ್ಯವಸ್ಥೆಯನ್ನು ಬಿಎಂಟಿಸಿ ಜಾರಿಗೆ ತಂದಿದೆ.

ನಗದು ರಹಿತ ಮತ್ತು ಕಾಗದ ರಹಿತ ವಹಿವಾಟಿನ ಕಡೆ ಮುಖ ಮಾಡಿರುವ ಬಿಎಂಟಿಸಿ, ಟುಮ್ಯಾಕ್ ಆ್ಯಪ್‌ನಲ್ಲಿ ಡಿಜಿಟಲ್ ಪಾವತಿ ಮೂಲಕವೇ ಪಾಸ್ ಖರೀದಿಸಲು ಅವಕಾಶ ಕಲ್ಪಿಸಿದೆ. ಹೊಸ ಆ್ಯಪ್‌ ಅನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ಬುಧವಾರ ಬಿಡುಗಡೆ ಮಾಡಿದರು.

‘ಬಿಎಂಟಿಸಿ ಪ್ರಯಾಣಿಕರು ಪಾಸ್ ಪಡೆಯಲು ಟಿಟಿಎಂಸಿ ಅಥವಾ ಬಸ್ ನಿಲ್ದಾಣಗಳಿಗೆ ಪ್ರಯಾಣಿಕರು ಹೋಗಬೇಕಿತ್ತು. ಅಲ್ಲಿ ಮುದ್ರಿತ ಪಾಸ್ ವಿತರಣೆ ಮಾಡಲಾಗುತ್ತಿತ್ತು. ಟುಮ್ಯಾಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ದಿನದ, ವಾರದ ಮತ್ತು ತಿಂಗಳ ಪಾಸ್‌ಗಳನ್ನು ಪ್ರಯಾಣಿಕರು ಕುಳಿತಲ್ಲೇ ಖರೀದಿಸಬಹುದು’ ಎಂದು ತಿಳಿಸಿದರು.

ADVERTISEMENT

‘ಮೊದಲ ಹಂತದಲ್ಲಿ ವೋಲ್ವೊ ಬಸ್ ಮತ್ತು 200 ಸಾಮಾನ್ಯ ಬಸ್‌ಗಳಲ್ಲಿ ಈ ಪಾಸ್‌ಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಡಿಜಿಟಲ್ ಪಾಸ್ ಹೊಂದಿದವರು ನಿರ್ವಾಹಕರ ಬಳಿ ಇರುವ ಕ್ಯೂಆರ್ ಕೋಡ್‌ಗೆ ಸ್ಕ್ಯಾನ್ ಮಾಡಿ ದೃಢೀಕರಿಸಿಕೊಳ್ಳಬೇಕಾಗುತ್ತದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲ ಬಸ್‌ಗಳಿಗೂ ವಿಸ್ತರಿಸಲಾಗುವುದು’ ಎಂದರು.

‘ಸದ್ಯಕ್ಕೆ ಡಿಜಿಟಲ್ ಪಾಸ್ ಪಡೆದವರಿಗೆ ರಿಯಾಯಿತಿ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ರಿಯಾಯಿತಿ ನೀಡುವ ಬಗ್ಗೆ ಯೋಚಿಸಲಾಗುವುದು. ಪ್ರಯಾಣಿಕರು ಯಾವಾಗ ಪಾಸ್ ಪಡೆದರೂ ತಿಂಗಳ ಅಂತ್ಯಕ್ಕೆ ಅದರ ಮಾನ್ಯತೆ ಅಂತ್ಯವಾಗುತ್ತಿತ್ತು. ಡಿಜಿಟಲ್ ಪಾಸ್‌ನಲ್ಲಿ ಈ ವ್ಯವಸ್ಥೆ ಬದಲಾಗಿದೆ. ಖರೀದಿಸಿದ ದಿನದಿಂದ ಒಂದು ತಿಂಗಳ ತನಕ ಅದರ ಮಾನ್ಯತೆ ಇರಲಿದೆ’ ಎಂದು ವಿವರಿಸಿದರು.

ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರು ತಮ್ಮ ಕನಿಷ್ಠ ವಿವರ ದಾಖಲಿಸಬೇಕು. ಯಾವ ಪಾಸ್ ಬೇಕು ಎಂಬುದನ್ನು ನಿರ್ಧರಿಸಿ ಅದಕ್ಕೆ ತಕ್ಕಂತೆ ಮೊತ್ತವನ್ನು ಯುಪಿಐ ಪಾವತಿ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು ಎಂದರು.

ಡಿಜಿಟಲ್ ಟಿಕೆಟ್ ಚಿಂತನೆ

ಡಿಜಿಟಲ್ ಪಾಸ್ ವ್ಯವಸ್ಥೆ ಯಶಸ್ವಿಯಾದರೆ ಡಿಜಿಟಲ್ ಟಿಕೆಟ್ ವಿತರಿಸುವ ಬಗ್ಗೆಯೂ ಚಿಂತಿಸಲಾಗಿದೆ ಎಂದು ಅನ್ಬುಕುಮಾರ್ ವಿವರಿಸಿದರು.

ಮುಂದಿನ ದಿನಗಳಲ್ಲಿ ನಗದು ವಹಿವಾಟು ಇರುವುದಿಲ್ಲ. ಚಿಲ್ಲರೆ ಸಮಸ್ಯೆ ಮತ್ತು ಆದಾಯ ಸೋರಿಕೆಗೆ ಕಡಿವಾಣ ಬೀಳಲಿದೆ ಎಂದು ಅವರು ಹೇಳಿದರು.

‘ಡಿಜಿಟಲ್ ಪಾಸ್ ಅಥವಾ ಟಿಕೆಟ್‍ನಿಂದ ನಿರ್ವಾಹಕರ ಕೆಲಸಕ್ಕೆ ಕುತ್ತು ಬರುವುದಿಲ್ಲ. ಬಿಎಂಟಿಸಿಯಲ್ಲಿ 6,500 ಬಸ್‌ಗಳಿದ್ದು, ಆದರೂ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ನಗರದ ಹೊರ ವಲಯಕ್ಕೂ ಬಸ್ ಜಾಲ ವಿಸ್ತರಿಸಬೇಕಿದೆ. ಆದ್ದರಿಂದ ನಿರ್ವಾಹಕರ ಕೆಲಸಕ್ಕೆ ತೊಂದರೆ ಆಗದು’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಯಾಣ ದರ ಹೆಚ್ಚಳ ತೀರ್ಮಾನ ಇಲ್ಲ

ಡೀಸೆಲ್ ದರ ಶೇ 50ರಷ್ಟು ಹೆಚ್ಚಾಗಿದ್ದು, ಸಂಸ್ಥೆಗೆ ಹೊರೆಯಾಗುತ್ತಿದೆ. ಆದರೂ, ದರ ಹೆಚ್ಚಳದ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ವಿ.ಅನ್ಬುಕುಮಾರ್ ಸ್ಪಷ್ಟಪಡಿಸಿದರು.

2015ರ ನಂತರ ಟಿಕೆಟ್ ದರ ಪರಿಷ್ಕರಣೆ ಮಾಡಿಲ್ಲ. ಆಗ ಡೀಸೆಲ್ ದರ ಲೀಟರ್‌ಗೆ ₹51 ಇತ್ತು. ಈಗ ₹107ಕ್ಕೆ ಏರಿಕೆಯಾಗಿದೆ. ಡೀಸೆಲ್‌ಗೆ ಫೆಬ್ರುವರಿಯಲ್ಲಿ ದಿನಕ್ಕೆ ₹2 ಕೋಟಿ ವೆಚ್ಚವಾಗುತ್ತಿತ್ತು. ಈಗ ಅದು ₹2.46 ಕೋಟಿಗೆ ಹೆಚ್ಚಳವಾಗಿದೆ. ಟಿಕೆಟ್ ದರ ಪರಿಷ್ಕರಣೆ ಆಗಬೇಕಿದ್ದರೆ ಅದು ಸರ್ಕಾರದ ಹಂತದಲ್ಲಿ ತೀರ್ಮಾನ ಆಗಬೇಕಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.