ಬೆಂಗಳೂರು: ‘ಟೀ ಚೆನ್ನಾಗಿಲ್ಲ’ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದ ಟೀ ಶಾಪ್ ಸಿಬ್ಬಂದಿ, ಬಿಎಂಟಿಸಿ ಬಸ್ ಚಾಲಕನ ಮೇಲೆ ಫ್ಲಾಸ್ಕ್‌ನಿಂದ ಹಲ್ಲೆ ನಡೆಸಿರುವ ಘಟನೆ ಮೆಜೆಸ್ಟಿಕ್‌ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಈ ಸಂಬಂಧ ಟೀ ಶಾಪ್ ಸಿಬ್ಬಂದಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಪ್ಪ ಗುಲ್ಲಪ್ಪನವರ್ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಮುಗಪ್ಪ ಅವರು ಡಿಪೊ ಸಂಜೆ 46ರಲ್ಲಿ ಬಿಎಂಟಿಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಬೆಳಿಗ್ಗೆ ನಿರ್ವಾಹಕ ಅರವಿಂದ್ ಅವರ ಜತೆಗೆ ದೊಡ್ಡಬಳ್ಳಾಪುರಕ್ಕೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೆಜೆಸ್ಟಿಕ್‌ನ ಪ್ಲಾಟ್ ಸಂಖ್ಯೆ 27ರಲ್ಲಿ ಬಸ್ ನಿಲುಗಡೆ ಮಾಡಿ ರಮೇಶ್ ಅವರ ಜತೆಗೆ ಟೀ ಕುಡಿಯಲು ತೆರಳಿದ್ದರು. ಶಾಪ್ 21ರ ಬಳಿಗೆ ತೆರಳಿದಾಗ ಇಲ್ಲಿ ಟೀ ಚೆನ್ನಾಗಿಲ್ಲ. ಬೇರೆ ಕಡೆ ಹೋಗೋಣ ಎಂದು ರಮೇಶ್ ಅವರಿಗೆ ಮುಗ್ಗಪ್ಪ ಹೇಳುತ್ತಿದ್ದರು. ಅದನ್ನು ಕೇಳಿಸಿಕೊಂಡ ಶಾಪ್ ಸಿಬ್ಬಂದಿ, ಫ್ಲಾಸ್ಕ್‌ನಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೇ ಅಂಗಡಿಯಿಂದ ಹೊರಗೆ ಕಟ್ಟಿಗೆಯಿಂದಲೂ ಹಲ್ಲೆ ನಡೆಸಿದ್ದಾನೆ’ ಎಂದು ಮೂಲಗಳು ಹೇಳಿವೆ.
‘ನಮ್ಮ ಅಂಗಡಿಯ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತೀಯಾ? ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಹಲ್ಲೆಯಿಂದ ರಕ್ತಸ್ರಾವವಾಗಿದೆ’ ಎಂದು ಮಗಪ್ಪ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.