ADVERTISEMENT

ವಜಾಗೊಂಡಿದ್ದ ಬಿಎಂಟಿಸಿ ನೌಕರ ಆತ್ಮಹತ್ಯೆಗೆ ಯತ್ನ; ಆರೋಗ್ಯ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 12:24 IST
Last Updated 7 ಅಕ್ಟೋಬರ್ 2021, 12:24 IST
ಬಿಎಂಟಿಸಿ ನೌಕರ ಕೇಶವ್
ಬಿಎಂಟಿಸಿ ನೌಕರ ಕೇಶವ್    

ಬೆಂಗಳೂರು: ಕೆಲಸದಿಂದ ವಜಾಗೊಳಿಸಲಾಗಿದ್ದ ಬಿಎಂಟಿಸಿ ನೌಕರ ಕೇಶವ್ ಎಂಬುವರು ಇಂದಿರಾನಗರದ ಡಿಪೊ–6ರಲ್ಲಿ ವ್ಯವಸ್ಥಾಪಕರ ಎದುರೇ ಕ್ರಿಮಿನಾಶಕ ಸೇವಿಸಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅಸ್ವಸ್ಥಗೊಂಡಿರುವ ಕೇಶವ್‌ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

‘ಕೇಶವ್ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವೈದ್ಯರು ಇಂದಿರಾನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರನ್ವಯ ಪೊಲೀಸರು ಆಸ್ಪತ್ರೆಗೆ ಹೋಗಿದ್ದಾರೆ. ಕೇಶವ್ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬೈಯಪ್ಪನಹಳ್ಳಿ ನಿವಾಸಿ ಕೇಶವ್ ಅವರು ಬಿಎಂಟಿಸಿ ಬಸ್ ಚಾಲಕರಾಗಿದ್ದರು. ಡಿಪೊ– 6ರಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕೆಲಸಕ್ಕೆ ಗೈರು ಹಾಜರಾಗಿದ್ದ ಕಾರಣಕ್ಕೆ ಅವರನ್ನು ವಜಾ ಮಾಡಲಾಗಿತ್ತು. ಕೆಲಸ ಹೋಗಿದ್ದರಿಂದ ಕೇಶವ್ ನೊಂದಿದ್ದರು. ಬೇರೆಡೆಯೂ ಅವರಿಗೆ ಕೆಲಸ ಸಿಕ್ಕಿರಲಿಲ್ಲ’ ಎಂದೂ ತಿಳಿಸಿದರು.

ಮಾಡದ ತಪ್ಪಿಗೆ ವಜಾ: ಆಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೇಶವ್, ‘ಡಿಪೊ 6ರಲ್ಲಿ ಕೆಲಸ ಮಾಡುತ್ತಿದ್ದ ನಾನು ಸೇರಿದಂತೆ 26 ಮಂದಿಯನ್ನು ಏಕಾಏಕಿ ವಜಾ ಮಾಡಲಾಗಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ಮಾಡದ ತಪ್ಪಿಗೆ ನಮ್ಮನ್ನು ವಜಾ ಮಾಡಲಾಗಿದೆ’ ಎಂದರು.

‘ಜೀವನ ನಡೆಸುವುದು ಕಷ್ಟವಾಗಿದೆ. ನೋವು ತಡೆಯಲಾಗದೇ ಡಿಪೊದಲ್ಲೇ ಕ್ರಿಮಿನಾಶಕ ಕುಡಿದೆ. ನನ್ನ ಜೀವ ಹೋದರೂ ಪರವಾಗಿಲ್ಲ, ಬೇರೆ ನೌಕರರಿಗಾದರೂ ನ್ಯಾಯ ಸಿಗಲಿ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.