ADVERTISEMENT

ಅಂಧರ ಸುಗಮ ಸಂಚಾರಕ್ಕಾಗಿ ‘ಆನ್‌ಬೋರ್ಡ್’: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬಿಎಂಟಿಸಿಯ 125 ಬಸ್‌ಗಳಲ್ಲಿ ಅಳವಡಿಸಿದ ತಂತ್ರಜ್ಞಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 14:44 IST
Last Updated 12 ಜುಲೈ 2025, 14:44 IST
ಅಂಧರಿಗೆ ಬಸ್‌ ಪತ್ತೆ ಹಚ್ಚಿ ಸಂಚರಿಸಲು ಸುಲಭ ಮಾಡಿಕೊಡುವ ‘ಆನ್‌ಬೋರ್ಡ್’ ಸಾಧನಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಬಿಎಂಟಿಸಿ ಕೇಂದ್ರ ಕಚೇರಿ ಬಳಿ ಚಾಲನೆ ನೀಡಿದರು
ಪ್ರಜಾವಾಣಿ ಚಿತ್ರ
ಅಂಧರಿಗೆ ಬಸ್‌ ಪತ್ತೆ ಹಚ್ಚಿ ಸಂಚರಿಸಲು ಸುಲಭ ಮಾಡಿಕೊಡುವ ‘ಆನ್‌ಬೋರ್ಡ್’ ಸಾಧನಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಬಿಎಂಟಿಸಿ ಕೇಂದ್ರ ಕಚೇರಿ ಬಳಿ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಂಧರ ಅನುಕೂಲಕ್ಕಾಗಿ ಬಿಎಂಟಿಸಿಯ 125 ಬಸ್‌ಗಳಲ್ಲಿ ಆನ್‌ಬೋರ್ಡ್ ತಂತ್ರಜ್ಞಾನ ಪರಿಚಯಿಸಲಾಗಿದ್ದು, ಆಗಸ್ಟ್‌ ಅಂತ್ಯದ ಒಳಗೆ 500 ಬಸ್‌ಗಳಲ್ಲಿ, ಆನಂತರ ಎಲ್ಲ ಬಸ್‌ಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಈ ಯೋಜನೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಂಟಿನೆಂಟಲ್ ಆಟೋಮೋಟಿವ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ, ರೈಸ್ಡ್ ಲೈನ್ಸ್ ಫೌಂಡೇಷನ್ (ಆರ್‌ಎಲ್‌ಎಫ್‌) ಮತ್ತು ಎನೇಬಲ್ ಇಂಡಿಯಾ ಸಹಯೋಗದೊಂದಿಗೆ ಆನ್‌ಬೋರ್ಡ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿತ್ತು’ ಎಂದು ತಿಳಿಸಿದರು.

‘ಈ ಸಾಧನವನ್ನು ಪ್ರಾಯೋಗಿಕವಾಗಿ 401ಕೆ ಮತ್ತು 242ಬಿ ಮಾರ್ಗದ 25 ಬಸ್ಸುಗಳಲ್ಲಿ ಅಳವಡಿಸಲಾಗಿತ್ತು. ದೃಷ್ಟಿದೋಷ ಇರುವ ಪ್ರಯಾಣಿಕರು ಹೆಚ್ಚಾಗಿ ಪ್ರಯಾಣಿಸುವ ಮಾರ್ಗಗಳು ಇವು. 500 ಪ್ರಯಾಣಿಕರಿಗೆ ಆನ್‌ಬೋರ್ಡ್ ತಂತ್ರಜ್ಞಾನ ಬಳಸುವ ಬಗ್ಗೆ ತರಬೇತಿ ನೀಡಲಾಗಿತ್ತು. ಅದರಲ್ಲಿ 25 ಪ್ರಯಾಣಿಕರು ಉಪಕರಣವನ್ನು ಬಳಸಿದ್ದರು’ ಎಂದು ವಿವರಿಸಿದರು.

ADVERTISEMENT

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ಮಾತನಾಡಿ, ‘ಬಿಎಂಟಿಸಿ ಬಸ್‌ಗಳಲ್ಲಿ ಎಲ್ಲರೂ ಸಂಚರಿಸುವಂತಾಗಬೇಕು. ಯಾವುದೇ ದೈಹಿಕ ನ್ಯೂನತೆಗಳು ಸಂಚಾರಕ್ಕೆ ತೊಡಕಾಗಬಾರದು ಎಂಬುದು ನಮ್ಮ ಉದ್ದೇಶ. ಜೊತೆಗೆ ಇತರ ಪ್ರಮುಖ ಜಾಗತಿಕ ನಗರಗಳಿಗೆ ಸಮನಾಗಿ ಬೆಂಗಳೂರು ಇರಬೇಕು. ಈ ನಿಟ್ಟಿನಲ್ಲಿ ಆನ್‌ಬೋರ್ಡ್‌ ತಂತ್ರಜ್ಞಾನ ನಿರ್ಣಾಯಕ ಹೆಜ್ಜೆ’ ಎಂದರು.

ಕಾಂಟಿನೆಂಟಲ್ ಅಧ್ಯಕ್ಷ ಪ್ರಶಾಂತ್‌ ದೊರೆಸ್ವಾಮಿ ಮಾತನಾಡಿ, ‘ನಮ್ಮ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಇಲ್ಲಿ ಬಳಕೆ ಮಾಡಲಾಗಿದೆ. ಎಲ್ಲರಿಗೂ ಸಂಚರಿಸುವ ಸ್ವಾತಂತ್ರ್ಯ ನೀಡುವುದೇ ನಮ್ಮ ಗುರಿ’ ಎಂದರು.

ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕಿ ಶಿಲ್ಪಾ ಎಂ., ದೆಹಲಿ ಐಐಟಿ ಪ್ರಾಧ್ಯಾಪಕ ಎಂ. ಬಾಲಕೃಷ್ಣ, ರೈಸ್ಡ್ ಲೆನ್ಸ್‌ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಲ್ಕಿತ್ ಉಪಸ್ಥಿತರಿದ್ದರು.

ಆನ್‌ಬೋರ್ಡ್ ಬಳಕೆ ಹೇಗೆ?

ಆನ್‌ಬೋರ್ಡ್‌ ಸಾಧನವು ದೃಷ್ಟಿ ಸಮಸ್ಯೆಯ ವ್ಯಕ್ತಿಗಳಿಗೆ ಬಸ್ ಮಾರ್ಗ ಸಂಖ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವರು ಆ ಸಾಧನದಲ್ಲಿ ಸಂಖ್ಯೆ ಒತ್ತಿದಾಗ ಬಸ್‌ನಲ್ಲಿ ಅಳವಡಿಸಿದ್ದ ಮೌಂಟೆಡ್‌ ಸ್ಪೀಕರ್‌ ಧ್ವನಿ ಹೊರಡಿಸುತ್ತದೆ. ಇದು ಬಸ್‌ನ ಚಾಲಕ ಮತ್ತು ನಿರ್ವಾಹಕರಿಗೂ ಮಾಹಿತಿ ನೀಡುವುದರಿಂದ ಅವರು ದೃಷ್ಟಿದೋಷ ಇರುವವರನ್ನು ಬಸ್‌ ಹತ್ತಿಸಲು ಸಹಾಯ ಮಾಡುತ್ತಾರೆ. ಅಲ್ಲದೇ ಇದೇ ಧ್ವನಿಯ ಆಧಾರದಲ್ಲಿ ಆ ವ್ಯಕ್ತಿಗಳು ಕೂಡ ಬಸ್‌ನ ಬಾಗಿಲಿನತ್ತ ಬರಲು ಉಪಯೋಗವಾಗುತ್ತದೆ. ಇಳಿಯಬೇಕಾದ ಸ್ಥಳದಲ್ಲಿಯೂ ಬಟನ್‌ ಒತ್ತಿದರೆ ಅವರನ್ನು ಸುರಕ್ಷಿತವಾಗಿ ಇಳಿಸಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.