ADVERTISEMENT

ಬಿಎಂಟಿಸಿ | ಶೇ 52 ಪ್ರಯಾಣಿಕರು ಯುಪಿಐ ಬಳಕೆ: ₹ 470 ಕೋಟಿ ವರಮಾನ ಸಂಗ್ರಹ

ಈ ವರ್ಷ ಡಿಜಿಟಲ್‌ ಪಾವತಿ ಮೂಲಕ ₹ 470 ಕೋಟಿ ಸಂಗ್ರಹ

ಬಾಲಕೃಷ್ಣ ಪಿ.ಎಚ್‌
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
ಬಿಎಂಟಿಸಿ ಬಸ್‌
ಬಿಎಂಟಿಸಿ ಬಸ್‌   

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್‌ ಪಡೆಯಲು ಯುಪಿಐ ಮೂಲಕ ಪಾವತಿ ಮಾಡುವವರ ಪ್ರಮಾಣ ಶೇಕಡ 52ಕ್ಕೆ ಏರಿದೆ. ಈ ವರ್ಷ ನವೆಂಬರ್‌ ಅಂತ್ಯದವರೆಗೆ ₹470 ಕೋಟಿ ವರಮಾನ ಯುಪಿಐ ಮೂಲಕ ಬಂದಿದೆ.

ಕೋವಿಡ್‌ ಬಂದಾಗ ಅಂತರ ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ 2021ರ ಮೇ ತಿಂಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆ ಪರಿಚಯಿಸಲಾಗಿತ್ತು. ಕೋವಿಡ್‌ ಕಡಿಮೆಯಾಗುತ್ತಿದ್ದಂತೆ, ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯೂ ಮೂಲೆಗೆ ಸರಿದಿತ್ತು. ಜನ ಸಂಚಾರ ಹೆಚ್ಚಾಗಿ ಸಮಯದ ಕೊರತೆ, ನೆಟ್‌ವರ್ಕ್‌ ಸಮಸ್ಯೆ, ಕೆಲವೆಡೆ ಒಂದು ಕಿ.ಮೀ. ಒಳಗೆ ಮತ್ತೊಂದು ನಿಲುಗಡೆ ಇರುವುದರಿಂದರ ಅವರು ಇಳಿಯುವ ಮೊದಲು ಟಿಕೆಟ್‌ ವಿತರಿಸಬೇಕಾದ ಧಾವಂತಗಳೆಲ್ಲ ಯುಪಿಐ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಅಡ್ಡಿಯಾಗಿದ್ದವು.

ದೇವನಹಳ್ಳಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬನ್ನೇರುಘಟ್ಟ ಸಹಿತ ಪ್ರಮುಖ ಮತ್ತು ದೂರದ ಸ್ಥಳಗಳಿಗೆ ಸಂಚರಿಸುವ ಹವಾನಿಯಂತ್ರಿತ ಬಸ್‌ಗಳಲ್ಲಿ ಮಾತ್ರ ಯುಪಿಐ ವ್ಯವಸ್ಥೆ ಮುಂದುವರಿದಿತ್ತು. ಚಿಲ್ಲರೆ ನೀಡುವ ವಿಚಾರದಲ್ಲಿ ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ಹೆಚ್ಚಾಗತೊಡಗಿತ್ತು. ಇದನ್ನು ಮನಗಂಡ ಬಿಎಂಟಿಸಿ ಅಧಿಕಾರಿಗಳು ಯುಪಿಐ ಪಾವತಿ ಮತ್ತು ಟಿಕೆಟ್‌ ನೀಡುವ ವ್ಯವಸ್ಥೆಯನ್ನು 2025ರ ಜನವರಿಯಲ್ಲಿ ಆಧುನೀಕರಣಗೊಳಿಸಿ ಅನುಷ್ಠಾನಗೊಳಿಸಿತು. ಒಂದು ಬಸ್‌ನಲ್ಲಿ ಏಳೆಂಟು ಕಡೆಗಳಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಲಾಯಿತು. ಪ್ರಯಾಣಿಕರು ಸ್ಕ್ಯಾನ್‌ ಮಾಡಿ ಪಾವತಿ ಮಾಡಿದ ಕೂಡಲೇ ನಿರ್ವಾಹಕರಲ್ಲಿರುವ ಎಲೆಕ್ಟ್ರಿಕ್ ಟಿಕೆಟ್‌ ಮಷಿನ್‌ನಲ್ಲಿ ಟಿಕೆಟ್‌ ಮುದ್ರಣವಾಗುವಂತೆ ಮಾಡಲಾಯಿತು. ಇದರಿಂದ ಬಸ್‌ ನಿರ್ವಾಹಕರು ಕ್ಯೂಆರ್‌ ಕೋಡ್‌ ಅನ್ನು ಕುತ್ತಿಗೆಯಲ್ಲಿ ನೇತು ಹಾಕಿಕೊಳ್ಳಬೇಕಾದ ಪ್ರಮೇಯ ತಪ್ಪಿತು.

ADVERTISEMENT

‘2021ರಲ್ಲಿ ಯುಪಿಐ ಆಧಾರಿತ ಪಾವತಿಯು ದಿನಕ್ಕೆ ₹ 15 ಸಾವಿರ ಇರುತ್ತಿತ್ತು. 2024ರಲ್ಲಿ ಅದು ದಿನಕ್ಕೆ ₹ 33 ಲಕ್ಷಕ್ಕೆ ತಲುಪಿತ್ತು. ಈ ವರ್ಷ ಆಧುನೀಕರಣಗೊಳಿಸಿ ಎಲ್ಲ ಬಸ್‌ಗಳಲ್ಲಿ ಅಳವಡಿಸಿದ ಬಳಿಕ ದಿನಕ್ಕೆ ₹ 1.25 ಕೋಟಿಯಿಂದ ₹ 1.50 ಕೋಟಿವರೆಗೆ ಸಂಗ್ರಹವಾಗುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘ಬಿಎಂಟಿಸಿಯಲ್ಲಿ ಮೊದಲ ಸ್ಟೇಜ್‌ಗೆ ₹ 6, ಎರಡನೇ ಸ್ಟೇಜ್‌ಗೆ ₹ 12 ಇದೆ. ಎಲ್ಲ ಕಡೆ ಚಿಲ್ಲರೆ ನೀಡುವುದೇ ಸಮಸ್ಯೆ. ಇದಕ್ಕಾಗಿ ಹಲವು ಬಾರಿ ಜಗಳಗಳು ಉಂಟಾಗುತ್ತಿದ್ದವು. ಯುಪಿಐ ಆಧಾರಿತ ಪಾವತಿ ವ್ಯವಸ್ಥೆ ಬಂದ ಮೇಲೆ ಚಿಲ್ಲರೆ ಸಮಸ್ಯೆ ತಪ್ಪಿದೆ. ಜೊತೆಗೆ ಟಿಕೆಟ್‌ ನೀಡುವುದೂ ಸುಲಭವಾಗಿದೆ’ ಎಂದು ಬಿಎಂಟಿಸಿ ನಿರ್ವಾಹಕರೊಬ್ಬರು ತಿಳಿಸಿದರು.

ವೇಗ ಸರಳ ಪಾವತಿ
ಬಿಎಂಟಿಸಿಯಲ್ಲಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆ ಅಳವಡಿಕೆಯಿಂದ ಪ್ರಯಾಣಿಕರಿಗೆ ವೇಗವಾಗಿ ಸುಲಭ ಮತ್ತು ನಗದುರಹಿತ ಟಿಕೆಟ್‌ ನೀಡುವ ವ್ಯವಸ್ಥೆಯನ್ನು ಒದಗಿಸಲಾಗಿದೆ. ಸುರಕ್ಷಿತ ಮತ್ತು ವಿಶ್ವಾಸಾರ್ಹ ವಹಿವಾಟು ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯಾಣಿಕರು ಡಿಜಿಟಲ್ ಪಾವತಿಯನ್ನು ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಕೆ.ಬಿ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.