ADVERTISEMENT

ವೋಲ್ವೊ ಬಸ್: ಪ್ರಯಾಣ ದರ ಶೇ 34ರಷ್ಟು ಇಳಿಕೆ

ನಾಳೆಯಿಂದ ರಸ್ತೆಗಿಳಿಯಲಿವೆ 173 ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 21:57 IST
Last Updated 15 ಡಿಸೆಂಬರ್ 2021, 21:57 IST
ವೋಲ್ವೊ ಬಸ್
ವೋಲ್ವೊ ಬಸ್   

ಬೆಂಗಳೂರು: ಕೋವಿಡ್ ಅಲೆಗಳ ಅಬ್ಬರದಲ್ಲಿ ಪ್ರಯಾಣಿಕರ ಕೊರತೆಯಿಂದ ಮೂಲೆ ಸೇರಿದ್ದ ವೋಲ್ವೊ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿರುವ ಬಿಎಂಟಿಸಿ, ಪ್ರಯಾಣ ದರವನ್ನು ಶೇ 34ರಷ್ಟು ಕಡಿಮೆ ಮಾಡಿದೆ.

ವೋಲ್ವೊ ಬಸ್‌ಗಳನ್ನು ಮೂಲೆಗೆ ನಿಲ್ಲಿಸುವ ಬದಲು ‘ರಸ್ತೆಗಿಳಿಸಿ– ‍ಪ್ರಯಾಣ ದರವನ್ನೂ ಇಳಿಸಿ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ಡಿ.12ರ ಸಂಚಿಕೆಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಬಿಎಂಟಿಸಿ ಈ ಕ್ರಮ ಕೈಗೊಂಡಿದೆ.

ಸದ್ಯ 9 ಮಾರ್ಗಗಳಲ್ಲಿ 83 ವೋಲ್ವೊ (ವಜ್ರ) ಬಸ್‌ಗಳು ಕಾರ್ಯಚರಣೆಯಲ್ಲಿದ್ದವು. ಹೊಸದಾಗಿ ಇನ್ನೂ 12 ಮಾರ್ಗಗಳಲ್ಲಿ 90 ಬಸ್‌ಗಳನ್ನು 627 ಸುತ್ತುವಳಿಗಳಲ್ಲಿ ರಸ್ತೆಗೆ ಇಳಿಸಲು ಬಿಎಂಟಿಸಿ ತೀರ್ಮಾನಿಸಿದೆ. ಶುಕ್ರವಾರದಿಂದ ಒಟ್ಟು 173 ವೋಲ್ವೊ ಬಸ್‌ಗಳು ರಸ್ತೆಗೆ ಇಳಿಯಲಿವೆ.

ADVERTISEMENT

₹35 ಇದ್ದ ದರ ₹30ಕ್ಕೆ, ₹75 ಇದ್ದ ದರ ₹45ಕ್ಕೆ ಹೀಗೆ ಸರಾಸರಿ ಶೇ 34ರಷ್ಟು ಕಡಿತಗೊಳಿಸಲಾಗಿದೆ. ವಜ್ರ ಬಸ್‌ನ ದಿನದ ಪಾಸ್ ದರ ಈ ಹಿಂದೆ ಜಿಎಸ್‌ಟಿ ಸೇರಿ ₹120 ಇತ್ತು, ಈಗ ಅದನ್ನು ₹100ಕ್ಕೆ ಇಳಿಸಲಾಗಿದೆ. ಮಾಸಿಕ ಪಾಸ್ ದರ ₹2,000 ಇತ್ತು, ಈಗ ₹1,500ಕ್ಕೆ ಇಳಿಕೆ ಮಾಡಲಾಗಿದೆ. ಕನಿಷ್ಠ ದರ ₹ 10 ಹಾಗೂ ಗರಿಷ್ಠ ದರ ₹ 50 ಇರಲಿದೆ ಎಂದು ಬಿಎಂಟಿಸಿಮಾಹಿತಿ ನೀಡಿದೆ.

ಸಾಮಾನ್ಯ ಬಸ್‌ಗಳು ಮತ್ತು ವಾಯುವಜ್ರ (ವಿಮಾನ ನಿಲ್ದಾಣಕ್ಕೆ ಹೋಗುವ) ಬಸ್‌ಗಳ ಪ್ರಯಾಣ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

‘ಸಂಸ್ಥೆಯಲ್ಲಿ ಇನ್ನೂ 500ಕ್ಕೂ ಹೆಚ್ಚು ವೋಲ್ವೊ ಬಸ್‌ಗಳಿದ್ದು, ಹಂತ ಹಂತವಾಗಿ ರಸ್ತೆಗಿಳಿಸಲು ಉದ್ದೇಶಿಸಲಾಗಿದೆ. ದರ ಕಡಿಮೆ ಮಾಡಿರುವುದರಿಂದ ಪ್ರಯಾಣಿಕರು ಈ ಬಸ್‌ಗಳನ್ನು ಹತ್ತುವ ನಿರೀಕ್ಷೆ ಇದೆ. ಜನರಿಂದ ಬರುವ ಪ್ರತಿಕ್ರಿಯೆ ಆಧರಿಸಿ ವಜ್ರ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ’ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದರ ಕಡಿಮೆ ಮಾಡಿರುವುದರಿಂದ ಸಾಮಾನ್ಯ ಬಸ್‌ ಪ್ರಯಾಣ ದರಕ್ಕೂ, ಹವಾನಿಯಂತ್ರಿತ ವಜ್ರ ಬಸ್‌ ಪ್ರಯಾಣ ದರಕ್ಕೂ ₹10 ಮಾತ್ರ ವ್ಯತ್ಯಾಸ ಇದೆ. ಆರಾಮದಾಯಕ ಪ್ರಯಾಣಕ್ಕೆ ಈ ಬಸ್‌ಗಳನ್ನು ಬಳಸಿಕೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.