ADVERTISEMENT

BMTC: ಅಂಧರಿಗೆ ಬಿಎಂಟಿಸಿಯಲ್ಲೂ ಬೇಕು ‘ಶೂನ್ಯ’ ಟಿಕೆಟ್‌

ಬಾಲಕೃಷ್ಣ ಪಿ.ಎಚ್‌
Published 29 ಜುಲೈ 2025, 0:20 IST
Last Updated 29 ಜುಲೈ 2025, 0:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ಬೆಂಗಳೂರು: ಯಾವ ಊರಿಗೆ ಯಾವ ಬಸ್‌ನಲ್ಲಿ ತೆರಳಿರುವುದು ಎಂಬ ಸ್ಪಷ್ಟ ಮಾಹಿತಿಯನ್ನು ಸಂಪೂರ್ಣ ದೃಷ್ಟಿದೋಷ ಇರುವ ಪ್ರಯಾಣಿಕರೂ ತಿಳಿದುಕೊಳ್ಳುವುದಕ್ಕಾಗಿ, ಯಾವುದೇ ತೊಂದರೆಗಳು ಉಂಟಾದಾಗ ಅಧಿಕಾರಿಗಳ ಗಮನಕ್ಕೆ ತರುವುದಕ್ಕಾಗಿ ಬಿಎಂಟಿಸಿ ಬಸ್‌ಗಳಲ್ಲಿಯೂ ಅಂಧ ಪ್ರಯಾಣಿಕರಿಗೆ ‘0’ ಟಿಕೆಟ್‌ ವ್ಯವಸ್ಥೆ ಬೇಕಾಗಿದೆ.

ADVERTISEMENT

‘ನಡೆದಾಡಲು ನಮಗೆ ಊರುಗೋಲಿನಂತೆ ಸಹಾಯ ಮಾಡುವ ಸ್ಟಿಕ್‌ (ಅಂಧರ ಬಳಕೆಗಾಗಿಯೇ ಇರುವ ಕೋಲು) ತಪ್ಪಿ ಯಾವುದಾದರೂ ಬಸ್‌ನಲ್ಲಿ ಬಿಟ್ಟು ಬಂದರೆ ಆ ನಂತರ ಯಾವ ಬಸ್‌ ಎಂಬುದೇ ಗೊತ್ತಾಗುವುದಿಲ್ಲ. ಸ್ಟಿಕ್‌ ಇಲ್ಲದೇ ನಾವು ನಡೆಯುವುದೂ ಕಷ್ಟ. ಇದೇ ರೀತಿ ಹೆಚ್ಚು ಲಗೇಜ್‌ಗಳಿದ್ದರೆ ಯಾವುದಾದರೂ ಲಗೇಜ್‌ ಮರೆತು ಬಂದರೂ ಹೀಗೇ ಆಗುತ್ತದೆ. ಸುಲಭದಲ್ಲಿ ಪತ್ತೆ ಹಚ್ಚಲು ಬಸ್‌ ವಿವರ ನಮ್ಮಲ್ಲಿರಬೇಕು. ಪಾಸ್‌ ಇರುವುದರಿಂದ ಯಾವ ಬಸ್‌ನಲ್ಲಿ ಹೋಗಿದ್ದೇವೆ ಎಂಬ ಮಾಹಿತಿ ಇರುವುದಿಲ್ಲ. ಅದಕ್ಕಾಗಿ ‘0’ ಟಿಕೆಟ್‌ ವ್ಯವಸ್ಥೆಯನ್ನು ಬಿಎಂಟಿಸಿ ಬಸ್‌ಗಳಲ್ಲಿ ಜಾರಿಗೊಳಿಸಬೇಕು’ ಎಂದು ನ್ಯಾಷನಲ್‌ ಫೆಡರೇಷನ್‌ ಆಫ್‌ ಬ್ಲೈಂಡ್‌ನ ರಾಜ್ಯ ಯುವ ಘಟಕದ ಕಾರ್ಯದರ್ಶಿ ವೀರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಸ್‌ ಚಾಲಕರು ಅಥವಾ ನಿರ್ವಾಹಕರಲ್ಲಿ ಈ ಬಸ್‌ ಎಲ್ಲಿಗೆ ಹೋಗುತ್ತದೆ ಎಂದು ನಾವು ಕೇಳಿದಾಗ ಕೆಲವು ಬಾರಿ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಬಸ್‌ ನಿಲ್ದಾಣದಲ್ಲಿರುವ ಇತರ ಪ್ರಯಾಣಿಕರನ್ನು ಕೇಳಿ ಬಸ್‌ ಹತ್ತಬೇಕಾಗುತ್ತದೆ. ಅಂಥ ಬಸ್‌ಗಳಲ್ಲಿ ‘0’ ಟಿಕೆಟ್‌ ನಮಗೆ ಸಿಕ್ಕಿದರೆ ಯಾವ ಬಸ್‌ನ ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡಿಲ್ಲ ಎಂಬುದನ್ನು ಅವರ ಮೇಲಧಿಕಾರಿಗಳಿಗೆ ತಿಳಿಸಲು ಸುಲಭವಾಗುತ್ತದೆ. ನಮ್ಮ ಹತ್ತಿರ ಸಣ್ಣ ದಾಖಲೆ ಇದೆ ಎಂದು ಗೊತ್ತಾದರೂ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಾರೆ’ ಎಂಬುದು ಅವರ ವಿವರಣೆ.

'ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ‘0’ ಟಿಕೆಟ್‌ ನೀಡುವ ವ್ಯವಸ್ಥೆ ಇದೆ. ಅದನ್ನೇ ಇಲ್ಲೂ ಅಳವಡಿಸಬೇಕು. ಅವರಲ್ಲಿರುವ ಎಲೆಕ್ಟ್ರಿಕ್‌ ಟಿಕೆಟ್‌ ಮಷಿನ್‌ನಲ್ಲಿ (ಇಟಿಎಂ) ಇದೊಂದು ಆಯ್ಕೆಯನ್ನು ಸೇರಿಸಬೇಕು. ಈಗಾಗಲೇ ‘ಶಕ್ತಿ’ ಯೋಜನೆಯಡಿ ಸಂಚರಿಸುವ ಮಹಿಳೆಯರಿಗೆ ‘0’ ಟಿಕೆಟ್‌ ನೀಡುತ್ತಿದ್ದಾರೆ. ಅದರಂತೆ ನಮಗೂ ನೀಡಬೇಕು’ ಎಂದು ಸಂಪೂರ್ಣ ಅಂಧತ್ವ ಇರುವ ಮಹೇಶ್‌ ತಿಳಿಸಿದರು.

ಕೆಎಸ್ಆರ್‌ಟಿಸಿಯಲ್ಲಿ ಸ್ಥಳ ಘೋಷಣೆ ಬೇಕು

ಬಿಎಂಟಿಸಿ ಬಸ್‌ ನಮ್ಮ ಮೆಟ್ರೊಗಳಲ್ಲಿ ನಿಲ್ದಾಣಗಳ ಮಾಹಿತಿಯನ್ನು ನಿಲ್ದಾಣ ಹತ್ತಿರ ಬಂದಾಗ ಉದ್ಘೋಷಿಸಲಾಗುತ್ತಿದೆ. ಇದು ಅಂಧರಿಗೆ ಬಹಳ ಉಪಯೋಗವಾಗಿದೆ. ಇದೇ ಮಾದರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೂ ಸ್ಥಳಗಳ ಮಾಹಿತಿಯ ಧ್ವನಿ ಬಿತ್ತರ ವ್ಯವಸ್ಥೆ ಬೇಕು ಎಂದು ವೀರೇಶ್‌ ಮತ್ತು ಮಹೇಶ್‌ ತಿಳಿಸಿದರು.

ಚರ್ಚಿಸಿ ನಿರ್ಧಾರ: ರಾಮಲಿಂಗಾರೆಡ್ಡಿ

ಪೂರ್ಣ ಅಂಧತ್ವ ಹೊಂದಿರುವವರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಪಾಸ್ ನೀಡಲಾಗಿದೆ. ‘0’ ಟಿಕೆಟ್‌ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ನಗರದ ಒಳಗೆ ಸಂಚರಿಸುವ ಬಸ್‌ಗಳಲ್ಲಿ ಧ್ವನಿ ಬಿತ್ತರ ವ್ಯವಸ್ಥೆ ಮಾಡಬಹುದು. ಆದರೆ ದೂರದ ಊರಿಗೆ ಸಂಚರಿಸುವ ಬಸ್‌ಗಳಲ್ಲಿ ಕಷ್ಟ. ಬೆಂಗಳೂರಿನಲ್ಲಿ ಬಿಎಂಟಿಸಿಯಲ್ಲಿ ಈ ವ್ಯವಸ್ಥೆ ಇದೆ. ಮೈಸೂರು ನಗರದ ಒಳಗೆ ಸಂಚರಿಸುವ ಕೆಎಸ್‌ಆರ್‌ಟಿಸಿಯ 200 ಬಸ್‌ಗಳಲ್ಲಿ ‘ಧ್ವನಿ ಸ್ಪಂದನ’ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.