ಬೆಂಗಳೂರು: ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹೊತ್ತ ಇ–ಮೇಲ್‌ಗಳು ಬರುತ್ತಿರುವುದು ಮುಂದುವರೆದಿದ್ದು, ನಗರದ 40ಕ್ಕೂ ಅಧಿಕ ಶಾಲೆಗಳಿಗೆ ಶುಕ್ರವಾರ ಬೆಳಿಗ್ಗೆ ಇದೇ ರೀತಿಯ ಇ–ಮೇಲ್ ಬಂದು ಆತಂಕ ಸೃಷ್ಟಿಯಾಗಿತ್ತು.
ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬೆದರಿಕೆ ಸಂದೇಶ ಬಂದಿದ್ದ ಶಾಲೆಗಳಲ್ಲಿ ಪರಿಶೀಲಿಸಿದಾಗ ಯಾವುದೇ ಸ್ಫೋಟಕ ವಸ್ತುಗಳು ಪತ್ತೆ ಆಗಲಿಲ್ಲ. ಬಳಿಕ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ನಿಟ್ಟುಸಿರು ಬಿಟ್ಟರು.
ನಗರದ ಭಾರತೀನಗರ, ಕಬ್ಬನ್‌ಪಾರ್ಕ್, ಆರ್.ಆರ್. ನಗರ, ಚಾಮರಾಜಪೇಟೆ, ಹೆಣ್ಣೂರು, ಶ್ರೀರಾಮಪುರ, ರಾಮಮೂರ್ತಿನಗರ, ಕೆಂಗೇರಿ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು ಎಂದು ಪೊಲೀಸರು ಹೇಳಿದರು.
ಎಂ.ಎಸ್.ಧೋನಿ ಗ್ಲೋಬಲ್ ಸ್ಕೂಲ್, ಸೇಂಟ್ ಜರ್ಮೈನ್ ಅಕಾಡೆಮಿ ಸ್ಕೂಲ್ ಸೇರಿದಂತೆ 40 ಖಾಸಗಿ ಶಾಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಎಂದಿನಂತೆ ಶಾಲಾ ಆಡಳಿತ ಮಂಡಳಿಯ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದಾಗ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಕಂಡುಬಂದಿತ್ತು. ಆಯಾ ಶಾಲಾ ಶಿಕ್ಷಕರು, ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುದ್ದಿ ಹರಡುತ್ತಿದ್ದಂತೆ ಭಯಭೀತರಾದ ಪಾಲಕರು ಕೂಡಲೇ ಶಾಲೆಗಳಿಗೆ ತೆರಳಿ ಮಾಹಿತಿ ಪಡೆದುಕೊಂಡರು. ಕೆಲವು ಪೋಷಕರು ಆತಂಕದಿಂದ ಮಕ್ಕಳನ್ನು ಮನೆಗೆ ಕರೆದೊಯ್ದರು.
‘ಶಾಲಾ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಬಾಂಬ್ ನಿಷ್ಕ್ರಿಯ ದಳ, ಬಾಂಬ್ ತಪಾಸಣೆ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳಾಗಲಿ, ರಾಸಾಯನಿಕ ಪದಾರ್ಥಗಳಾಗಲಿ ಪತ್ತೆ ಆಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢವಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರಿಂದ ತನಿಖೆ ಚುರುಕು: ಯಾವ ಸ್ಥಳದಿಂದ, ಯಾರು ಇ–ಮೇಲ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂಬುದರ ಕುರಿತು ಪೊಲೀಸರು ತಾಂತ್ರಿಕವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
‘ಪ್ರಾಥಮಿಕ ತನಿಖೆಯಂತೆ ಇ–ಮೇಲ್ ಡೊಮೈನ್ ಬ್ರಿಟಿಷ್ ಇಂಡಿಯನ್ ಓಷನ್ ಟೆರಿಟರಿ ಮೂಲದ್ದಾಗಿದೆ ಎಂಬುದು ಕಂಡುಬಂದಿದೆ. ಆದರೆ, ಆರೋಪಿಗಳ ಸುಳಿವು ಸಿಕ್ಕಿಲ್ಲ. ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬೆಳಿಗ್ಗೆ 7.45ರಲ್ಲಿ ಬೆದರಿಕೆಯ ಇ–ಮೇಲ್ ಸಂದೇಶ ಬಂದಿದೆ. ಕೂಡಲೇ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಬಂದು ತಪಾಸಣೆ ಮಾಡಿದ್ದಾರೆ. ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಯಾರೋ ಮಾನಸಿಕವಾಗಿ ತೊಂದರೆಗೆ ಒಳಗಾದ ವ್ಯಕ್ತಿ ಇ–ಮೇಲ್ ಮಾಡಿರುವಂತೆ ಕಾಣಿಸುತ್ತಿದೆ’ ಎಂದು ಶಾಲೆಯೊಂದರ ಪ್ರಾಂಶುಪಾಲರು ಹೇಳಿದರು.
2024ರಲ್ಲೂ ಕೆಲವು ಶಾಲೆಗಳಿಗೆ ಬೆದರಿಕೆಯ ಇ-ಮೇಲ್ ಸಂದೇಶಗಳು ಬಂದಿದ್ದವು. 2023ರ ಡಿಸೆಂಬರ್‌ನಲ್ಲೂ ಇದೇ ಮಾದರಿಯಲ್ಲಿ ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಸಂದೇಶ ಕಳುಹಿಸಿ ಆತಂಕ ಸೃಷ್ಟಿಸಿದ್ದರು.
ಕಿಡಿಗೇಡಿಗಳ ಬಂಧನ: ಗೃಹ ಸಚಿವ ಜಿ.ಪರಮೇಶ್ವರ
‘ಕಳೆದ ಬಾರಿ ಸಹ ಹಲವು ಶಾಲೆಗಳಿಗೆ ಬೆದರಿಕೆ ಇ–ಮೇಲ್ ಬಂದಿತ್ತು. ನಾವು ಎಲ್ಲವನ್ನು ಪರಿಶೀಲಿಸಿದ್ದೆವು. ಯಾವುದನ್ನೂ ನಿರ್ಲಕ್ಷಿಸಲು ಆಗುವುದಿಲ್ಲ. ಈಗ ಬಂದಿರುವ ಇ–ಮೇಲ್‌ಗಳನ್ನು ಬೆಂಗಳೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
- ಇ–ಮೇಲ್‌ನಲ್ಲಿ ಏನಿತ್ತು?
‘ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸ್ಫೋಟಕ ತುಂಬಿ ಶಾಲಾ ತರಗತಿಗಳಲ್ಲಿ ಇರಿಸಲಾಗಿದೆ. ನನಗೆ ನಿಜಕ್ಕೂ ನನ್ನ ಜೀವನವೇ ಇಷ್ಟವಿಲ್ಲ. ನಾನೂ ಸಹ ಅತ್ಮಹತ್ಯೆಗೆ ಶರಣಾಗುತ್ತೇನೆ. ದಯವಿಟ್ಟು ಇ–ಮೇಲ್ ಸಂದೇಶದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿ’ ಎಂದು ರೋಡ್‌ಕಿಲ್ ಎಂಬ ಹೆಸರಿನೊಂದಿಗೆ ಇ ಮೇಲ್‌ನಲ್ಲಿ ಬರೆಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.