ADVERTISEMENT

ಮನೆ ಕೊಡಲಿಲ್ಲವೆಂದು ಬಾಂಬ್ ಬೆದರಿಕೆ ಕರೆ!

ಮುಖ್ಯಮಂತ್ರಿ ಗಮನ ಸೆಳೆಯಲು ಕಾರ್ಮಿಕ ಮಾಡಿದ ಸಂಚು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 20:19 IST
Last Updated 18 ಡಿಸೆಂಬರ್ 2018, 20:19 IST
ಮನ್ಸೂರ್
ಮನ್ಸೂರ್   

ಬೆಂಗಳೂರು: ಸರ್ಕಾರ ತನಗೆ ಉಚಿತ ಮನೆ ಮಂಜೂರು ಮಾಡಲಿಲ್ಲವೆಂಬ ಕೋಪದಲ್ಲಿ ಸೆಂಟ್ರಿಂಗ್ ಕೆಲಸಗಾರನೊಬ್ಬ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮನೆ ಸಮೀಪ ಬಾಂಬ್ ಇಟ್ಟಿದ್ದೇನೆ’ ಎಂದು ಹೇಳಿ ಆತಂಕ ಸೃಷ್ಟಿಸಿದ ಪ್ರಸಂಗ ಸೋಮವಾರ ರಾತ್ರಿ ನಡೆದಿದೆ.

ಈ ರೀತಿ ಭಯದ ವಾತಾವರಣ ಸೃಷ್ಟಿಸಿದ್ದ ಕಲಬುರ್ಗಿ ಜಿಲ್ಲೆ ಸೇಡಂನ ಮನ್ಸೂರ್ ನನ್ನು (32)ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ‘ಮುಖ್ಯಮಂತ್ರಿ ಅವರ ಗಮನ ಸೆಳೆಯಲು ಈ ರೀತಿ ಮಾಡಿದೆ. ಅವರು ಈಗಲಾದರೂ ನನ್ನನ್ನು ಕರೆಸಿ ಮಾತನಾಡಲಿ. ಉಚಿತವಾಗಿ ಒಂದು ಮನೆ ಕೊಡಲಿ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.

ಆಗಿದ್ದೇನು?: ರಾತ್ರಿ 9.43ಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದ್ದ ಆರೋಪಿ, ‘ನನ್ನ ಹೆಸರು ಗೋಪಾಲ್. ಸಿಎಂ ಮನೆಗೆ ಬಾಂಬ್ ಇಟ್ಟಿದ್ದೇನೆ. ಸ್ವಲ್ಪ ಹೊತ್ತಿನಲ್ಲೇ ಅದು ಸ್ಫೋಟಗೊಳ್ಳುತ್ತದೆ’ ಎಂದು ಹೇಳಿದ್ದ. ಕೂಡಲೇ ಜೆ.ಪಿ.ನಗರ ಪೊಲೀಸರಿಗೆ ವಿಷಯ ತಿಳಿಸಿದ್ದರು.

ADVERTISEMENT

ಶ್ವಾನ ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳ ಜತೆ ಕುಮಾರಸ್ವಾಮಿ ಅವರ ಮನೆಗೆ (ಜೆ.ಪಿ.ನಗರ 3ನೇ ಹಂತ) ತೆರಳಿದ ಪೊಲೀಸರು, ಮುಖ್ಯಮಂತ್ರಿ ಅವರ ಕುಟುಂಬ ಸದಸ್ಯರನ್ನು ಮನೆ ಯಿಂದ ಆಚೆ ಕಳುಹಿಸಿ ಸುಮಾರು ಮುಕ್ಕಾಲು ತಾಸು ಶೋಧ ನಡೆಸಿದರು. ಯಾವುದೇ ಸ್ಫೋಟಕ ಪತ್ತೆಯಾಗದಿದ್ದಾಗ, ಅದೊಂದು ‘ಹುಸಿ ಕರೆ’ ಎಂದು ಘೋಷಿಸಿ ನಿಟ್ಟುಸಿರು ಬಿಟ್ಟಿದ್ದರು.

ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಆರೋಪಿ ಮನ್ಸೂರ್‌ನನ್ನು ಪೊಲೀಸರು, ಪತ್ತೆ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆತ, ಕೂಡ್ಲು ಬಳಿ ಶೆಡ್ ಹಾಕಿಕೊಂಡು ವಾಸವಾಗಿದ್ದ. ‘ಇಂಥ ಸನ್ನಿವೇಶ ನಿರ್ಮಾಣ ಆಗುತ್ತದೆಂದು ಗೊತ್ತಿರಲಿಲ್ಲ’ ಎಂದು ಆತ ಕ್ಷಮಾಪಣೆ ಕೋರಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಸಿ.ಎಂ ನನ್ನನ್ನು ಮರೆಯಬಾರದು’

‘ಮುಖ್ಯಮಂತ್ರಿ ಅವರಿಗೆ ಜನತಾ ದರ್ಶನದಲ್ಲಿ ಎರಡು ಸಲ ಮನವಿ ಕೊಟ್ಟಿದ್ದೆ. ಉಚಿತವಾಗಿ ಮನೆ ನೀಡುವುದಾಗಿ ಅವರೂ ಭರ ವಸೆ ಕೊಟ್ಟಿದ್ದರು. ಆ ನಂತರ ಭೇಟಿಯಾಗಲು ಆಗಿರಲಿಲ್ಲ. ಅವರು ನನ್ನನ್ನು ಮರೆತುಬಿಟ್ಟಿದ್ದಾ ರೇನೋ ಎನಿಸಿತು. ಹೀಗಾಗಿ, ಅವರ ಗಮನ ನನ್ನ ಕಡೆ ಸೆಳೆ ಯಲೆಂದು ಕರೆ ಮಾಡಿದ್ದೆ’ ಎಂದು ಆರೋಪಿ ತಪ್ಪೊಪ್ಪಿ ಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.