ADVERTISEMENT

ಆತಂಕ ಸೃಷ್ಟಿಸಿದ ‘ಬಾಂಬ್’ ಬರಹ:ಮಂಗಳೂರು ಬದಲು ಬೆಂಗಳೂರಿನಲ್ಲಿ ವಿಮಾನ ಲ್ಯಾಂಡಿಂಗ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 15:52 IST
Last Updated 19 ಅಕ್ಟೋಬರ್ 2025, 15:52 IST
<div class="paragraphs"><p>&nbsp;ಇಂಡಿಗೊ ವಿಮಾನ</p></div>

 ಇಂಡಿಗೊ ವಿಮಾನ

   

ಬೆಂಗಳೂರು: ಶನಿವಾರ ರಾತ್ರಿ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಪ್ರಯಾಣಿಕರೊಬ್ಬರು ಬರೆದಿದ್ದ ‘ಬಾಂಬ್’ ಬರಹ ಕೆಲ ಕಾಲ ಆತಂಕ ಸೃಷ್ಟಿಸಿತ್ತು.

168 ಪ್ರಯಾಣಿಕರನ್ನು ಹೊತ್ತ ವಿಮಾನವು ದುಬೈನಿಂದ ಮಂಗಳೂರಿಗೆ ಸಂಜೆ ಹಾರಾಟ ಆರಂಭಿಸಿತ್ತು. ಮಾರ್ಗ ಮಧ್ಯೆ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯಕ್ಕೆ ಹೋಗಿ`ಬಾಂಬ್' ಎಂದು ಬರೆದು ಹೊರಬಂದಿದ್ದಾರೆ. 

ADVERTISEMENT

ಸ್ವಲ್ಪ ಸಮಯದ ಬಳಿಕ ಶೌಚಾಲಯಕ್ಕೆ ಹೋದ ಸಹ ಪ್ರಯಾಣಿಕರು, ಬಾಂಬ್ ಎಂಬ ಬರಹ ನೋಡಿ ಗಾಬರಿಯಾಗಿ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಬಳಿಕ ಸುರಕ್ಷತಾ ದೃಷ್ಟಿಯಿಂದ ವಿಮಾನವನ್ನು ಮಂಗಳೂರಿನ ಬದಲಿಗೆ ತುರ್ತಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

ಕೆಐಎಎಲ್‍ನಲ್ಲಿ ಭದ್ರತಾ ಸಿಬ್ಬಂದಿ ಮಧ್ಯರಾತ್ರಿವರೆಗೆ ಇಡೀ ವಿಮಾನವನ್ನು ತಪಾಸಣೆ ಮಾಡಿದರು. ಅಲ್ಲದೇ, ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಿದರು. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಬಾಂಬ್‍ನ ಅಪಾಯವಿಲ್ಲವೆಂದು ತಿಳಿದ ಬಳಿಕ ಪ್ರಯಾಣಿಕರು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

‘ವಿಮಾನದ ಶೌಚಾಲಯದಲ್ಲಿ ಬರೆದಿದ್ದ ಬಾಂಬ್‍ ಎಂಬ ಬರಹವು ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿತ್ತು. ವಿಚಾರ ತಿಳಿದ ಕೂಡಲೇ ಸುರಕ್ಷತಾ ದೃಷ್ಟಿಯಿಂದ ವಿಮಾನದ ಮಾರ್ಗ ಬದಲಾವಣೆ ಮಾಡಿ ಕೆಐಎಎಲ್‍ನಲ್ಲಿ ಇಳಿಸಿ ತಪಾಸಣೆ ಮಾಡಲಾಗಿದೆ. ಬರಹ ಬರೆದ ಪ್ರಯಾಣಿಕನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಪ್ರಯಾಣಿಕನ ಗುರುತು ಪತ್ತೆಯಾದ ನಂತರ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಪೊಲೀಸರು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.