ಬೆಂಗಳೂರು: ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಮೊಳಗಿದ ‘ಮಾರ್ನಿಂಗ್ ಮೆಲೋಡಿ’ಗೆ ಮಕ್ಕಳಿಂದ ಹಿಡಿದು ವೃದ್ಧರವರೆಗಿನ ಎಲ್ಲ ವಯೋಮಾನದವರು ‘ಮಂಟಪ’ ಪ್ರವೇಶಿಸಿದ್ದರು. ಸಾಹಿತ್ಯದ ಚರ್ಚೆಗಳಿಗೆ ಕಿವಿಯಾಗಲು ಬಂದಿದ್ದವರು ಹಿಂದೂಸ್ಥಾನಿ ಸಂಗೀತ ಗಾಯನಕ್ಕೆ ತಲೆದೂಗಿದರು.
ಬುಕ್ ಬ್ರಹ್ಮ ಸಂಸ್ಥೆ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಕೊನೆಯ ದಿನವಾದ ಭಾನುವಾರ ಮುಂಜಾನೆ ‘ಮಂಟಪ’ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗಣಪತಿ ಭಟ್ ಹಾಸಣಗಿ ಮತ್ತು ತಂಡದವರು ಹಿಂದೂಸ್ಥಾನಿ ಗಾಯನ ಪ್ರಸ್ತುತಪಡಿಸಿದರು. ಸುಮಾರು ಒಂದೂವರೆ ಗಂಟೆ ನಡೆದ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಸೆರೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಬಳಿಕ ಈ ವೇದಿಕೆಯ ಜತೆಗೆ ಒಟ್ಟು ಎಂಟು ವೇದಿಕೆಗಳಲ್ಲಿ ವಿವಿಧ ವಿಚಾರ ಗೋಷ್ಠಿಗಳು ನಡೆದವು.
ಚರ್ಚಾ ಗೋಷ್ಠಿಗಳಲ್ಲಿ ವಿಷಯ ವೈವಿಧ್ಯ ಇದ್ದ ಕಾರಣ ಉತ್ಸವದಲ್ಲಿ ಪಾಲ್ಗೊಂಡಿದ್ದವರು, ತಮ್ಮಿಷ್ಟದ ಗೋಷ್ಠಿಗಳನ್ನು ಆಯ್ಕೆ ಮಾಡಿಕೊಂಡು ವಿಷಯ ತಜ್ಞರ ಮಾತುಗಳನ್ನು ಆಲಿಸಿದರು. ಸಾಹಿತ್ಯ ಕ್ಷೇತ್ರದ ಪ್ರಮುಖರ ಜತೆಗೆ ಮಾತುಕತೆ, ಫೋಟೊ ಕ್ಲಿಕ್ಕಿಸಿಕೊಳ್ಳುವುದು ಹಾಗೂ ಪುಸ್ತಕಗಳಿಗೆ ಹಸ್ತಾಕ್ಷರ ಪಡೆಯುವುದು ಸಾಮಾನ್ಯವಾಗಿತ್ತು.
ಮಕ್ಕಳಿಗೆ ಪ್ರತ್ಯೇಕವಾಗಿ ರೂಪಿಸಲಾಗಿದ್ದ ‘ಚಿಣ್ಣರ ಲೋಕ’ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು. ಇದರಿಂದಾಗಿ ಚಿಣ್ಣರ ಕಲರವ ಪಾಲಕರ ಸಂಭ್ರಮವನ್ನು ಹೆಚ್ಚಿಸಿತ್ತು. ಮಕ್ಕಳ ಜತೆಗೆ ಸಂಭಾಷಣೆ ನಡೆಸಿದ ಲೇಖಕರು, ಕಥೆಗಳನ್ನು ಹೇಳಿ ರಂಜಿಸಿದರು. ಚಿತ್ರಕಲೆ, ಕಥೆ ಹೇಳುವುದೂ ಸೇರಿ ವಿವಿಧ ಸ್ಪರ್ಧೆಗಳ ಜತೆಗೆ ಮನೋರಂಜನೆಯ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು.
ಉತ್ಸವದ ಮುಖ್ಯ ಆಕರ್ಷಣೆಯಾದ ‘ಮುಖಾ-ಮುಖಿ’ ವೇದಿಕೆಯಲ್ಲಿ ಬಾನು ಮುಷ್ತಾಕ್, ದಾಮೋದರ್ ಮೌಜೊ, ಎನ್.ಎಸ್. ಮಾಧವನ್, ಕೆ.ಆರ್. ಮೀರಾ, ಲಕ್ಷ್ಮಣ್ ಗಾಯಕ್ವಾಡ್, ನೇಮಿಚಂದ್ರ, ಪೆರುಮಾಳ್ ಮುರುಗನ್, ಮಕರಂದ ಸಾಠೆ, ವಸುಧೇಂದ್ರ, ಶರಣಕುಮಾರ ಲಿಂಬಾಳೆ, ಜೋಗಿ ಹಾಗೂ ಕೊಳಕಲೂರಿ ಎನೋಚ್ ಅವರ ಜತೆಗೆ ಸಾಹಿತ್ಯಾಸಕ್ತರು ಚರ್ಚೆ, ಸಂವಾದ ನಡೆಸಿದರು.
ಮಧ್ಯಾಹ್ನ ಬಿ. ಸ್ಟುಡಿಯೋ ಪ್ರಸ್ತುತಪಡಿಸಿದ ‘ರಾಮೇಶ್ವರನ್ ಕಾಕುಲು’ ತೆಲುಗು ನಾಟಕ, ಬೆಂಗಳೂರು ಕಥಕ್ಕಳಿ ಕ್ಲಬ್ ಮತ್ತು ಕಲಾ ಸಂಸ್ಥೆ ಪ್ರಸ್ತುತಪಡಿಸಿದ ‘ಕಥಕ್ಕಳಿ’ ಸಾಂಸ್ಕೃತಿಕ ಕಾರ್ಯಕ್ರಮವು ಪ್ರೇಕ್ಷಕರನ್ನು ಮನಸೂರೆಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.