ADVERTISEMENT

‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಎರಡನೇ ದಿನ: ಸಾಹಿತ್ಯ ಸಂಭ್ರಮ, ರಂಜಿಸಿದ ಸಂಗೀತ

‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಎರಡನೇ ದಿನ ಹೆಚ್ಚಿದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 23:32 IST
Last Updated 9 ಆಗಸ್ಟ್ 2025, 23:32 IST
ಬುಕ್ ಬ್ರಹ್ಮ ಸಾಹಿತ್ಯ ಉತ್ಸವದ ಗೋಷ್ಠಿಯೊಂದರಲ್ಲಿ ನಿಂತುಕೊಂಡು ಸಹ ಚರ್ಚೆ ಆಲಿಸುತ್ತಿರುವ ಸಾಹಿತ್ಯ ಪ್ರೇಮಿಗಳು
ಪ್ರಜಾವಾಣಿ ಚಿತ್ರ
ಬುಕ್ ಬ್ರಹ್ಮ ಸಾಹಿತ್ಯ ಉತ್ಸವದ ಗೋಷ್ಠಿಯೊಂದರಲ್ಲಿ ನಿಂತುಕೊಂಡು ಸಹ ಚರ್ಚೆ ಆಲಿಸುತ್ತಿರುವ ಸಾಹಿತ್ಯ ಪ್ರೇಮಿಗಳು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋರಮಂಗಲದ ಸೇಂಟ್‌ ಜಾನ್ಸ್ ಸಭಾಂಗಣದಲ್ಲಿ ಮೊಳಗಿದ ‘ಮುಂಜಾವಿನ ರಾಗ’ಕ್ಕೆ ಮಕ್ಕಳಿಂದ ಹಿಡಿದು ವೃದ್ಧರವರೆಗಿನ ಎಲ್ಲ ವಯೋಮಾನದವರು ‘ಮಂಟಪ’ ಪ್ರವೇಶಿಸಿದ್ದರು. ಸಾಹಿತ್ಯದ ಚರ್ಚೆಗಳಿಗೆ ಕಿವಿಯಾಗಲು ಬಂದಿದ್ದವರು ಸಂಗೀತದ ರಾಗಕ್ಕೆ ತಲೆದೂಗಿದರು. 

ಬುಕ್ ಬ್ರಹ್ಮ ಸಂಸ್ಥೆ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಎರಡನೇ ದಿನವಾದ ಶನಿವಾರ ಮುಂಜಾನೆ ಹಮ್ಮಿಕೊಳ್ಳಲಾಗಿದ್ದ ‘ಮುಂಜಾವಿನ ರಾಗ’ ಕಾರ್ಯಕ್ರಮದಲ್ಲಿ ಪ್ರವೀಣ್ ಗೋಡ್ಖಿಂಡಿ ಅವರು ಕೊಳಲು ನುಡಿಸಿದರೆ, ಕಿರಣ್ ಗೋಡ್ಖಿಂಡಿ ತಬಲಾದಲ್ಲಿ ಸಾಥ್ ನೀಡಿದರು. ಸುಮಾರು ಒಂದೂವರೆ ಗಂಟೆ ನಡೆದ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಸೆರೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಗಾಯಕಿ ಮಾನಸಿ ಪ್ರಸಾದ್ ಮತ್ತು ತಂಡವು ನದಿ ಮತ್ತು ಮಳೆಯ ಹಾಡುಗಳನ್ನು ಪ್ರಸ್ತುತಪಡಿಸಿದರೆ, ಸಂಜೆ ನಡೆದ ಟಿ.ಎಂ. ಕೃಷ್ಣ ಅವರ ಶಾಸ್ತ್ರೀಯ ಸಂಗೀತ ಕಛೇರಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಎಂಟು ವೇದಿಕೆಗಳಲ್ಲಿ ನಡೆದ ಚರ್ಚಾ ಗೋಷ್ಠಿಗಳಲ್ಲಿ ವಿಷಯ ವೈವಿಧ್ಯ ಇದ್ದ ಕಾರಣ ಉತ್ಸವದಲ್ಲಿ ಪಾಲ್ಗೊಂಡಿದ್ದವರು, ತಮ್ಮಿಷ್ಟದ ಗೋಷ್ಠಿಗಳನ್ನು ಆಯ್ಕೆ ಮಾಡಿಕೊಂಡು ವಿಷಯ ತಜ್ಞರ ಮಾತುಗಳನ್ನು ಆಲಿಸಿದರು. ಮಧ್ಯಾಹ್ನದ ಬಳಿಕ ಸಾಹಿತ್ಯ ಪ್ರೇಮಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಸಾಹಿತ್ಯ ಕ್ಷೇತ್ರದ ಪ್ರಮುಖರ ಜತೆಗೆ ಮಾತುಕತೆ, ಫೋಟೊ ಕ್ಲಿಕ್ಕಿಸಿಕೊಳ್ಳುವುದು ಹಾಗೂ ಪುಸ್ತಕಗಳಿಗೆ ಹಸ್ತಾಕ್ಷರ ಪಡೆಯುವುದು ಸಾಮಾನ್ಯವಾಗಿತ್ತು. 

ADVERTISEMENT

ಮಕ್ಕಳಿಗೆ ಪ್ರತ್ಯೇಕವಾಗಿ ರೂಪಿಸಲಾಗಿದ್ದ ‘ಚಿಣ್ಣರ ಲೋಕ’ದಲ್ಲಿ ವಿವಿಧ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಇದರಿಂದಾಗಿ ಚಿಣ್ಣರ ಕಲರವ ಪಾಲಕರ ಸಂಭ್ರಮವನ್ನು ಹೆಚ್ಚಿಸಿತ್ತು. ಮಕ್ಕಳ ಜತೆಗೆ ಸಂಭಾಷಣೆ ನಡೆಸಿದ ಲೇಖಕರು, ಕಥೆಗಳನ್ನು ಹೇಳಿ ರಂಜಿಸಿದರು. ಚಿತ್ರಕಲೆ, ಕಥೆ ಹೇಳುವುದೂ ಸೇರಿ ವಿವಿಧ ಸ್ಪರ್ಧೆಗಳ ಜತೆಗೆ ಮನೋರಂಜನೆಯ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

ಉತ್ಸವದಲ್ಲಿ ಕನ್ನಡ, ತಮಿಳು, ಮಲೆಯಾಳ, ತೆಲುಗು, ಮರಾಠಿ ಮತ್ತು ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಳಿಗೆಗಳು ಇದ್ದವು. ಈ ಬಾರಿ ಪ್ರತಿ ಭಾಷೆಯಿಂದ ತಲಾ ಒಂದು ಪ್ರಕಾಶನ ಸಂಸ್ಥೆಯ ಮಳಿಗೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಪುಸ್ತಕ ಬಿಡುಗಡೆಗೂ ಪ್ರತ್ಯೇಕ ವೇದಿಕೆ ಕಲ್ಪಿಸಲಾಗಿತ್ತು. ವಿವಿಧ ಲೇಖಕರ ಪುಸ್ತಕಗಳು ಈ ವೇದಿಕೆಯಲ್ಲಿ ಬಿಡುಗಡೆಯಾದವು. 

ಉತ್ಸವದಲ್ಲಿ ಜನರು ಪುಸ್ತಕಗಳನ್ನು ಖರೀದಿಸಿದರು 

ಇಂದು ಸಾಹಿತ್ಯ ಉತ್ಸವಕ್ಕೆ ತೆರೆ

ಮೂರು ದಿನಗಳ ಸಾಹಿತ್ಯ ಉತ್ಸವಕ್ಕೆ ಭಾನುವಾರ ತೆರೆ ಬೀಳಲಿದೆ. ಎಂಟು ವೇದಿಕೆಗಳಲ್ಲಿ ವಿವಿಧ ಚರ್ಚೆ ಸಂವಾದ ಪುಸ್ತಕ ಬಿಡುಗಡೆ ಮಾತುಕತೆಗಳು ನಡೆಯಲಿವೆ. ಬೆಳಿಗ್ಗೆ 8.30ರಿಂದ ಗಣಪತಿ ಭಟ್ ಹಾಸಣಗಿ ವ್ಯಾಸಮೂರ್ತಿ ಕಟ್ಟಿ ಮತ್ತು ಶ್ರೀಧರ್ ಮಾಂಡ್ರೆ ಅವರಿಂದ ‘ಬೆಳಗಿನ ಗಾಯನ’ ಶೀರ್ಷಿಕೆಯಡಿ ಹಿಂದೂಸ್ಥಾನಿ ಸಂಗೀತ ಕಛೇರಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಬಿ ಸ್ಟುಡಿಯೊ ‘ರಾಮೇಶ್ವರಂ ಕಾಕುಲ’ ಹಾಗೂ ಸಂಜೆ 6.30ಕ್ಕೆ ಬೆಂಗಳೂರು ಕ್ಲಬ್ ಫಾರ್ ಕಥಕಳಿ ಆ್ಯಂಡ್ ದಿ ಆರ್ಟ್ಸ್ ಸಂಸ್ಥೆಯಿಂದ ‘ದುರ್ಯೋಧನ ವಧಂ’ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.  ‘ಮುಖಾಮುಖಿ’ ವೇದಿಕೆಯಲ್ಲಿ ಸಾಹಿತ್ಯ ಕ್ಷೇತ್ರದ ಪ್ರಮುಖರ ಜತೆಗೆ ಸಂವಾದ ನಡೆಸುವ ಅವಕಾಶವೂ ಇದ್ದು ಬಾನು ಮುಷ್ತಾಕ್ ದಾಮೋದರ್ ಮೌಜೊ ಎನ್.ಎಸ್. ಮಾಧವನ್ ಕೆ.ಆರ್. ಮೀರಾ ಲಕ್ಷ್ಮಣ್ ಗಾಯಕ್ವಾಡ್ ನೇಮಿಚಂದ್ರ ಪೆರುಮಾಳ್ ಮುರುಗನ್ ಮಕರಂದ ಸಾಠೆ ವಸುಧೇಂದ್ರ ಶರಣಕುಮಾರ ಲಿಂಬಾಳೆ ಜೋಗಿ ಹಾಗೂ ಕೊಳಕಲೂರಿ ಎನೋಚ್ ಪಾಲ್ಗೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.