ADVERTISEMENT

ಬುಕ್ ಬ್ರಹ್ಮ: ಸಾಹಿತ್ಯ ಉತ್ಸವ ಆ.9ರಿಂದ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:52 IST
Last Updated 27 ಜುಲೈ 2024, 15:52 IST
ವೆಂಕಟೇಶ್‌ ಕುಮಾರ್
ವೆಂಕಟೇಶ್‌ ಕುಮಾರ್   

ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆಗಸ್ಟ್‌ 9ರಿಂದ 11ರವರೆಗೆ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ ಹಮ್ಮಿಕೊಂಡಿದೆ.

ಮೂರು ದಿನಗಳ ಉತ್ಸವದಲ್ಲಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ ಕಲಾವಿದೆ ಮಾನಸಿ ಸುಧೀರ್ ತಂಡದಿಂದ ‘ಕಾವ್ಯಾನುಭವ’ದ ಪ್ರಸ್ತುತಿ ನಡೆಯಲಿದೆ. ಸಂಜೆ ಮೈಸೂರಿನ ನಟನ ರಂಗ ತಂಡದಿಂದ ‘ಕನ್ನಡ ಕಾವ್ಯ ಕಣಜ’ ಎಂಬ ಕನ್ನಡ ಸಾಹಿತ್ಯದ ಇತಿಹಾಸ ಸಾರುವ ರಂಗ ಪ್ರಸ್ತುತಿ ಹಮ್ಮಿಕೊಳ್ಳಲಾಗಿದೆ.

ಆ. 10ರ ಬೆಳಿಗ್ಗೆ ಗಾಯಕಿ ಬಿಂದುಮಾಲಿನಿ ಅವರಿಂದ ‘ಬೆಳಗಿನ ಗಾಯನ’ ಕಾರ್ಯಕ್ರಮ ಮತ್ತು ಮಧ್ಯಾಹ್ನ ಬಿ.ಶೆಟ್ಟಿಹಳ್ಳಿಯ ನಿರ್ದಿಗಂತ ತಂಡದಿಂದ ‘ಸಮತೆ ಮತ್ತು ಮಮತೆಯ ಸೊಲ್ಲುಗಳು’ ಪ್ರದರ್ಶನ ನಡೆಯಲಿದೆ. ಅದೇ ದಿನ ಸಂಜೆ ಗಾಯಕ ಆರ್‌.ಕೆ.ಪದ್ಮನಾಭ ಅವರಿಂದ ಕರ್ನಾಟಕ ಸಂಗೀತ ಗಾಯನ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ADVERTISEMENT

11ರಂದು ಬೆಳಿಗ್ಗೆ ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಂದ ‘ಭಾವವೊಂದು ಭಾಷೆ ಬೇರೆ’ ರಂಗಪ್ರಯೋಗ ನಡೆಯಲಿದೆ. ಬಳಿಕ ಮೇಘನಾ ಚಂದ್ರಮೌಳಿ ಅವರಿಂದ ‘ಕಾವ್ಯಾಭಿಕ್ತಿ’ ನೃತ್ಯ ಪ್ರದರ್ಶನ, ರಾತ್ರಿ ಕೆರೆಮನೆ ಮೇಳದಿಂದ ‘ಪಂಚವಟಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆ ಹೇಳಿದೆ. 

ದಕ್ಷಿಣ ಭಾರತದ 20 ಯುವ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಸಾಹಿತ್ಯಾಸಕ್ತರು  www.bookbrahmalitfest.comಗೆ ಭೇಟಿ ನೀಡಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆಯಲ್ಲಿ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.