ADVERTISEMENT

ಬುಕ್‌ ಬ್ರಹ್ಮ ಸಾಹಿತ್ಯೋತ್ಸವ: ಭೈರವಿ ರಾಗಕ್ಕೆ ಎದ್ದು ನಿಂತಿದ್ದ ಹುಲ್ಲು..

‘ಕಾದಂಬರಿಯಾದ ಸಂಗೀತ’ ಗೋಷ್ಠಿಯಲ್ಲಿ ಶಾಸ್ತ್ರೀಯ ಸಂಗೀತದ ವಿವಿಧ ಆಯಾಮ ಅನಾವರಣ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 1:15 IST
Last Updated 10 ಆಗಸ್ಟ್ 2025, 1:15 IST
ಗೋಷ್ಠಿಯಲ್ಲಿ ಪ್ರವೀಣ್ ಗೋಡ್ಖಿಂಡಿ ಮಾತನಾಡಿದರು. ಶ್ರೀಶ ಜೋಶಿ ಮತ್ತು ಬಾಳಾಸಾಹೇಬ ಲೋಕಾಪುರ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ಪ್ರವೀಣ್ ಗೋಡ್ಖಿಂಡಿ ಮಾತನಾಡಿದರು. ಶ್ರೀಶ ಜೋಶಿ ಮತ್ತು ಬಾಳಾಸಾಹೇಬ ಲೋಕಾಪುರ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಾಸ್ತ್ರೀಯ ಸಂಗೀತಕ್ಕೆ ಸಸ್ಯ–ಪ್ರಾಣಿಗಳೂ ಸ್ಪಂದಿಸಿ ಮೈಮರೆಯುತ್ತವೆ. ಆದರೆ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಸಂಗೀತ ಪ್ರಕಾರ ಅಳಿದು ಹೋಗುತ್ತಿದೆಯೆ? ಏಕೆ ತಾನು ಹಾಕಿಕೊಂಡ ಚೌಕಟ್ಟನ್ನು ಮೀರಿ ಹೊರಬರುತ್ತಿಲ್ಲ? 

ಇಂತಹ ಪ್ರಶ್ನೆಗಳಿಗೆ ಉತ್ತರ ಒದಗಿಸಿದ್ದು ಬುಕ್‌ ಬ್ರಹ್ಮ ಸಾಹಿತ್ಯೋತ್ಸವದ ಎರಡನೇ ದಿನವಾದ ಶನಿವಾರ ನಡೆದ ‘ಕಾದಂಬರಿಯಾದ ಸಂಗೀತ’ ಗೋಷ್ಠಿ. ‌ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶಾಸ್ತ್ರೀಯ ಸಂಗೀತವು ಅವಗಣಿಸಲ್ಪಟ್ಟಿರುವ ಬಗ್ಗೆ ಆರಂಭವಾದ ಈ ಚರ್ಚೆ, ಶಾಸ್ತ್ರೀಯ ಸಂಗೀತದ ಶಕ್ತಿ ಹಾಗೂ ಈ ಪ್ರಕಾರದ ಕಲಿಕೆಯ ಬಗ್ಗೆ ಹೊರಳಿತು. ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಂಗೀತಗಾರ ಪ್ರವೀಣ್ ಗೋಡ್ಖಿಂಡಿ ಹಾಗೂ ಲೇಖಕ ಶ್ರೀಶ ಜೋಶಿ ಅವರು ಶಾಸ್ತ್ರೀಯ ಸಂಗೀತದ ವಿವಿಧ ಆಯಾಮಗಳನ್ನು ಪರಿಚಯಿಸಿದರೆ, ಸಾಹಿತಿ ಬಾಳಾಸಾಹೇಬ ಲೋಕಾಪುರ ಅವರು ಗೋಷ್ಠಿಯನ್ನು ನಿರ್ವಹಿಸಿದರು. 

ಶಾಸ್ತ್ರೀಯ ಸಂಗೀತದ ಮಹತ್ವ ವಿವರಿಸುತ್ತಲೇ ಘಟನೆಯೊಂದನ್ನು ಸ್ಮರಿಸಿಕೊಂಡ ಶ್ರೀಶ ಜೋಶಿ, ‘ಪ್ರತಿಯೊಂದು ಸ್ವರವೂ ನಿಗದಿತ ಸಮಯದಲ್ಲಿ ಜಾಗೃತಗೊಳಿಸುವ ಶಕ್ತಿ ಹೊಂದಿದೆ. ಸಂಗೀತದಲ್ಲಿ ಸಮಯ ಚಕ್ರ ಮುಖ್ಯ ಮತ್ತು ಪರಿಣಾಮಕಾರಿ. 1989ರಲ್ಲಿ ಹರಿಪ್ರಸಾದ್ ಚೌರಾಸಿಯಾ ಅವರು ಬೆಳಿಗ್ಗೆ ಮೂರು ಗಂಟೆ ವೇಳೆಗೆ ಭೈರವಿ ರಾಗದಲ್ಲಿ ಕೊಳಲು ನುಡಿಸಿದರು. ಈ ರಾಗದ ಪ್ರಭಾವದಿಂದ ಮಲಗಿದ್ದ ಹುಲ್ಲು ಎದ್ದು ನಿಂತಿದ್ದನ್ನು ಕಣ್ಣಾರೆ ಕಂಡಿದ್ದೇವೆ’ ಎಂದು ವಿವರಿಸಿದರು. 

ADVERTISEMENT

ಸಂಗೀತದ ಈ ಶಕ್ತಿಗೆ ಸಹಮತ ವ್ಯಕ್ತಪಡಿಸುತ್ತಲೇ ಮಾತು ಮುಂದುವರಿಸಿದ ಪ್ರವೀಣ್ ಗೋಡ್ಖಿಂಡಿ, ‘ಪ್ರಸಿದ್ಧ ಸಂಗೀತಗಾರರನ್ನು ಕಛೇರಿ ನಡೆಸಲು ಆಹ್ವಾನಿಸಿದರೆ, ಅವರು ವೇದಿಕೆ ಮೇಲೆ ಸಿದ್ಧತೆ ಮಾಡಿಕೊಳ್ಳಲು ಅರ್ಧಗಂಟೆಯಷ್ಟು ಸಮಯ ಬೇಕಾಗುತ್ತದೆ. ಸಂಗೀತಗಾರ ಶಿವಕುಮಾರ್ ಶರ್ಮಾ ಅವರು ಸಂತೂರ್‌ನ ನೂರು ತಂತಿಗಳನ್ನು ಸರಿಯಾಗಿ ಜೋಡಿಸಿಕೊಳ್ಳಲು 45 ನಿಮಿಷ ತೆಗೆದುಕೊಂಡಿದ್ದರು. ಆ ವೇಳೆಗೆ ಕಛೇರಿ ಮುಗಿಯಿತೆಂದು ಭಾವಿಸಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು’ ಎಂದು ಸ್ಮರಿಸಿಕೊಂಡ ಅವರು, ‘ಸಂಗೀತ ಕಛೇರಿ ನೀಡಲು ಸಾಕಷ್ಟು ಪೂರ್ವಸಿದ್ಧತೆ ಬೇಕಾಗುತ್ತದೆ. ಈ ಪ್ರಕಾರದಲ್ಲಿ ಮನೋರಂಜನೆಗಿಂತ ಆತ್ಮರಂಜನೆ ಮುಖ್ಯ’ ಎಂದು ಅಭಿಪ್ರಾಯಪಟ್ಟರು. 

ಅ.ನ.ಕೃಷ್ಣರಾಯ ಅವರು ‘ಸಂಧ್ಯಾರಾಗ’ ಕಾದಂಬರಿಯಲ್ಲಿ ಶಾಸ್ತ್ರೀಯ ಸಂಗೀತ ಪ್ರಕಾರವು ಅಳಿದು ಹೋಗುತ್ತಿರುವ ಬಗ್ಗೆ ಉಲ್ಲೇಖಿಸಿದ್ದರು ಎಂದು ಬಾಳಾಸಾಹೇಬ ಲೋಕಾಪುರ ಸ್ಮರಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಗೋಡ್ಖಿಂಡಿ, ‘ಈ ಪೀಳಿಗೆಯ ಬುದ್ಧಿಮಟ್ಟ ಅತ್ಯುತ್ತಮವಾಗಿದೆ. ಉತ್ಕೃಷ್ಟ ಸಂಗೀತಗಾರರು ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಜನಸಂಖ್ಯೆ ಆಧರಿಸಿದರೆ ಈ ಪ್ರಕಾರ ಸಾಕಷ್ಟು ಬೆಳೆದಿದೆ ಎನ್ನಲು ಸಾಧ್ಯವಿಲ್ಲ. ಎಲ್ಲ ವರ್ಗದವರನ್ನು ತಲುಪಬೇಕೆಂಬ ಉದ್ದೇಶದಿಂದಲೇ ಈಗಿನ ಕಲಾವಿದರು ಪ್ರೇಕ್ಷಕರ ಜತೆಗೆ ಸಂಪರ್ಕ ಸಾಧಿಸುತ್ತಿದ್ದಾರೆ’ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.