ADVERTISEMENT

ವಿಭಜನೆ ವೇಳೆ ಮುಸ್ಲಿಮರನ್ನು ಪಾಕ್‌ಗೆ ಕಳುಹಿಸಲು ಹೇಳಿದ್ದ ಅಂಬೇಡ್ಕರ್‌: ಭೈರಪ್ಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 6:56 IST
Last Updated 23 ಜುಲೈ 2022, 6:56 IST
ವಿಕಿ ಬುಕ್ಸ್-‌ಸ್ಮಾರ್ಟ್ ಕೀ ಮತ್ತು ವಿಶ್ವವಾಣಿ ಪುಸ್ತಕ ಆಯೋಜಿಸಿದ್ದ ಸಮಾರಂಭದಲ್ಲಿ ಕಿರಣ್ ಉಪಾಧ್ಯಾಯ (ಎಡದಿಂದ ಕೊನೆಯವರು) ಹಾಗೂ ವಿಶ್ವೇಶ್ವರ ಭಟ್ (ಎಡದಿಂದ ಮೊದಲಿಗರು) ಅವರ ಪುಸ್ತಕಗಳನ್ನು ಎಸ್‌.ಎಲ್. ಭೈರಪ್ಪ ಬಿಡುಗಡೆ ಮಾಡಿದರು. ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರತಾಪ್ ಸಿಂಹ ಹಾಗೂ ನಾಗೇಶ್ ಹೆಗಡೆ ಇದ್ದಾರೆ. -ಪ್ರಜಾವಾಣಿ ಚಿತ್ರ
ವಿಕಿ ಬುಕ್ಸ್-‌ಸ್ಮಾರ್ಟ್ ಕೀ ಮತ್ತು ವಿಶ್ವವಾಣಿ ಪುಸ್ತಕ ಆಯೋಜಿಸಿದ್ದ ಸಮಾರಂಭದಲ್ಲಿ ಕಿರಣ್ ಉಪಾಧ್ಯಾಯ (ಎಡದಿಂದ ಕೊನೆಯವರು) ಹಾಗೂ ವಿಶ್ವೇಶ್ವರ ಭಟ್ (ಎಡದಿಂದ ಮೊದಲಿಗರು) ಅವರ ಪುಸ್ತಕಗಳನ್ನು ಎಸ್‌.ಎಲ್. ಭೈರಪ್ಪ ಬಿಡುಗಡೆ ಮಾಡಿದರು. ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರತಾಪ್ ಸಿಂಹ ಹಾಗೂ ನಾಗೇಶ್ ಹೆಗಡೆ ಇದ್ದಾರೆ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಗಲಭೆ, ಘರ್ಷಣೆಗಳು ನಡೆಯಬಾರದು ಎಂಬ ಕಾರಣಕ್ಕೆ ದೇಶ ವಿಭಜನೆಯ ವೇಳೆ ಭಾರತದಲ್ಲಿದ್ದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ, ಅಲ್ಲಿದ್ದ ಹಿಂದೂಗಳನ್ನು ಭಾರತಕ್ಕೆ ಸ್ಥಳಾಂತರಿಸುವಂತೆ ಅಂಬೇಡ್ಕರ್ ಹೇಳಿದ್ದರು. ಆದರೆ, ಆಗ ಯಾರೂ ಅದಕ್ಕೆ ಒಪ್ಪಲಿಲ್ಲ. ಅವರು ಏಕೆ ಹಾಗೆ ಹೇಳಿದ್ದರು ಎನ್ನುವುದನ್ನು ಈಗ ಯಾರೂ ಚರ್ಚಿಸುತ್ತಿಲ್ಲ’ ಎಂದು ಸಾಹಿತಿ ಎಸ್‌.ಎಲ್. ಭೈರಪ್ಪ ಬೇಸರ ವ್ಯಕ್ತಪಡಿಸಿದರು.

ವಿಕಿ ಬುಕ್ಸ್‌–ಸ್ಮಾರ್ಟ್‌ಕೀ ಹಾಗೂ ವಿಶ್ವವಾಣಿ ಪುಸ್ತಕ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಕಿರಣ್ ಉಪಾಧ್ಯಾಯ ಅವರ‘ವಿಶ್ವತೋಮುಖ’ ಹಾಗೂ ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್ ಅವರ‘ಸುದ್ದಿಮನೆ’,‘ಇದೇ ಅಂತರಂಗ ಸುದ್ದಿ’ ಹಾಗೂ‘ನೂರೆಂಟು ವಿಶ್ವ’ ಪುಸ್ತಕಗಳನ್ನು ಬಿಡುಗಡೆಮಾಡಿ, ಮಾತನಾಡಿದರು.

‘ಮುಸ್ಲಿಮರ ದೇಶವಾದ ಟರ್ಕಿಯಲ್ಲಿ ಅರೇಬಿಕ್ ಮತ್ತು ಪರ್ಷಿಯನ್ ಲಿಪಿಗಳಿಲ್ಲ. ಎಲ್ಲವೂ ಇಂಗ್ಲಿಷ್‌ನಲ್ಲಿದೆ. ಇದಕ್ಕೆ ಆ ದೇಶವನ್ನು ಆಳಿದ ಕಮಲ್ ಪಾಷಾ ಕಾರಣ.ಮಹಾತ್ಮ ಗಾಂಧೀಜಿ ಕಾಲದಲ್ಲಿಯೇ ಅವರು ಆಳ್ವಿಕೆ ನಡೆಸಿದ್ದರು. ಅವರಷ್ಟುಹೊಸ ರೀತಿಯ ಆಲೋಚನೆಗಳನ್ನು ಬೇರೆ ಯಾರೂ ಮಾಡಲಿಲ್ಲ. ಗಲಭೆ ತಡೆಯಲು ಹಾಗೂ ಪ‍ರಸ್ಪರ ಸೌಹಾರ್ದದ ವಾತಾವರಣ ನಿರ್ಮಿಸಲು ಟರ್ಕಿಯಲ್ಲಿನ ಗ್ರೀಕರನ್ನು ಗ್ರೀಸ್‌ ದೇಶಕ್ಕೆ, ಅಲ್ಲಿದ್ದ ಟರ್ಕಿಯ ಜನರನ್ನು ತಮ್ಮ ದೇಶಕ್ಕೆ ಸ್ಥಳಾಂತರ ಮಾಡಿಸಿದರು. ಜನರಿಗೆ ಆಸ್ತಿಯಮಾರುಕಟ್ಟೆ ದರವನ್ನೂ ನೀಡಲಾಯಿತು. ನಮ್ಮಲ್ಲಿಯೂ ಈ ರೀತಿ ಹಿಂದೂ–ಮುಸ್ಲಿಮರ ಸ್ಥಳಾಂತರದ ಬಗ್ಗೆ ಅಂಬೇಡ್ಕರ್‌ ಒಂದು ಹಂತದವರೆಗೆ ಪ್ರತಿಪಾದಿಸಿದ್ದರು’ ಎಂದರು.

ADVERTISEMENT

ವಿಜ್ಞಾನ ಬರಹಗಾರ ನಾಗೇಶ ಹೆಗಡೆ, ‘ದೇಶದಲ್ಲಿ ಮಾಧ್ಯಮ ಕ್ಷೇತ್ರವುಸತ್ಯ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ, ಬ್ರಿ‌ಟನ್‌ನಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿಯಿದ್ದು, ಭ್ರಷ್ಟಾಚಾರ ಆರೋಪ ಹೊತ್ತಿದ್ದ ಬೋರಿಸ್ ಜಾನ್ಸನ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವಷ್ಟು ಶಕ್ತಿ ಅಲ್ಲಿ ಇದೆ’ ಎಂದರು.

ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುಸ್ತಕಗಳ ಲೇಖಕರಾದ ವಿಶ್ವೇಶ್ವರ ಭಟ್, ಕಿರಣ್‌ ಉಪಾಧ್ಯಾಯ, ಸಂಸದ ಪ್ರತಾಪ್ ಸಿಂಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.