ADVERTISEMENT

‘ಉತ್ತಮ ಬಾಂಧವ್ಯ ಹೊಂದಿದ್ದ ಗಾಂಧೀಜಿ, ನೇತಾಜಿ’

ಸುಭಾಷ್‌ ಚಂದ್ರ ಬೋಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಸುಮಂತ್ರ ಬೋಸ್ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:57 IST
Last Updated 30 ಆಗಸ್ಟ್ 2025, 18:57 IST
ಕಾರ್ಯಕ್ರಮದಲ್ಲಿ ಜಿ. ಪರಮೇಶ್ವರ ಅವರು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸುಮಂತ್ರ ಬೋಸ್, ಕೆ.ಈ. ರಾಧಾಕೃಷ್ಣ, ಜಿ.ಆರ್. ಶಿವಶಂಕರ್ ಮತ್ತು ಪ್ರಕಾಶಕ ಡಿ.ಎನ್. ಶೇಖರ ರೆಡ್ಡಿ ಉಪಸ್ಥಿತರಿದ್ದರು
- ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಜಿ. ಪರಮೇಶ್ವರ ಅವರು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸುಮಂತ್ರ ಬೋಸ್, ಕೆ.ಈ. ರಾಧಾಕೃಷ್ಣ, ಜಿ.ಆರ್. ಶಿವಶಂಕರ್ ಮತ್ತು ಪ್ರಕಾಶಕ ಡಿ.ಎನ್. ಶೇಖರ ರೆಡ್ಡಿ ಉಪಸ್ಥಿತರಿದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಪ್ರಥಮ ಬಾರಿಗೆ ಸಂಬೋಧಿಸಿದ್ದೆ ಸುಭಾಷ್ ಚಂದ್ರ ಬೋಸ್. ಆದರೆ, ರಾಜಕೀಯ ದುರುದ್ದೇಶದಿಂದ ಅವರಿಬ್ಬರ ಸಮೀಕರಣದ ಬಗ್ಗೆ ತಪ್ಪಾಗಿ ಬಿಂಬಿಸಲಾಗುತ್ತಿದೆ’ ಎಂದು ಕೊಲ್ಕತ್ತಾದ ನೇತಾಜಿ ಸುಭಾಷ್‌ ಚಂದ್ರ ಬೋಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಸುಮಂತ್ರ ಬೋಸ್ ಅಭಿಪ್ರಾಯಪಟ್ಟರು.

ನೇತಾಜಿ ಸುಭಾಷ್‌ ಚಂದ್ರ ಬೋಸ್ ಟ್ರಸ್ಟ್, ಸನ್‌ಸ್ಟಾರ್ ಪಬ್ಲಿಷರ್ಸ್ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆ.ಇ. ರಾಧಾಕೃಷ್ಣ ಅವರು ಅನುವಾದಿಸಿರುವ ನೇತಾಜಿ ಸುಭಾಷ್‌ ಚಂದ್ರ ಬೋಸರ ‘ಒಂದು ಅಪೂರ್ಣ ಆತ್ಮಕಥೆ’, ‘ಭಾರತೀಯ ಹೋರಾಟ’, ‘ಅಸಾಮಾನ್ಯ ದಿನಚರಿ’ ಪುಸ್ತಕಗಳು ಜನಾರ್ಪಣೆಯಾದವು.

ಈ ವೇಳೆ ಮಾತನಾಡಿದ ಸುಭಾಷ್ ಚಂದ್ರ ಬೋಸ್ ಅವರ ಸಹೋದರ ಶರತ್‌ಚಂದ್ರ ಬೋಸ್ ಅವರ ಮೊಮ್ಮಗನೂ ಆಗಿರುವ ಸುಮಂತ್ರ ಬೋಸ್, ‘ನೇತಾಜಿ ಸ್ವಾತಂತ್ರ್ಯ ಚಳವಳಿಯ ಅತ್ಯಂತ ದೂರದೃಷ್ಟಿಯ ನಾಯಕರಲ್ಲಿ ಒಬ್ಬರಾಗಿದ್ದರು. ಸ್ವತಂತ್ರ ಭಾರತ ಹೇಗಿರಬೇಕು ಎಂಬುದರ ಕುರಿತು ಅವರಿಗೆ ಸ್ಪಷ್ಟವಾದ ವಿಚಾರಗಳಿದ್ದವು. ಗಾಂಧೀಜಿ ಮತ್ತು ನೇತಾಜಿ ಅವರ ಹೋರಾಟದ ಮಾರ್ಗ ಭಿನ್ನವಾಗಿದ್ದರೂ ಪರಸ್ಪರ ಗೌರವ ಹೊಂದಿದ್ದರು’ ಎಂದರು. 

ADVERTISEMENT

ಗೃಹ ಸಚಿವ ಜಿ. ಪರಮೇಶ್ವರ, ‘ನೇತಾಜಿ ಮತ್ತು ಗಾಂಧೀಜಿ ಇಬ್ಬರದ್ದೂ ಒಂದೇ ಧ್ಯೇಯವಾಗಿತ್ತು. ಆದರೆ, ಮಾರ್ಗಗಳು ಬೇರೆಯಾಗಿದ್ದವು. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅವರದ್ದು ಸಮಾಧಾನದ ಮಾರ್ಗವಾದರೆ, ನೇತಾಜಿ ಅವರದ್ದು ಅವಸರದ ದಾರಿಯಾಗಿತ್ತು. ಸ್ವಾತಂತ್ರ್ಯ ಹೋರಾಟವನ್ನು ಕೇವಲ ಚರಿತ್ರೆ ಎಂದು ನೋಡದೆ, ಸ್ವಾತಂತ್ರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆಯೂ ಯೋಚಿಸುವ ಅಗತ್ಯವಿದೆ’ ಎಂದು ಹೇಳಿದರು.

ಪುಸ್ತಕಗಳ ಬಗ್ಗೆ ಮಾತನಾಡಿದ ಲೇಖಕ ಕೆ.ಈ. ರಾಧಾಕೃಷ್ಣ, ‘ಗಾಂಧೀಜಿ ಅವರನ್ನು ನೇತಾಜಿ ಅವರು ಸೂಕ್ತವಾಗಿ ಅರ್ಥ ಮಾಡಿಕೊಂಡಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಮತ್ತು ನೇತಾಜಿ ಅಗ್ರಗಣ್ಯರು’ ಎಂದು ಅಭಿಪ್ರಾಯಪಟ್ಟರು.

‘ದೇಶಪ್ರೇಮ ದಿನವನ್ನಾಗಿ ಆಚರಿಸಿ’

‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ‘ದೇಶಪ್ರೇಮ ದಿನ’ ಎಂದು ರಾಜ್ಯ ಸರ್ಕಾರ ಘೋಷಿಸಬೇಕು. ಶಾಲಾ-ಕಾಲೇಜು ಪಠ್ಯದಲ್ಲಿ ನೇತಾಜಿ ಕುರಿತು ಪಾಠಗಳನ್ನು ಅಳವಡಿಸಬೇಕು. ಇಂಗ್ಲಿಷ್‌ನಲ್ಲಿರುವ ನೇತಾಜಿ ಕುರಿತ 14 ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಬೇಕು. ಇದಕ್ಕೆ ಸರ್ಕಾರ ನೆರವಾಗಬೇಕು. ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ಕಾರ್ಯ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಬೆಂಬಲ ಮತ್ತು ಆರ್ಥಿಕ ಸಹಕಾರ ಒದಗಿಸಬೇಕು’ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ಅಧ್ಯಕ್ಷ ಎಂ. ರಾಜ್‌ಕುಮಾರ್ ಅವರು ಜಿ.ಪರಮೇಶ್ವರ ಅವರಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.