ADVERTISEMENT

ಪುಸ್ತಕದ ಅರಿವು ಗೂಗಲ್‌ನಿಂದ ದೊರೆಯದು: ಗಿರೀಶ್ ಕಾಸರವಳ್ಳಿ

ಸಾಹಿತ್ಯ ಯುಗಾದಿ ಸಮಾರಂಭದಲ್ಲಿ ವಿವಿಧ ಲೇಖಕರ 10 ಕೃತಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 0:06 IST
Last Updated 24 ಮಾರ್ಚ್ 2025, 0:06 IST
ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ಮತ್ತು ಬೈರಮಂಗಲ ರಾಮೇಗೌಡ ಸಮಾಲೋಚನೆ ನಡೆಸಿದರು. ಸಹನಾ ವಿಜಯಕುಮಾರ್, ಬಸವರಾಜ ಸಬರದ ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ಮತ್ತು ಬೈರಮಂಗಲ ರಾಮೇಗೌಡ ಸಮಾಲೋಚನೆ ನಡೆಸಿದರು. ಸಹನಾ ವಿಜಯಕುಮಾರ್, ಬಸವರಾಜ ಸಬರದ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗೂಗಲ್‌ನಲ್ಲಿ ಎಲ್ಲದರ ಬಗ್ಗೆಯೂ ಮಾಹಿತಿ ಸಿಗುತ್ತದೆ. ಆದರೆ, ಪುಸ್ತಕದಲ್ಲಿ ಸಿಗುವ ರೀತಿಯ ಪರಿಪೂರ್ಣ ಮಾಹಿತಿ, ಅನುಭವ ಹಾಗೂ ಅರಿವು ಗೂಗಲ್‌ನಿಂದ ದೊರೆಯದು’ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

ವೀರಲೋಕ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಾಹಿತ್ಯ ಯುಗಾದಿ-2025’ ಸಮಾರಂಭದಲ್ಲಿ ವಿವಿಧ ಲೇಖಕರ 10 ಕೃತಿಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು. 

‘ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅಂಗೈಯಲ್ಲಿ ಪುಸ್ತಕ ಹಿಡಿದು ಓದುವುದರಿಂದ ಸಿಗುವ ಅನುಭವ ಬೇರಾವುದರಿಂದಲೂ ದೊರೆಯದು. ಪುಸ್ತಕ ಓದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಹಾಗೂ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ತಂತ್ರಜ್ಞಾನದ ಮೂಲಕ ಓದುವ ಬದಲು ಕೈಯಲ್ಲಿ ಪುಸ್ತಕ ಹಿಡಿದು ಓದುವುದನ್ನು ರೂಢಿಸಿಕೊಳ್ಳಬೇಕು. ತಮ್ಮ ಜ್ಞಾನ ವಿಸ್ತರಣೆಗೆ ಹೆಚ್ಚು ಪುಸ್ತಕಗಳನ್ನು ಓದಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಸಾಹಿತಿ ಬಸವರಾಜ ಸಬರದ, ‘ಪುಸ್ತಕೋದ್ಯಮದ ಬೆಳವಣಿಗೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯು ಪೂರಕವಾಗಿತ್ತು. ಆದರೆ, ಈ ಯೋಜನೆಯಡಿ 2021ರ ಪುಸ್ತಕಗಳ ಖರೀದಿ ಪ್ರಕ್ರಿಯೆಯೇ ನಡೆದಿಲ್ಲ. ಯೋಜನೆಯಡಿ 2020ರಲ್ಲಿ ಖರೀದಿಸಿರುವ ಪುಸ್ತಕಗಳಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಪುಸ್ತಕಗಳ ಕುರಿತ ಸರ್ಕಾರದ ಈ ನಿಲುವು ಖಂಡನೀಯ. ಪ್ರಕಾಶಕರ ಉಳಿವಿಗೆ ಆಧಾರವಾಗಿದ್ದ ಏಕಗವಾಕ್ಷಿ ಯೋಜನೆಯನ್ನು ಸರ್ಕಾರ ಪುನಃ ಪ್ರಾರಂಭಿಸಬೇಕು’ ಎಂದು ಆಗ್ರಹಿಸಿದರು.

ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ, ‘ಪುಸ್ತಕ ಬಿಡುಗಡೆ ಕಾರ್ಯಕ್ರಮಗಳೆಂದರೆ ಹೆಚ್ಚಿನ ಜನರು ಸೇರುವುದಿಲ್ಲ ಎಂಬ ಭಾವನೆಯಿದೆ. ಸಾವಿರಾರು ಜನರನ್ನು ಸೇರಿಸುವ ಜತೆಗೆ ನವ ಓದುಗರನ್ನು ಒಳಗೊಂಡು ಪುಸ್ತಕಗಳ ಬಿಡುಗಡೆ ಮಾಡಬೇಕೆಂಬ ನಮ್ಮ ಕನಸು ಈ ಸಮಾರಂಭದ ಮೂಲಕ ಈಡೇರಿದೆ’ ಎಂದರು. 

ಅಜಿತ್ ಕಾರಂತ್, ರಾಧಾಕೃಷ್ಣ ಕಲ್ಚಾರ್ ಅವರ ತಂಡವು ತಾಳಮದ್ದಲೆ ಮೂಲಕ ಪುಸ್ತಕ ಪರಿಚಯ ಮಾಡಿತು. ಸಾಹಿತಿ  ಬೈರಮಂಗಲ ರಾಮೇಗೌಡ, ಕಾದಂಬರಿಗಾರ್ತಿ ಸಹನಾ ವಿಜಯಕುಮಾರ್ ಉಪಸ್ಥಿತರಿದ್ದರು.

ಬಿಡುಗಡೆಯಾದ ಪುಸ್ತಕಗಳು

ಸಮಾರಂಭದಲ್ಲಿ ಎಸ್.ದಿವಾಕರ್ ಅವರ ‘ವಾಸ್ತವ ಪ್ರತಿವಾಸ್ತವ’ ಎಂ.ವೆಂಕಟಸ್ವಾಮಿ ಅವರ ‘ಟೈಟಾನಿಕ್’ ಜಯಶ್ರೀ ಕಾಸರವಳ್ಳಿ ಅವರ ‘ಹೀಗೊಂದು ಏರೋಸ್ಪೇಸ್ ಪುರಾಣ’ ನಟರಾಜ ಅರಳಸುರಳಿ ಅವರ ‘ಆಕಾಶಬುಟ್ಟಿ’ ಎಂ. ರಾಜಶೇಖರ ಅವರ ‘ಶತಮಾನಂಭವತಿ’ ಅರ್ಜುನ್ ದೇವಾಲದಕೆರೆ ಅವರ ‘ಮಿಕ್ಸ್ ಆ್ಯಂಡ್ ಮ್ಯಾಚ್’ ಚೇತನ್ ನಾಡಿಗೇರ್ ಅವರ ‘ಚಂದನವನದೊಳ್’ ನಡಹಳ್ಳಿ ವಸಂತ್ ಅವರ ‘ಮಹಿಳೆಯರಿಗೆ ಮಾತ್ರವಲ್ಲ!’ ಪ್ರಸಾದ್ ನಾಯ್ಕ ಅವರ ‘ಮುಸ್ಸಂಜೆ ಮಾತು’ ಆರ್.ಕೆ. ಪ್ರಸಾದ್ ಶೆಣೈ ಅವರ ‘ನೇರಳೆ ಐಸ್‌ಕ್ರೀಂ’ ಪುಸ್ತಕಗಳ ಬಿಡುಗಡೆಯಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.