ಬೆಂಗಳೂರು: ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಮಾಣ ಹಂತದ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು ಮಗು ಮೃತಪಟ್ಟಿದೆ.
ಸುಹಾಸ್ ಗೌಡ(5) ಮೃತಪಟ್ಟ ಮಗು. ಮಗುವಿನ ತಾಯಿ ನೀಡಿರುವ ದೂರು ಆಧರಿಸಿ, ಹಾಲಿನ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸೊಣ್ಣಪ್ಪ ಹಾಗೂ ಕಾರ್ಯದರ್ಶಿ ಸುನಿಲ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಕನ್ನಮಂಗಲದ ನಿವಾಸಿಗಳಾದ ಶ್ರೀಕನ್ಯಾ–ಮುನಿರಾಜು ದಂಪತಿ ಪುತ್ರ ಸುಹಾಸ್. ಕನ್ನಮಂಗಲ ಅಪಾರ್ಟ್‌ಮೆಂಟ್‌ಗೆ ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಮಗು ಮನೆಯ ಎದುರು ಆಟವಾಡುತ್ತಿತ್ತು. ಮಳೆ ಬರುತ್ತಿದ್ದ ಕಾರಣಕ್ಕೆ ಮನೆ ಎದುರೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಳಕ್ಕೆ ಸ್ನೇಹಿತರ ಜತೆಗೆ ಸುಹಾಸ್ ತೆರಳಿದ್ದ. ಆ ಸಂದರ್ಭದಲ್ಲಿ ಮಗು ಆಯತಪ್ಪಿ ಗುಂಡಿಗೆ ಬಿದ್ದು ಮಗು ಮೃತಪಟ್ಟಿದೆ’ ಎಂದು ಮೂಲಗಳು ತಿಳಿಸಿವೆ.
‘ಲಿಫ್ಟ್ ಅಳವಡಿಕೆಗೆ 5 ಅಡಿ ಉದ್ದ ಹಾಗೂ ಅಷ್ಟೇ ಅಗಲದ ಗುಂಡಿ ತೆಗೆಯಲಾಗಿತ್ತು. ಮಳೆಯಿಂದ ಗುಂಡಿಯಲ್ಲಿ ನೀರು ತುಂಬಿತ್ತು. ಸುತ್ತಲೂ ಯಾವುದೇ ಸುರಕ್ಷತಾ ಕ್ರಮ ಅಳವಡಿಕೆ ಮಾಡಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.
ಸ್ಥಳೀಯರ ಪ್ರತಿಭಟನೆ: ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದರಿಂದ ದುರಂತ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.