ADVERTISEMENT

ವರ್ಣ ಹಿತ ಕಾಪಾಡುವ ಗುರುಕುಲ ಪದ್ಧತಿ ಬೇಕಾಗಿಲ್ಲ: ಎಸ್‌.ಜಿ. ಸಿದ್ದರಾಮಯ್ಯ

ಬಿ.ಆರ್‌. ರಾಮಚಂದೇಗೌಡ ಸಂಸ್ಮರಣೆಯಲ್ಲಿ ಎಸ್‌.ಜಿ. ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 14:24 IST
Last Updated 30 ಜುಲೈ 2025, 14:24 IST
ಕೃಷಿ ತಜ್ಞ ಎನ್.ಸಿ ಪಟೇಲ್ ಅವರಿಗೆ ಬಿ.ಆರ್. ರಾಮಚಂದ್ರೇಗೌಡ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು
-ಪ್ರಜಾವಾಣಿ ಚಿತ್ರ
ಕೃಷಿ ತಜ್ಞ ಎನ್.ಸಿ ಪಟೇಲ್ ಅವರಿಗೆ ಬಿ.ಆರ್. ರಾಮಚಂದ್ರೇಗೌಡ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತದಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಬದಲು ಅಲ್ಲಿ ಯಾರಿಗೆ ಶಿಕ್ಷಣ ಸಿಗುತ್ತಿತ್ತು ಎಂಬುದನ್ನು ನೋಡಬೇಕು. ವರ್ಣ ಹಿತ ಕಾಪಾಡುವ ಗುರುಕುಲ ಪದ್ಧತಿಯನ್ನು ತಿರಸ್ಕರಿಸಬೇಕು. ಎಲ್ಲರನ್ನು ಒಳಗೊಳ್ಳುವ ಮಾನವೀಯ, ಪ್ರಜಾಪ್ರಭುತ್ವ ಮಾದರಿಯ ಶಿಕ್ಷಣವೇ ಅಗತ್ಯವಾದುದು ಎಂದು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ನಡೆದ ಗಾಂಧಿ ತತ್ವ ಪ್ರಣೀತ ಕಾರ್ಯಕ್ರಮ, ಬಿ.ಆರ್‌. ರಾಮಚಂದ್ರೇಗೌಡ ಸಂಸ್ಮರಣೆ ಮತ್ತು ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ಗುರುಕುಲ ಶಿಕ್ಷಣ ವ್ಯವಸ್ಥೆಯು ಒಂದು ವರ್ಣಕ್ಕೆ ಸೀಮಿತವಾಗಿತ್ತು. ನಾವೆಲ್ಲ ಹೊರಗಿನವರು. ಹಾಗಾಗಿ ಸ್ವಾತಂತ್ರ್ಯ ಸಿಗುವ ಹೊತ್ತಿಗೆ ಭಾರತದಲ್ಲಿ ವಿದ್ಯಾವಂತರ ಪ್ರಮಾಣ ಶೇ 14ರಷ್ಟು ಮಾತ್ರ ಇತ್ತು. ಎಲ್ಲರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜವಾಹರಲಾಲ್‌ ನೆಹರೂ ಜಾರಿಗೆ ತಂದಿದ್ದರಿಂದ ಈಗ ಶೇ 80ರಷ್ಟು ದಾಟಲು ಸಾಧ್ಯವಾಗಿದೆ ಎಂದು ವಿವರಿಸಿದರು.

ADVERTISEMENT

ಭಾರತವೂ ಸೇರಿದಂತೆ ಜಗತ್ತಿನಲ್ಲಿ ಅಸಹನೆ ಮತ್ತು ದ್ವೇಷ ಹೆಚ್ಚಾಗಿದೆ. ಹಿಂಸೆ, ಕ್ರೌರ್ಯಗಳಿಗೆ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಯುದ್ಧವಲ್ಲ ಅಹಿಂಸೆ, ಶಾಂತಿ ಮುಖ್ಯ ಎಂದು ಪ್ರತಿಪಾದಿಸಿದ ಗಾಂಧೀಜಿ ಇಂಥ ಸಮಯದಲ್ಲಿ ಪ್ರಸ್ತುತರಾಗುತ್ತಾರೆ. ನಮ್ಮ ಪೀಳಿಗೆಗೆ ಗಾಂಧಿ ಅರ್ಥವಾಗಿದ್ದರು. ಆದರೆ, ಈಗಿನ ಯುವಪೀಳಿಗೆಗೆ ಗಾಂಧಿಗಿಂತ ಗೋಡ್ಸೆಯೇ ಮುಖ್ಯವಾಗಿರುವುದು ‍ವಿಪರ್ಯಾಸ. ಗಾಂಧೀಜಿಯನ್ನು ಯುವಪೀಳಿಗೆಗೆ ತಲುಪಿಸದೇ ಇರುವುದು ಪ್ರಜಾಪ್ರಭುತ್ವದ ವೈಫಲ್ಯ ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗೇಗೌಡ ಮಾತನಾಡಿ, ‘ರಾಮಚಂದ್ರೇಗೌಡರು ನಮ್ಮ ಗುರುಗಳು. ಅವರಿಗೆ ಕನ್ನಡದ ಬಗ್ಗೆ ಹೆಚ್ಚು ಪ್ರೀತಿ ಮತ್ತು ವಿದ್ವತ್ತು ಇತ್ತು’ ಎಂದು ನೆನಪು ಮಾಡಿಕೊಂಡರು.

‘ಗಾಂಧೀಜಿಯನ್ನು ಅಲ್ಲಗಳೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು, ಜೈಲಿಗೆ ಹೋದವರು ಅಪ್ರಸ್ತುತರಾಗುತ್ತಿದ್ದಾರೆ. ಹೋರಾಟ ಮಾಡದವರೇ ಇಂದು ದೇಶಪ್ರೇಮಿಗಳಾಗುತ್ತಿದ್ದಾರೆ. ನಾವು ಗಟ್ಟಿ ಧ್ವನಿಯಲ್ಲಿ ಇದರ ವಿರುದ್ಧ ಧ್ವನಿ ಎತ್ತಿ ಸತ್ಯ ತಿಳಿಸದೇ ಹೋದರೆ 50 ವರ್ಷಗಳಲ್ಲಿ ಗಾಂಧೀಜಿ ಮರೆತುಹೋಗಲಿದ್ದಾರೆ. ನೋಟುಗಳಲ್ಲಿರುವ ಅವರ ಚಿತ್ರವೂ ಮಾಯವಾಗಿ ಬೇರೆಯವರ ಚಿತ್ರ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ತಜ್ಞ ಎನ್‌.ಸಿ. ಪಟೇಲ್‌ ಅವರಿಗೆ ಬಿ.ಆರ್‌. ರಾಮಚಂದ್ರೇಗೌಡ ಸಮಾಜಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಕಲಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹಸನ್‌ಖಾನ್‌ ಕೆ. ಕುಲಕರ್ಣಿ, ರಾಮಚಂದ್ರೇಗೌಡ ಟ್ರಸ್ಟ್‌ನ ಟ್ರಸ್ಟಿಗಳಾದ ಹೊನ್ನಮ್ಮ, ಬಿ.ಆರ್‌. ಮಮತಾ, ಗಾಂಧಿಭವನ ಕೋಶಾಧ್ಯಕ್ಷ ಎಚ್.ಬಿ. ದಿನೇಶ್‌, ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ನಾಗೇಶ್‌ ಜಿ. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.