ಸಮ್ಮೇಳನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಭವನದ ಶಿಲಾನ್ಯಾಸವನ್ನು ವಿಧುಶೇಖರ ಭಾರತೀ ಸ್ವಾಮೀಜಿ ನೆರವೇರಿಸಿದರು. ಅಶೋಕ ಹಾರನಹಳ್ಳಿ, ಅದ್ವೈತಾನಂದ ಭಾರತೀ ಸ್ವಾಮೀಜಿ, ಪುರುಷೋತ್ತಮ ಭಾರತೀ ಸ್ವಾಮೀಜಿ, ಮಾಧವಾನಂದ ಭಾರತೀ ಸ್ವಾಮೀಜಿ ಮತ್ತು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ವಂಶವೃದ್ಧಿಗೆ ಸಂತಾನ ಅತ್ಯವಶ್ಯಕ. ಆದರೆ, ಸಂಸ್ಕಾರವಿಲ್ಲದ ಸಂತಾನ ಪ್ರಯೋಜನಕ್ಕೆ ಬರುವುದಿಲ್ಲ. ಇರುವಂತಹ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸವಾಗಬೇಕು’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಪ್ರತಿಪಾದಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಸುವರ್ಣ ಮಹೋತ್ಸವ ನಿಮಿತ್ತ ಇಲ್ಲಿ ಏರ್ಪಡಿಸಿರುವ ಎರಡು ದಿನದ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಶನಿವಾರ ಚಾಲನೆ ದೊರೆಯಿತು.
ಮಹಾಸಭಾದ ಸುವರ್ಣ ಭವನದ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದ ವಿಧುಶೇಖರ ಭಾರತೀ ಸ್ವಾಮೀಜಿ, ‘ಇತ್ತೀಚೆಗೆ ನಮ್ಮ ಕ್ಷೇತ್ರಕ್ಕೆ ಬಂದವರೊಬ್ಬರು ಎಲ್ಲರೂ ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಲು ಅಪ್ಪಣೆ ಮಾಡಬೇಕೆಂದು ಕೇಳಿಕೊಂಡಿದ್ದರು. ಸಂತಾನ ಮುಖ್ಯ. ಹಾಗಂತ ತುಂಬಾ ಮಕ್ಕಳಿದ್ದು, ಅವರಿಗೆ ಸೂಕ್ತ ಸಂಸ್ಕಾರ ಇರದಿದ್ದರೆ ನಿಷ್ಪ್ರಯೋಜಕರಾಗುತ್ತಾರೆ. ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡಿ, ಧರ್ಮ ಮಾರ್ಗಗಳಲ್ಲಿ ಸಾಗುವಂತೆ ಮಾರ್ಗದರ್ಶನ ಮಾಡಬೇಕು. ಗಂಡು ಮಕ್ಕಳಿಗೆ ಸಕಾಲದಲ್ಲಿ ಉಪನಯನ ಮಾಡುವಂತೆ, ಹೆಣ್ಣು ಮಕ್ಕಳಿಗೂ ಜಪ ಮಂತ್ರಗಳ ಸಂಸ್ಕಾರ ಒದಗಿಸಬೇಕು’ ಎಂದರು.
‘ವಿವಾಹಕ್ಕೆ ಶಾಸ್ತ್ರೀಯವಾದ ಸಂಸ್ಕಾರವಾಗಿದೆ. ಇದು ಕಂಪನಿಗಳು ಪರಸ್ಪರ ಮಾಡಿಕೊಳ್ಳುವ ಒಪ್ಪಂದಗಳ ರೀತಿಯಲ್ಲ. ಇದನ್ನು ಅರ್ಥ ಮಾಡಿಕೊಂಡು ಸಾಗಬೇಕು’ ಎಂದು ಹೇಳಿದರು.
ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ‘ಬ್ರಾಹ್ಮಣ ಸಮುದಾಯ ಹಿಂದೆಂದಿಗಿಂತ ಹೆಚ್ಚಿನ ಸಮಸ್ಯೆ ಎದುರಿಸುತ್ತಿದೆ. ಅವುಗಳಲ್ಲಿ ವೈವಾಹಿಕ ಸಮಸ್ಯೆ ಮುಖ್ಯವಾದದ್ದಾಗಿದೆ. ವಿವಾಹ ನಿಶ್ಚಯವಾಗುವುದೇ ಕಷ್ಟ ಎನ್ನುವ ಸ್ಥಿತಿಯಿರುವಾಗ, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಇದು ಸಂಸ್ಕಾರವಂತ, ಬುದ್ಧಿವಂತ ಸಮುದಾಯದ ಲಕ್ಷಣವೆ? ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳಲು ಹೆಣ್ಣು ಮಕ್ಕಳಿಗೆ ದಶಹೋಮ, ಕನ್ಯಾ ಸಂಸ್ಕಾರ, ಮಾರ್ಗದರ್ಶಕ ಶಿಬಿರಗಳು ಅಗತ್ಯ. ಈ ಮೂಲಕ ವಿಚ್ಛೇದನ ತಡೆಯುವ ಕೆಲಸ ವ್ಯಾಪಕವಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ‘ಸನಾತನ ಧರ್ಮಕ್ಕೆ ಸಂಕಷ್ಟಗಳು ಎದುರಾಗಿವೆ. ಧರ್ಮದ ಒಳಗಿನ ಕೆಲ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಬೇಕಿದೆ. ಧರ್ಮಕ್ಕೆ ಶಕ್ತಿ ನೀಡಿದರೆ, ಬೇರೆ ಮತಗಳ ಪ್ರಭಾವ ವ್ಯಾಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬ್ರಾಹ್ಮಣರು ಉಪ ಪಂಗಡಗಳಲ್ಲಿ ಗುರುತಿಸಿಕೊಳ್ಳದೆ, ಒಗ್ಗಟ್ಟು ಪ್ರದರ್ಶಿಸಬೇಕು’ ಎಂದರು.
ಶೃಂಗೇರಿ ಶಿವಗಂಗಾ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ, ನೆಲೆಮಾವು ಮಠದ ಮಾಧವಾನಂದ ಭಾರತಿ ಸ್ವಾಮೀಜಿ, ಶೃಂಗೇರಿ ಮಠದ ಅದ್ವೈತಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಇವತ್ತಿನ ಸಮಾಜವು ಅಂಕ ಹಣ ಮತ್ತು ಸಾಮಾಜಿಕ ಜಾಲತಾಣ ಹಿಂದೆ ಓಡುತ್ತಿದೆ. ಓದಿನಲ್ಲಿ ಹೆಚ್ಚು ಅಂಕ ಗಳಿಸಿದವರು ಹಣಕ್ಕಾಗಿ ಧರ್ಮ ಬಿಟ್ಟು ಹೋಗುತ್ತಿದ್ದಾರೆಮಾಧವಾನಂದ ಭಾರತೀ ಸ್ವಾಮೀಜಿ ನೆಲೆಮಾವು ಮಠ
ವೇದ ಕೊಡುವ ಪರಿಪೂರ್ಣ ಜ್ಞಾನವನ್ನು ಬೇರೆ ಯಾವ ವಿದ್ಯೆಯೂ ನೀಡಲು ಸಾಧ್ಯವಿಲ್ಲ. ಬ್ರಾಹ್ಮಣನಾಗಿ ಹುಟ್ಟಿದ ಪ್ರತಿಯೊಬ್ಬರೂ ವೇದಾಧ್ಯಯನ ಮಾಡಬೇಕುಅದ್ವೈತಾನಂದ ಭಾರತೀ ಸ್ವಾಮೀಜಿ ಆವನಿ ಶೃಂಗೇರಿ ಮಠ
‘ಸಾಮಾಜಿಕ ವ್ಯವಸ್ಥೆ ಬದಲಾವಣೆಯಾದ ಈ ಸಂದರ್ಭದಲ್ಲಿ ಬ್ರಾಹ್ಮಣರು ಆಚರಣೆಗಳನ್ನು ಬಿಡದೆ ಇತಿಹಾಸ ಮರೆಯದೆ ಮುನ್ನಡೆಯಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ‘ಮೊಘಲರು ಸೇರಿ ಹೊರಗಿನ ಅನೇಕರು ನಮ್ಮ ಸಂಸ್ಕೃತಿ ಧಾರ್ಮಿಕ ಪರಂಪರೆ ಮೇಲೆ ಆಕ್ರಮಣ ಮಾಡಿದ್ದಾರೆ. ಈಗ ದೇಶದಲ್ಲಿಯೇ ಕೆಲವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಹೊರಟಿದ್ದಾರೆ. ದೇಶದ ಹಿತದೃಷ್ಟಿಯಿಂದ ಸಮಾಜವನ್ನು ಸಂಘಟಿಸುವ ಜತೆಗೆ ಇಡೀ ಹಿಂದೂ ಸಮಾಜವನ್ನು ಒಟ್ಟಿಗೆ ಕರೆದೊಯ್ಯಬೇಕಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.