ADVERTISEMENT

ಸುಂದರ ನಗರಕ್ಕೆ ಹಸಿರಿನ ಅಲಂಕಾರ

ಪ್ರವೀಣ ಕುಮಾರ್ ಪಿ.ವಿ.
Published 6 ಸೆಪ್ಟೆಂಬರ್ 2020, 20:06 IST
Last Updated 6 ಸೆಪ್ಟೆಂಬರ್ 2020, 20:06 IST
ಬೆಂಗಳೂರಿನ ರಸ್ತೆಯೊಂದರ ಚಿತ್ರ
ಬೆಂಗಳೂರಿನ ರಸ್ತೆಯೊಂದರ ಚಿತ್ರ    
""
""

ಬೆಂಗಳೂರು: ‘ಉದ್ಯಾನನಗರಿ’ ಎಂಬ ಕಿರೀಟ ಹೊತ್ತಿದ್ದ ರಾಜಧಾನಿಯ ಬಹುತೇಕ ರಸ್ತೆಗಳು ಇತ್ತೀಚಿನ ವರ್ಷಗಳಲ್ಲಿ ಹಸಿರಿನ ನಂಟನ್ನು ಕಳೆದುಕೊಂಡು ಕಳಾಹೀನವಾಗಿವೆ. ಪ್ರಮುಖ ರಸ್ತೆಗಳಲ್ಲಿನ ವಿಭಜಕಗಳು, ವೃತ್ತಗಳು, ಮೇಲ್ಸೇತುವೆ, ಕೆಳಸೇತುವೆಗಳಿಗೆ ‘ಹಸಿರಿನ ಅಲಂಕಾರ‘ ಮಾಡುವ ಮೂಲಕ ನಗರದ ಅಂದ ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ.

ವಾಹನ ದಟ್ಟಣೆಗೆ ಹೆಚ್ಚಿದಂತೆಯೇ ವಿಸ್ತರಣೆಗೊಂಡ ರಸ್ತೆಗಳು ಅಕ್ಕ ಪಕ್ಕದ ಮರ–ಗಿಡಗಳನ್ನು, ಚಿಕ್ಕ ಚಿಕ್ಕ ಉದ್ಯಾನಗಳನ್ನೆಲ್ಲ ಆಪೋಶನ ತೆಗೆದುಕೊಂಡಿವೆ. ವೈಟ್‌ಟಾಪಿಂಗ್‌, ಟೆಂಡರ್‌ ಶ್ಯೂರ್‌ ರಸ್ತೆ, ಕೆಳ ಸೇತುವೆ, ಮೇಲ್ಸೇತುವೆಗಳ ರೂಪದಲ್ಲಿ ತಲೆ ಎತ್ತಿದ ಕಾಂಕ್ರೀಟ್‌ ರಚನೆಗಳು ಆ ಪ್ರದೇಶದ ಒಟ್ಟು ಅಂದಕ್ಕೆ ಚ್ಯುತಿ ತಂದಿವೆ. ಬೋಳು ಬೋಳಾಗಿ ಕಾಣಿಸುತ್ತಿರುವ ಇಂತಹ ಪ್ರದೇಶಗಳಲ್ಲಿ ಆಲಂಕಾರಿಕ ಸಸ್ಯ ಗಳನ್ನು ಬೆಳೆಸುವ ಮೂಲಕ ನಗರದ ಪ್ರಮುಖ ಪ್ರದೇಶಗಳಿಗೆ ಹೊಸ ಕಳೆ ನೀಡಲು ಪಾಲಿಕೆ ಯೊಜನೆ ರೂಪಿಸಿದೆ. ಇದಕ್ಕಾಗಿ ₹ 40 ಕೋಟಿ ಕಾಯ್ದಿರಿಸಿದೆ.

‘ನಗರ ಒಪ್ಪ ಓರಣವಾಗಿದ್ದರೆ ಇಲ್ಲಿಗೆ ಬರುವ ಪ್ರವಾಸಿಗರು, ಹೂಡಿಕೆ ದಾರರಿಗೆ ಇಲ್ಲಿನ ಬಗ್ಗೆ ಸದಭಿಪ್ರಾಯ ಮೂಡುತ್ತದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಅನೇಕ ರಸ್ತೆಗಳು ಮೇಲ್ದರ್ಜೆಗೇರಿವೆ. ಇಂತಹ 58 ರಸ್ತೆಗಳು ಹಾಗೂ ಜಂಕ್ಷನ್‌ಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ಆಲಂಕಾರಿಕ ಸಸ್ಯಗಳನ್ನು ಬೆಳೆಸಲು, ಪಾದಚಾರಿ ಮಾರ್ಗಗಳನ್ನು ಒಪ್ಪ ಓರಣಗೊಳಿಸಲು, ಇಡೀ ಪ್ರದೇಶದ ಒಟ್ಟು ಸೌಂದರ್ಯ ಹೆಚ್ಚಿಸುವಂತಹ ಯೋಜನೆ ರೂಪಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ವಾಹನ ಸಂಚಾರವಿಲ್ಲದೇ ರಸ್ತೆಗಳು ಖಾಲಿ ಇದ್ದಾಗಲೇ ಅನೇಕ ಕಡೆ ಆಲಂಕಾರಿಕ ಸಸ್ಯಗಳನ್ನು ಬೆಳೆಸುವ ಕಾರ್ಯವನ್ನು ಬಿಬಿಎಂಪಿಯ ತೋಟಗಾರಿಕಾ ವಿಭಾಗವು ಆರಂಭಿಸಿತ್ತು. ಬಳ್ಳಾರಿ ರಸ್ತೆ, ಸಿ.ವಿ ರಾಮನ್‌ ರಸ್ತೆಯ ವಿಭಜಕಗಳಲ್ಲಿ ಕೆಲವು ಕಡೆ ಈಗಾಗಲೇ ಆಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ.

‘ವೈಟ್‌ಟಾಪಿಂಗ್‌ ಹಾಗೂ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಗೊಳ್ಳುವ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ವಿಭಜಕಗಳಲ್ಲಿ ಸಸಿಗಳನ್ನು ಬೆಳೆಸುವುದಕ್ಕೆಂದೇ ಜಾಗ ಮೀಸಲಿಡಲಾಗಿದೆ. ಪ್ರತಿಯೊಂದು ಪ್ರದೇಶಕ್ಕೂ ಪ್ರತ್ಯೇಕ ವಿನ್ಯಾಸ ರೂಪಿಸಿ, ಅದಕ್ಕನುಗುಣವಾಗಿ ಗಿಡ ಮರಗಳನ್ನು ಬೆಳೆಸಲು ಕಾರ್ಯಕ್ರಮ ರೂಪಿಸಿದ್ದೇವೆ. ರಸ್ತೆಯಲ್ಲಿ ವಾಹನ ದಟ್ಟಣೆ, ವಿಭಜಕಗಳು, ಕೆಳಸೇತುವೆಗಳ ವಿನ್ಯಾಸ ನೋಡಿಕೊಂಡು ಅಲ್ಲಿಗೆ ಹೊಂದಿಕೆಯಾಗುವ ಸಸ್ಯಗಳನ್ನು ಆಯ್ಕೆ ಮಾಡಿದ್ದೇವೆ’ ಎಂದು ಪಾಲಿಕೆಯ ತೋಟಗಾರಿಕಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ಕಾಮಗಾರಿ ಸಂಪೂರ್ಣಗೊಂಡಿರುವ ಕಡೆ ವಿಭಜಕಗಳನ್ನು ಹಾಗೂ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಕಡೆ ಹಾಗೂ ಮುಂಬರುವ ದಿನಗಳಲ್ಲಿ ಅಭಿವೃದ್ಧಿಪಡಿಸಲು ಗುರುತಿಸಿರುವ ರಸ್ತೆಗಳಲ್ಲಿ ಕಾಮಗಾರಿ ಸಂಪೂರ್ಣಗೊಂಡ ಬಳಿಕವೇ ಆಲಂಕಾರಿಕ ಸಸ್ಯಗಳನ್ನು ಬೆಳೆಸುತ್ತೇವೆ’ ಎಂದರು.

‘ನಿರ್ಮಿಸಿದರೆ ಸಾಲದು– ನಿರ್ವಹಣೆಯೂ ಮುಖ್ಯ’

ಬಿಬಿಎಂಪಿಯ ಬಹುತೇಕ ಯೋಜನೆಗಳಲ್ಲಿ ನಿರ್ಮಾಣಕ್ಕೆ ನೀಡಿದ ಆದ್ಯತೆಯನ್ನು ನಿರ್ವಹಣೆಗೆ ನೀಡುವುದಿಲ್ಲ. ಎಷ್ಟೇ ಸುಂದರವಾದ ವೃತ್ತಗಳನ್ನು, ಜಂಕ್ಷನ್‌ಗಳನ್ನು ರೂಪಿಸಿದರೂ, ಸರಿಯಾಗಿ ನಿರ್ವಹಿಸದಿದ್ದರೆ ಅವು ಒಂದೆರಡು ವರ್ಷಗಳಲ್ಲೇ ಸೊರಗುತ್ತವೆ.

ನಗರದ ಪ್ರಮುಖ ಸ್ಥಳಗಳಲ್ಲಿ ವೃತ್ತಗಳ ನಿರ್ವಹಣೆಯನ್ನು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿಭಾಯಿಸಲು ಕಾರ್ಪೊರೇಟ್‌ ಕಂಪನಿಗಳು ಮುಂದೆಬರುತ್ತವೆ. ಆದರೆ, ಈ ವಿಚಾರದಲ್ಲಿ ನಿರಂತರತೆ ಕಾಯ್ದುಕೊಳ್ಳಲು ಸರಿಯಾದ ವ್ಯವಸ್ಥೆಯನ್ನು ರೂಪಿಸುವಲ್ಲಿ ಬಿಬಿಎಂಪಿ ವಿಫಲವಾಗುತ್ತಲೇ ಬರುತ್ತದೆ. ಕ್ರಮೇಣ ಬಿಬಿಎಂಪಿ ಅಧಿಕಾರಿಗಳೂ ಈ ಬಗ್ಗೆ ನಿಗಾ ಇಡುವುದಿಲ್ಲ ಎಂಬುದು ಸಾಮಾನ್ಯವಾಗಿ ಕೇಳಿ ಬರುವ ದೂರು. ಈಗಾಗಲೇ ನಿರ್ಮಿಸಲಾದ ಪಾದಚಾರಿ ಸುರಂಗಗಳು, ಸ್ಕೈವಾಕ್‌ಗಳ ನಿರ್ವಹಣೆ ವಹಿಸಿಕೊಂಡ ಕಂಪನಿಗಳು ಬಳಿಕ ಅವುಗಳನ್ನು ಕಡೆಗಣಿಸಿರುವ ಉದಾಹರಣೆಗಳು ನಮ್ಮ ಮುಂದಿವೆ.

‘ಯೋಜನೆ ರೂಪಿಸುವಾಗಲೇ ನಾವು ಒಂದು ವರ್ಷದ ನಿರ್ವಹಣೆಯ ವೆಚ್ಚವನ್ನೂ ಸೇರಿಸಿಕೊಂಡಿದ್ದೇವೆ. ಒಂದು ವರ್ಷದ ಬಳಿಕ ಇವುಗಳ ನಿರ್ವಹಣೆಗೆ ಬಜೆಟ್‌ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ ಅಥವಾ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ಮೊರೆ ಹೋಗಬೇಕಾಗುತ್ತದೆ’ ಎಂದು ಬಿಬಿಎಂಪಿ ತೋಟಗಾರಿಕಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಚಂದದ ತಾಣಗಳು ನಗರದ ಹೆಮ್ಮೆ’

ರಸ್ತೆಗಳು ವೃತ್ತಗಳು ಸುಂದರವಾಗಿರುವುದು ನಗರದ ಜನತೆಗೂ ಹೆಮ್ಮೆಯ ವಿಷಯ. ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಗರ. ಇದು ಹೂಡಿಕೆದಾರರ ಆಕರ್ಷಣೀಯ ಕೇಂದ್ರ. ಇಲ್ಲಿಗೆ ದೇಶವಿದೇಶಗಳಿಂದ ಪ್ರವಾಸಿಗರು, ಉದ್ಯಮಿಗಳು ಭೇಟಿ ನೀಡುತ್ತಾರೆ. ನಗರವನ್ನು ಪ್ರವೇಶಿಸುತ್ತಲೇ ಇಲ್ಲಿನ ಪರಿಸರದ ಬಗ್ಗೆ ಮೊದಲ ನೋಟದಲ್ಲೇ ಒಳ್ಳೆಯ ಅಭಿಪ್ರಾಯ ಮೂಡುವಂತೆ ರಸ್ತೆಗಳನ್ನು ಹಾಗೂ ಜಂಕ್ಷನ್‌ಗಳನ್ನು ವಿನ್ಯಾಸಗೊಳಿಸುವುದರಿಂದ ನಗರಕ್ಕೂ ತುಂಬಾ ಅನುಕೂಲಗಳಿವೆ.

ರಸ್ತೆ ಎಂದರೆ ಕೇವಲ ವಾಹನ ಸಾಗುವ ಪಥ ಮಾತ್ರವಲ್ಲ. ಪಕ್ಕದ ಪಾದಚಾರಿ ಮಾರ್ಗ, ಮೀಡಿಯನ್‌, ಮಳೆನೀರು ಚರಂಡಿ ಎಲ್ಲವನ್ನೂ ಒಳಗೊಂಡ ‘ಪಾಥ್‌ ಆಫ್‌ ವೇ’ ಅದಕ್ಕೆ ಸಂಬಂಧಿಸಿದವೇ ಆಗಿವೆ. ನಮ್ಮಲ್ಲಿ ಯೋಜನೆಗಳನ್ನು ಚೆನ್ನಾಗಿಯೇ ರೂಪಿಸಲಾಗುತ್ತದೆ. ಆದರೆ, ಅದನ್ನು ಪೂರ್ಣಗೊಳಿಸುವುದೇ ಇಲ್ಲ. ಶೇ 85ರಷ್ಟು ಕಾಮಗಾರಿ ನಡೆಸಿ ಉಳಿದುದ್ದನ್ನು ಬಾಕಿ ಇಡುವ ಪರಿಪಾಠ ಹೆಚ್ಚು. ಅರೆಬರೆ ಕಾಮಗಾರಿಗಳಿಂದ ನಗರದ ಸೌಂದರ್ಯಕ್ಕೆ ಪೆಟ್ಟು ಬೀಳುತ್ತದೆ. ಅಭಿವೃದ್ಧಿ ಕಾಮಗಾರಿಗಳ ವಿಸ್ತೃತ ವರದಿ ಸಿದ್ಧಪಡಿಸುವಾಗ ವಿನ್ಯಾಸಕ್ಕೆ ಸಂಬಂಧಿಸಿದಂತೆ ತಜ್ಞರಿಂದ ಸಲಹೆ ಪಡೆದು ನಗರದ ಸೌಂದರ್ಯಕ್ಕೆ ಸಂಬಂಧಿಸಿದ ಅಂಶಕ್ಕೂ ಗಮನವಹಿಸಬೇಕು

-ನರೇಶ್‌ ನರಸಿಂಹನ್‌, ವಿನ್ಯಾಸ ತಜ್ಞ

***

ಸದ್ಯ ಅಂದಗೊಳ್ಳುತ್ತಿರುವ ರಸ್ತೆಗಳು, ವೃತ್ತಗಳು

l ಹೆಬ್ಬಾಳ ಮೇಲ್ಸೇತುವೆಯಿಂದ ಲುಂಬಿನಿ ಗಾರ್ಡನ್‌ವರೆಗೆ ಹೊರವರ್ತುಲ ರಸ್ತೆ

l ಬಳ್ಳಾರಿ ರಸ್ತೆಯ ವಿಭಜಕ (ಪಶುವೈದ್ಯಕೀಯ ಕಾಲೇಜು ಹಾಗೂ ಹೆಬ್ಬಾಳ ಮೇಲ್ಸೇತುವೆ ಬಳಿ)

l ಮೇಖ್ರಿ ವೃತ್ತದ ಕೆಳಸೇತುವೆಯ ಬಳಿಯ ರಸ್ತೆ ವಿಭಜಕ

l ಐಐಎಸ್ಸಿ ಬಳಿ ಸಿಎನ್‌ಆರ್‌ ವೃತ್ತದ ಕೆಳಸೇತುವೆಯ ರಸ್ತೆ ವಿಭಜಕ (ಮಾರಮ್ಮ ವೃತ್ತದವರೆಗೆ)

l ಕೆಂಪೇಗೌಡ ಟವರ್‌ ಉದ್ಯಾನದ ಅಭಿವೃದ್ಧಿ

l ಸ್ಯಾಂಕಿ ಕೆರೆಯ ಉದ್ಯಾನ

l ಸಿ.ವಿ.ರಾಮನ್‌ ರಸ್ತೆಯ ವಿಭಜಕ, ಮೇಖ್ರಿ ವೃತ್ತವನ್ನು ಒಳಗೊಂಡು

l ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಬಳಿ ರಸ್ತೆ ವಿಭಜಕ

l ಯಶವಂತಪುರ ಮೇಲ್ಸೇತುವೆಯ ಉದ್ಯಾನ

l ಹೊರವರ್ತುಲ ರಸ್ತೆಯಲ್ಲಿ ಕೆ.ಆರ್‌.ಪುರ ಮೇಲ್ಸೇತುವೆ

l ಹೊರವರ್ತುಲ ರಸ್ತೆಯಲ್ಲಿ ಕೆ.ಆರ್‌.ಪುರ ಮೇಲ್ಸೇತುವೆಯಿಂದ ಮಾರತಹಳ್ಳಿವರೆಗಿನ ರಸ್ತೆ

l ಬಳ್ಳಾರಿ ರಸ್ತೆಯಲ್ಲಿ ಕಾವೇರಿ ಐಲ್ಯಾಂಡ್‌ ಮತ್ತು ಗುಟ್ಟಹಳ್ಳಿ ಐಲ್ಯಾಂಡ್‌

l ಬಸವೇಶ್ವರ ವೃತ್ತದ ಐಲ್ಯಾಂಡ್‌ (ಎಜಿಎಸ್‌ ಕಚೇರಿಯ ಬಳಿ)

l ಕೆ.ಆರ್‌.ವೃತ್ತ

l ಮೆಜೆಸ್ಟಿಕ್‌ ಬಳಿ ಟೆಂಡರ್‌ಶ್ಯೂರ್‌ ಯೋಜನೆಯಡಿ ನಿರ್ಮಿಸಲಾದ ರಸ್ತೆಗಳು, ವಿಭಜಕಗಳು ಮತ್ತು ವೃತ್ತಗಳು

l ರೇಸ್‌ಕೋರ್ಸ್‌ ರಸ್ತೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಕಚೇರಿ ಬಳಿಯ ವೃತ್ತ ಮತ್ತು ಆರಾಧ್ಯ ವೃತ್ತ

ನಿರ್ಮಿಸಿದರೆ ಸಾಲದು– ನಿರ್ವಹಣೆಯೂ ಮುಖ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.