ಬೆಂಗಳೂರು: ಕಸ್ತೂರಬಾ ರಸ್ತೆಯಲ್ಲಿ ಸಂಚರಿಸುವಾಗ ಸರ್ಕಾರಿ ವಸ್ತು ಸಂಗ್ರಹಾಲಯದ ಬಳಿ ಕಾಣಿಸುವ ಕಟ್ಟಡವೊಂದು ನಮ್ಮನ್ನು ಆಕರ್ಷಿಸದೆ ಇರದು. ಸುತ್ತಲೂ ಕೊಳದಿಂದ ಆವರಿಸಿಕೊಂಡಿರುವ, ಕಾರ್ಪೊರೇಟ್ ಕಂಪನಿಯ ಕಟ್ಟಡದಂತೆ ಭಾಸವಾಗುವ ಈ ಕಟ್ಟಡ ಸರ್ಕಾರಿ ಕಲಾ ಗ್ಯಾಲರಿ ಎಂದರೆ ನಂಬುವುದು ಕಷ್ಟಸಾಧ್ಯ.
ಹೌದು, ಮೂಲಸೌಕರ್ಯ ಕೊರತೆ ಎದುರಿಸುತ್ತಿದ್ದ ವೆಂಕಟಪ್ಪ ಚಿತ್ರಶಾಲೆ (ಆರ್ಟ್ ಗ್ಯಾಲರಿ) ಈಗ ಹೈಟೆಕ್ ಸ್ಪರ್ಶ ಪಡೆದಿದೆ. ಹೊರಾಂಗಣ ವಿನ್ಯಾಸ ಮಾತ್ರವಲ್ಲದೆ, ಒಳಗಡೆಯೂ ಈ ಚಿತ್ರಶಾಲೆ ಆಧುನಿಕತೆಗೆ ತೆರೆದುಕೊಂಡಿದೆ. ಅತ್ಯಾಧುನಿಕ ಬೆಳಕಿನ ವಿನ್ಯಾಸ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ, ಸುಸಜ್ಜಿತ ಸಭಾಂಗಣ, ಚರ್ಚಾ ಕೊಠಡಿ ಸೇರಿ ಹಲವು ಸೌಲಭ್ಯಗಳನ್ನು ಇಲ್ಲಿ ಹೊಸದಾಗಿ ಒದಗಿಸಲಾಗಿದೆ. ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ನವೀಕರಣ ಮಾಡಿರುವುದು ವಿಶೇಷ.
‘ಸ್ಮಾರಕ ದತ್ತು’ ಯೋಜನೆಯಡಿ ಈ ಕಟ್ಟಡದ ನವೀಕರಣಕ್ಕೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಜತೆಗೆ ಬ್ರಿಗೇಡ್ ಫೌಂಡೇಷನ್ ಒಡಂಬಡಿಕೆ ಮಾಡಿಕೊಂಡಿತ್ತು. ಈ ನವೀಕರಣ ಕಾಮಗಾರಿಗೆ 2024ರ ಫೆಬ್ರುವರಿಯಲ್ಲಿ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ನವೀಕರಣ ವೆಚ್ಚ ₹5 ಕೋಟಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಈಗ ಆ ಮೊತ್ತವು ದುಪ್ಪಟ್ಟಾಗಿದ್ದು, ಸಂಪೂರ್ಣ ವೆಚ್ಚವನ್ನು ಫೌಂಡೇಷನ್ ತನ್ನ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿ ಭರಿಸಿದೆ. ಒಂದೂವರೆ ವರ್ಷದೊಳಗೆ ಚಿತ್ರಶಾಲೆಯ ನವೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಪುನರಾರಂಭಕ್ಕೆ ಸಜ್ಜುಗೊಳ್ಳುತ್ತಿದೆ.
ಆಧುನಿಕ ಬೆಳಕಿನ ವಿನ್ಯಾಸ: ಚಿತ್ರಶಾಲೆಯ ಚಾವಣಿ, ಗೋಡೆಗಳಿಗೂ ಹೊಸ ವಿನ್ಯಾಸದ ಸ್ಪರ್ಶ ನೀಡಲಾಗಿದೆ. ಬೆಳಕು ತಜ್ಞರ ಸಲಹೆಯೊಂದಿಗೆ ಕಲಾಕೃತಿ ಪ್ರದರ್ಶನಕ್ಕೆ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸದಾಗಿ ಗ್ಯಾಲರಿಗಳನ್ನೂ ಸೇರ್ಪಡೆ ಮಾಡಲಾಗಿದೆ. ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಜತೆಗೆ ಕಲೆಗೆ ಸಂಬಂಧಿಸಿದ ಚರ್ಚಾಗೋಷ್ಠಿಗೂ ಸ್ಥಳವನ್ನು ಮೀಸಲಿಡಲಾಗಿದೆ. ಇದಕ್ಕಾಗಿ ಗ್ಯಾಲರಿಯ ಹಿಂಭಾಗ ತೆರೆದ ಸಭಾಂಗಣ ನಿರ್ಮಿಸಲಾಗಿದೆ. ‘ಕೆಫಿಟೇರಿಯಾ’ ಕೂಡ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ಕಲಾವಿದರಿಗೆ ಕಲಾಕೃತಿಗಳ ಸಂಗ್ರಹಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲಾಗಿದೆ. ಟಿಕೆಟ್ ಕೌಂಟರ್ ಕೂಡ ನಿರ್ಮಾಣ ಮಾಡಲಾಗಿದ್ದು, ಗ್ಯಾಲರಿ ಪ್ರವೇಶ ಹಾಗೂ ಪ್ರದರ್ಶನಕ್ಕೆ ಪ್ರವೇಶ ಶುಲ್ಕ ಗೊತ್ತುಪಡಿಸುವ ಪ್ರಸ್ತಾವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಮುಂದಿದೆ. ಇದಕ್ಕೆ ಕಲಾವಿದರನ್ನೂ ಒಳಗೊಂಡ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಶಿಫಾರಸಿನ ಆಧಾರದಲ್ಲಿ ದರ ನಿಗದಿಮಾಡಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಚಿತ್ರಶಾಲೆಯ ಕಟ್ಟಡದ ಹೊರಾಂಗಣದಲ್ಲಿಯೂ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸದಾಗಿ ನೆಲಹಾಸು ಅಳವಡಿಸಲಾಗಿದ್ದು, ಹೊರಗಡೆಯೂ ಕಲಾ ಶಿಬಿರಗಳನ್ನು ನಡೆಸಬಹುದಾಗಿದೆ.
ನವೀಕೃತ ಕಟ್ಟಡದಲ್ಲಿ ಏನೆಲ್ಲ ಇವೆ?
ಈ ಮೊದಲು ಚಿತ್ರಶಾಲೆಯ ನೆಲ ಮಹಡಿಯಲ್ಲಿ ಕಲಾ ಪ್ರದರ್ಶನಕ್ಕೆ ವಿಶಾಲವಾದ ಒಂದೇ ಕೊಠಡಿಯಿತ್ತು. ಈಗ ಆ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಬೃಹತ್ ಮಧ್ಯಮ ಹಾಗೂ ಸಣ್ಣ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ಇದ್ದ ಸಭಾಂಗಣವನ್ನೂ ನವೀಕರಣ ಮಾಡಲಾಗಿದ್ದು ಇದು ಸುಮಾರು 100 ಆಸನಗಳನ್ನು ಒಳಗೊಂಡಿದೆ. ಈ ಸಭಾಂಗಣದಲ್ಲಿ ‘ಪ್ರೊಜೆಕ್ಟರ್’ ಸೇರಿ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಚೇರಿ ಕೊಠಡಿಯನ್ನು ಕಲಾಕೃತಿಗಳ ಮಾರಾಟ ಮಳಿಗೆಯಾಗಿ ಮಾರ್ಪಾಡು ಮಾಡಲಾಗಿದೆ. ಮೊದಲ ಮಹಡಿಯ ಗ್ಯಾಲರಿಯಲ್ಲಿ ವೆಂಕಟಪ್ಪ ಅವರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಅವರು ಬಳಸುತ್ತಿದ್ದ ವೀಣೆಗಳನ್ನು ನೇತಾಡುವ ಗಾಜಿನ ಪೆಟ್ಟಿಗೆಯಲ್ಲಿ ಪ್ರದರ್ಶಿಸಲಾಗಿದೆ. ಅವರು ಕಲಾಕೃತಿ ರಚನೆಗೆ ಬಳಸುತ್ತಿದ್ದ ಪರಿಕರಗಳು ಅವರಿಗೆ ಬಂದ ಪುರಸ್ಕಾರಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ. ಎರಡನೇ ಮಹಡಿಯಲ್ಲಿ ಹೆಬ್ಬಾರ್ ಗ್ಯಾಲರಿಯಿದ್ದು ರಾಜಾರಾಂ ಅವರಂತಹ ಹೆಸರಾಂತ ಕಲಾವಿದರ ಕಲಾಕೃತಿಗಳು ಪ್ರದರ್ಶನಕ್ಕಿವೆ. ತಾರಸಿಯಲ್ಲಿ ಮಕ್ಕಳಿಗೆ ಕಾರ್ಯಾಗಾರದಂತಹ ಚಟುವಟಿಕೆಗಳನ್ನು ನಡೆಸಲೂ ಯೋಜನೆ ರೂಪಿಸಲಾಗಿದೆ.
1975ರಲ್ಲಿ ಕಾರ್ಯಾರಂಭ
ಕಲೆಗಾಗಿಯೇ ಇಡೀ ಬದುಕನ್ನು ಸವೆಸಿ ಅದ್ಭುತ ಪ್ರತಿಭೆಯಿಂದ ಕರ್ನಾಟಕಕ್ಕೆ ಕೀರ್ತಿ ತಂದ ಕಲಾ ತಪಸ್ವಿ ವೆಂಕಟಪ್ಪ. ಅವರ ಹೆಸರಿನಲ್ಲಿ ಈ ಚಿತ್ರಶಾಲೆ ನಿರ್ಮಿಸಲಾಗಿದೆ. ಕಬ್ಬನ್ ಉದ್ಯಾನದ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಈ ಚಿತ್ರಶಾಲೆಯ ಶಂಕುಸ್ಥಾಪನೆ 1967ರಲ್ಲಿ ನೆರವೇರಿತ್ತು. 1975ರಲ್ಲಿ ಉದ್ಘಾಟನೆಗೊಂಡು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಯಿತು. ವೆಂಕಟಪ್ಪ ಅವರು ತಾವೇ ತಯಾರಿಸಿ ನುಡಿಸುತ್ತಿದ್ದ ಶ್ರುತಿ ವೀಣೆ ರಾಜ ವೀಣೆ ತಂಜಾವೂರು ವೀಣೆ ಲಂಗರ್ ವೀಣೆ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಲ್ಲಿ ತಯಾರಿಸಿದ ಸುಂದರ ಉಬ್ಬು ಶಿಲ್ಪಗಳು ರವೀಂದ್ರನಾಥ ಟ್ಯಾಗೋರ್ ಅವರ ಎದೆ ಮಟ್ಟದ ಪ್ರತಿಮೆ ನಿಸರ್ಗ ವರ್ಣ ಚಿತ್ರಗಳು ವೆಂಕಟಪ್ಪ ಅವರಿಗೆ ನೀಡಿದ್ದ ಪುರಸ್ಕಾರಗಳು ಪಾರಿತೋಷಕಗಳು ಅವರು ಉಪಯೋಗಿಸುತ್ತಿದ್ದ ವಿದೇಶಿ ಕಲಾ ಸಾಮಗ್ರಿ ಹಾಗೂ ವಿವಿಧ ಕಲಾಕೃತಿಗಳು ಈ ಚಿತ್ರಶಾಲೆಯಲ್ಲಿವೆ.
Cut-off box - ‘ಇಲಾಖೆಯಿಂದಲೇ ನಿರ್ವಹಣೆ’ ‘ವೆಂಕಟಪ್ಪ ಚಿತ್ರಶಾಲೆ ನವೀಕರಣ ಕಾಮಗಾರಿ ಪೂರ್ಣಗೊಂಡಿದೆ. ಇದೇ ತಿಂಗಳು ಪುನರಾರಂಭ ಮಾಡಲಾಗುತ್ತದೆ. ನವೀಕರಣಕ್ಕೆ ₹9 ಕೋಟಿಯಿಂದ ₹10 ಕೋಟಿ ವೆಚ್ಚವಾಗಿದೆ. ಸಂಪೂರ್ಣ ವೆಚ್ಚವನ್ನು ಬ್ರಿಗೇಡ್ ಫೌಂಡೇಷನ್ ಭರಿಸಿದೆ. ನವೀಕರಣಗೊಂಡ ಈ ಕಟ್ಟಡವನ್ನು ಇಲಾಖೆಗೆ ಬ್ರಿಗೇಡ್ ಫೌಂಡೇಷನ್ ಹಸ್ತಾಂತರಿಸಲಿದೆ. ಈ ಮೊದಲಿನಂತೆ ಸರ್ಕಾರವೇ ನಿರ್ವಹಣೆ ಮಾಡುತ್ತದೆ’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.