ADVERTISEMENT

ಮೆಟ್ರೊ ರೈಲು: ಶಿವಾಜಿನಗರ–ಎಂ.ಜಿ.ರಸ್ತೆ ಸುರಂಗ ಮಾರ್ಗ ಪೂರ್ಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 13:27 IST
Last Updated 15 ಏಪ್ರಿಲ್ 2022, 13:27 IST
ಎಂ.ಜಿ. ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೊ ರೈಲು ನಿಲ್ದಾಣದ ಬಳಿ ಹೊರ ಬಂದ ಟಿಬಿಎಂ ‘ಲಾವಿ’ಯೊಂದಿಗೆ ಕಾರ್ಮಿಕರು ಮತ್ತು ಅಧಿಕಾರಿಗಳು ಸಂಭ್ರಮಿಸಿದರು
ಎಂ.ಜಿ. ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೊ ರೈಲು ನಿಲ್ದಾಣದ ಬಳಿ ಹೊರ ಬಂದ ಟಿಬಿಎಂ ‘ಲಾವಿ’ಯೊಂದಿಗೆ ಕಾರ್ಮಿಕರು ಮತ್ತು ಅಧಿಕಾರಿಗಳು ಸಂಭ್ರಮಿಸಿದರು   

‌ಬೆಂಗಳೂರು: ಶಿವಾಜಿನಗರ ಮತ್ತು ಎಂ.ಜಿ ರಸ್ತೆ ನಡುವಿನ ಮೆಟ್ರೊ ರೈಲು ಮಾರ್ಗಕ್ಕೆ ಸುರಂಗ ಕೊರೆಯುವ ಕಾಮಗಾರಿಯನ್ನು ‌ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ‘ಲಾವಿ’ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಎಂ.ಜಿ. ರಸ್ತೆ ಬಳಿ ಸುರಂಗದಿಂದ ಟಿಬಿಎಂ ಶುಕ್ರವಾರ ಹೊರ ಬಂದಿತು.

ಡೇರಿ ವೃತ್ತದಿಂದ ನಾಗವಾರ ತನಕದ ರೀಚ್ –6 ಮಾರ್ಗದಲ್ಲಿ 13.76 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಶಿವಾಜಿನಗರ ಮೆಟ್ರೊ ರೈಲು ನಿಲ್ದಾಣದಿಂದ ಫೆಬ್ರುವರಿ 10ರಂದು ಹೊರಟ ‘ಲಾವಿ’ ಎಂಬ ಸುರಂಗ ಕೊರೆಯುವ ಯಂತ್ರ, 1,076 ಮೀಟರ್‌ಗಳಷ್ಟು ಉದ್ದದ ಸುರಂಗ ಕೊರೆದಿದೆ.

‘ಈ ಮಾರ್ಗದಲ್ಲಿ ಸುರಂಗ ಕೊರೆಯುವಾಗ ಎದುರಾದ ಬಂಡೆಗಳನ್ನು ಸೀಳಿ ‘ಲಾವಿ’ ತನ್ನ ಕೆಲಸ ಪೂರ್ಣಗೊಳಿಸಿದೆ. 232 ಮೀಟರ್‌ ಉದ್ದದ ಬಂಡೆ ಕೊರೆಯಲಾಗಿದೆ. ಎಂ.ಜಿ. ರಸ್ತೆ ಮತ್ತು ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣಗಳ ನಡುವಿನ ಸುರಂಗ ಕೊರೆಯುವ ಕಾಮಗಾರಿಯನ್ನು ಈ ಯಂತ್ರ ಮುಂದುವರಿಸಲಿದೆ’ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ADVERTISEMENT

ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಗೊಟ್ಟಿಗೆರೆ– ನಾಗವಾರವರೆಗಿನ 21.25 ಕಿ.ಮೀ ಉದ್ದದ ಮಾರ್ಗದಲ್ಲಿ (ರೀಚ್‌ –6 ) ಡೇರಿ ವೃತ್ತದಿಂದ ನಾಗವಾರದವರೆಗೆ 13.76 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲೇ ಅತಿ ಉದ್ದದ ಮೆಟ್ರೊ ಸುರಂಗ ಮಾರ್ಗ. ಒಟ್ಟು 9 ಯಂತ್ರಗಳು ಸುರಂಗ ಕೊರೆಯುವ ಕಾರ್ಯದಲ್ಲಿ ತೊಡಗಿವೆ. ಪ್ರತಿ ದಿನ ಸರಾಸರಿ 3.5 ಮೀ. ಉದ್ದದಷ್ಟು ಸುರಂಗ ಕೊರೆಯಲಾಗುತ್ತಿದೆ. ಎರಡನೇ ಹಂತದ ಮೆಟ್ರೊ ರೈಲು ಮಾರ್ಗದ ಕಾಮಗಾರಿಗಳನ್ನು 2024ರಲ್ಲಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಡುವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.